ಸಾರಾಂಶ
ಸಕಲೇಶಪುರ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆ । ಕಾಫಿ ಬೆಳೆಗಾರರಿಗೆ ಸಂಕಷ್ಟ । ಅನಾವೃಷ್ಟಿಯ ಭೀತಿ
ಶ್ರೀವಿದ್ಯಾಸಕಲೇಶಪುರಕನ್ನಡಪ್ರಭ ವಾರ್ತೆ ಸಕಲೇಶಪುರ
ಕಾಫಿ ಬೆಳೆಗಾರರಿಗೆ ಕಳೆದ ಬಾರಿ ವರವಾಗಿದ್ದ ಮಳೆ ಕೊರತೆ ಈ ಬಾರಿ ಶಾಪವಾಗುವ ಸಾಧ್ಯತೆ ಹೆಚ್ಚಿದೆ. ತಾಲೂಕಿನಲ್ಲಿ ವಾಡಿಕೆ ಮಳೆಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಿನ ಮಳೆಯಾಗುವುದು ಸಾಮಾನ್ಯ. ಇದರಿಂದಾಗಿ ತಾಲೂಕಿನ ಹೆತ್ತೂರು, ಹಾನುಬಾಳ್ ಹೋಬಳಿಯಲ್ಲಿ ವಾಡಿಕೆ ಮಳೆ ೨೧೦೦ ರಿಂದ ೨೩೦೦ ಮೀ.ಮಿ ಎಂದು ನಿಗದಿಪಡಿಸಲಾಗಿದೆ. ಹೋಬಳಿಗಳಲ್ಲಿ ೪.೫೦೦ ರಿಂದ ೫.೫೦೦ ಮೀ.ಮೀಟರ್ ಮಳೆಯಾಗುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಕಡಿಮೆ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸಲಿದ್ದಾರೆ ಎನ್ನಲಾಗಿದೆ.ಪ್ರತಿ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಳ್ಳುತ್ತಿದ್ದ ಬೆಳೆಗಾರರಿಗೆ ಕಳೆದ ವರ್ಷ ತಾಲೂಕಿನ ಇತಿಹಾಸದಲ್ಲೆ ವಾಡಿಕೆಗಿಂತಲು ಕಡಿಮೆ ಮಳೆಯಾಗಿತ್ತು. ಈ ಬೆಳವಣಿಗೆ ಪ್ರತಿ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಳ್ಳುತ್ತಿದ್ದ ತಾಲೂಕಿನ ಬೆಳೆಗಾರರಿಗೆ ವರವಾಗಿ ಕಂಡು ಬಂದಿತ್ತು. ಈ ಬಾರಿ ಮುಂಗಾರು ಸಕಾಲಿಕವಾಗಿ ನಡೆಸದಿದ್ದರೆ ಅತಿವೃಷ್ಟಿ ಹಾನಿಗಿಂತ ಕಾಫಿ ಬೆಳೆಗಾರರು ಅನಾವೃಷ್ಟಿಯ ಪರಿಣಾಮ ತೀವ್ರವಾಗಿ ಅನುಭವಿಸುವುದು ನಿಶ್ಚಿತವಾಗಿದೆ.
ಬತ್ತಿದ ಜಲಮೂಲ:ಈಗಾಗಲೇ ತಾಲೂಕಿನ ಜೀವನದಿ ಹೇಮಾವತಿ ಸೇರಿದಂತೆ ತಾಲೂಕಿನ ಏಳು ಉಪನದಿಗಳು ನೀರಿನ ಹರಿವು ತೀವ್ರ ಪ್ರಮಾಣದಲ್ಲಿ ಕುಸಿತಗೊಳ್ಳುತ್ತಿದೆ. ತಾಲೂಕಿನಲ್ಲಿ ಈಗಾಗಲೇ ೩೪ ರಿಂದ ೩೬ ಡಿಗ್ರಿ ಉಷ್ಣಾಂಶ ದಾಖಲಾಗುತ್ತಿರುವುದರಿಂದ ಕೆರೆಕಟ್ಟೆಗಳ ನೀರು ಸಹ ತೀವ್ರಗತಿಯಲ್ಲಿ ಆವಿಯಾಗುತ್ತಿರುವುದು ಕಾಫಿ ಬೆಳೆಗಾರರಿಗೆ ಆತಂಕ ಮೂಡಿಸಿದೆ. ಸಣ್ಣ ಪ್ರಮಾಣದ ಹಳ್ಳಕೊಳ್ಳಗಳಲ್ಲಿ ಈಗಾಗಲೇ ನೀರಿನ ಹರಿವು ನಿಂತಿದ್ದು ಕೆಲವೆಡೆ ಬೆಳೆಗಾರರು ಹಳ್ಳಕೊಳ್ಳಗಳ ನೀರನ ಹರಿವಿಗೆ ಕಟ್ಟೆ ನಿರ್ಮಿಸಿಕೊಂಡಿದ್ದಾರೆ. ಈ ಕಟ್ಟೆ ಕೆಳಭಾಗದಲ್ಲಿರುವ ಕಾಫಿ ತೋಟ ಹಾಗೂ ಬೇಸಿಗೆ ಬೆಳೆಗಳಿಗೆ ನೀರು ಒದಗಿಸುವುದು ಕಷ್ಟವಾಗಿದೆ.
ಹೊಸತೋಟಗಳ ನಾಶ:ಸಕಲೇಶಪುರ, ಆಲೂರು, ಬೇಲೂರು ತಾಲೂಕಿನಲ್ಲಿ ಬಾರಿ ಪ್ರಮಾಣದಲ್ಲಿ ಹೊಸ ತೋಟಗಳ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಹೊಸತೋಟಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಆದರೆ, ಜಲಮೂಲಗಳೆಲ್ಲ ನೀರಿನ ಸೆಲೆಯ ಕೊರತೆ ಎದುರಿಸುತ್ತಿರುವುದರಿಂದ ಕಾಫಿಗಿಡಗಳೆಲ್ಲ ಎಲೆಗಳನ್ನು ಇಳಿಬಿಟ್ಟು ನೀರಿಗಾಗಿ ಕಾಯುತಿದ್ದು ಇನ್ನು ಕೆಲವೇ ದಿನಗಳಲ್ಲಿ ಸಮರ್ಪಕವಾಗಿ ನೀರು ಒದಗಿಸದಿದ್ದರೆ ಈ ಮೂರು ತಾಲೂಕುಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ೭೫೬೦ ಎಕರೆ ಕಾಫಿತೋಟಗಳು ನಾಶವಾಗುವುದು ನಿಶ್ಚಿತ ಎಂದು ಕಾಫಿ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.
ಮೆಣಸಿಗೂ ನೀರಿನ ಕೊರತೆ:ಹೆಚ್ಚಿನ ನೀರಿನ ಅವಶ್ಯಕತೆ ಇರುವ ಕಾಳುಮೆಣಸಿನ ಬಳ್ಳಿಗಳ ಕೊಯ್ಲು ನಡೆಸುತ್ತಿರುವ ಕರಿಮೆಣಸಿನ ತೂಕ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ. ಈ ಬಾರಿ ನೀರಿನ ತೀವ್ರ ಕೊರತೆ ಎದುರಾಗಿರುವುದರಿಂದ ಸಾಕಷ್ಟು ಮೆಣಸಿನ ಬಳ್ಳಿಗಳು ಈಗಾಗಲೇ ವಿವಿಧ ರೋಗಗಳಿಗೆ ತುತ್ತಾಗಿ ನಾಶವಾಗುತ್ತಿವೆ.
ಬೆಳೆಗಾರರಿಗೆ ನೆಮ್ಮದಿ:ಈಗಾಗಲೇ ಕಾಫಿ ಫಸಲು ಮುಗಿಸಿ ಕಾಳು ಮೆಣಸಿನ ಕೊಯ್ಲಿನಲ್ಲಿ ತೊಡಗಿರುವ ಬೆಳೆಗಾರರಿಗೆ ಇನ್ನೂಂದು ವಾರದಲ್ಲಿ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮುಂಗಾರು ಸುರಿದರೆ ಕಾಫಿ ಬೆಳೆಗಾರರು ಎಲ್ಲ ವಿಧದ ಸಂಕಷ್ಟದಿಂದ ಪಾರಾಗಲಿದ್ದಾರೆ. ಈಗಾಗಲೇ ನೀರಿನ ಕೊರತೆ ಎದುರಿಸುತ್ತಿರುವ ಸಾಕಷ್ಟು ಕಾಫಿ ಬೆಳೆಗಾರರು ಹನಿ ನೀರಾವರಿ ಮಾಡಲಾಗದೆ ಪರಿತಪಿಸುತ್ತಿದ್ದು ಈ ಬೆಳೆಗಾರರಿಗೆ ಮಳೆಯಾದರೆ ಕಾಫಿ ತೋಟಗಳ ಉಳಿವಿಗೆ, ಮುಂದಿನ ಹಂಗಾಮಿನ ಫಸಲಿಗೆ ಅನುಕೂಲವಾಗಲಿದೆ.
ಕಾಫಿಬೆಳೆಗಾರರಿಗೆ ಈ ವಾರದಲ್ಲಿ ಮಳೆಯ ಅವಶ್ಯಕತೆ ಇದೆ. ಶೀಘ್ರವೇ ಮಳೆಯಾದರೆ ಕಾಫಿ ಬೆಳೆಗಾರರು ಸಂತಸ ಪಡಲಿದ್ದಾರೆ. ಬಸವರಾಜು. ಎಸ್‌ಎಲ್‌ಒ, ಕಾಫಿ ಮಂಡಳಿ ಮಠಸಾಗರ.ನೀರಿನ ಕೊರತೆ ಕಾರಣ ಮುಂದಿನ ತಿಂಗಳಿಂದ ಹನಿ ನೀರಾವರಿ ವ್ಯವಸ್ಥೆ ಮಾಡಲು ಚಿಂತಿಸಿದ್ದೇನೆ. ಆದರೆ ಕೆರೆಯಲ್ಲಿ ನೀರು ಆವಿಯಾಗುತ್ತಿದ್ದು ಏನು ಮಾಡುವುದು ಎಂದು ತೋಚದಾಗಿದೆ.
ಸುಪ್ರದೀಪ್ತ್ ಯಜಮಾನ್. ಕಾಫಿ ಬೆಳೆಗಾರ. ಮಳಲಿ ಗ್ರಾಮ.ಹನಿ ನೀರಾವರಿ ಮೂಲಕ ಸಕಲೇಶಪುರದಲ್ಲಿ ಕಾಫಿ ಗಿಡದಲ್ಲಿ ಹೂವು ಆರಳಿಸಿರುವುದು.