ಮಳೆ ಕೊರತೆ: 40ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ

| Published : Nov 10 2023, 01:02 AM IST / Updated: Nov 10 2023, 01:03 AM IST

ಮಳೆ ಕೊರತೆ: 40ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡ ಗಡಿಯಲ್ಲಿರುವ ತಾಲೂಕಿನ 166 ಗ್ರಾಮಗಳಲ್ಲಿ ಮಳೆ ಕೊರತೆ, ಅಂತರ್ಜಲ ಸಮಸ್ಯೆಯಿಂದ 40ಕ್ಕೂ ಅಧಿಕ ಗ್ರಾಮಗಳು ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬಹುದೆಂದು ನಿರೀಕ್ಷಿಸಲಾಗಿದ್ದು, ಇದಕ್ಕಾಗಿ ಖಾಸಗಿಯವರ ಕೊಳವೆ ಬಾವಿ ಅವಲಂಬಿಸುವುದು ಅನಿವಾರ್ಯವಾಗಿದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಮಲೆನಾಡ ಗಡಿಯಲ್ಲಿರುವ ತಾಲೂಕಿನ 166 ಗ್ರಾಮಗಳಲ್ಲಿ ಮಳೆ ಕೊರತೆ, ಅಂತರ್ಜಲ ಸಮಸ್ಯೆಯಿಂದ 40ಕ್ಕೂ ಅಧಿಕ ಗ್ರಾಮಗಳು ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬಹುದೆಂದು ನಿರೀಕ್ಷಿಸಲಾಗಿದ್ದು, ಇದಕ್ಕಾಗಿ ಖಾಸಗಿಯವರ ಕೊಳವೆ ಬಾವಿ ಅವಲಂಬಿಸುವುದು ಅನಿವಾರ್ಯವಾಗಿದೆ.

ಕೃಷಿಯನ್ನೇ ಅವಲಂಬಿಸಿದ ತಾಲೂಕಿನಲ್ಲಿ 2.60 ಲಕ್ಷ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ವಿವಿಧ ಗ್ರಾಮಗಳಲ್ಲಿ 780 ಕೊಳವೆ ಬಾವಿಗಳಿಂದ ನೀರನ್ನು ಒದಗಿಸಲಾಗುತ್ತಿದೆ. ನೂರಕ್ಕೂ ಅಧಿಕ ಕೊಳವೆ ಭಾವಿಗಳಲ್ಲಿ ಈಗಾಗಲೇ ನೀರು ಕಡಿಮೆಯಾಗಿದ್ದು, ಜನವರಿ ಹೊತ್ತಿಗೆ ಬಹುತೇಕ ಕೊಳವೆ ಬಾವಿಗಳಲ್ಲಿ ನೀರಿಲ್ಲದಂತಾಗುವ ಸಾಧ್ಯತೆ ಇದೆ. ಕಳೆದ ವರ್ಷ ತಾಲೂಕಿನ 20 ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆಯಾಗಿ ಇದಕ್ಕಾಗಿ ಮತ್ತೆ 60ಕ್ಕೂ ಅಧಿಕ ಹೊಸ ಕೊಳವೆ ಬಾವಿಗಳನ್ನು ಕೊರೆದು ನೀರು ಪೂರೈಸಲಾಗಿದೆ.

ಬಹುಗ್ರಾಮ ಯೋಜನೆ:

ತಾಲೂಕಿನ ಚಿಕ್ಕಾಂಸಿ ಹೊಸೂರು, ಕೂಸನೂರು, ಉಪ್ಪಣಸಿ ಗ್ರಾಮಗಳಲ್ಲಿರುವ, ವರದಾ ನದಿಯ ನೀರನ್ನು ಅವಲಂಬಿಸಿದ 4 ಬಹುಗ್ರಾಮ ಯೋಜನೆಗಳಿಂದ 28 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗಳು ಇವೆ. ಗೊಂದಿ, ಹಿರೇಕಾಂಸಿ, ಚಿಕ್ಕಾಂಸಿ ಹೊಸುರು, ಶಿರಗೋಡ, ಅಜಗುಂಡಿಕೊಪ್ಪ, ಮುಂತಾದ ಗ್ರಾಮಗಳು ಈ ವ್ಯಾಪ್ತಿಯಲ್ಲಿವೆ. ಆದರೆ ವರದಾ ನದಿಯಲ್ಲಿ ಈಗ ನೀರು ಕಾದಿರಿಸಲಾಗಿದೆಯಾದರೂ ಜನವರಿ ಹೊತ್ತಿಗೆ ಈ ನೀರು ಖಾಲಿಯಾಗುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿರುವ ಕೊಳವೆ ಬಾವಿಗಳು ಕೂಡ ನೀರು ಕೊಡಲಾಗದಿದ್ದರೆ ಖಾಸಗಿಯವರ ಕೊಳವೆ ಬಾವಿಗಳನ್ನೆ ಅವಲಂಬಿಸಬೇಕಾದ ಸ್ಥಿತಿ ಇದೆ. ಕೆಲವು ಗ್ರಾಮಗಳಿಗೆ ಟ್ಯಾಂಕರ್‌ನಿಂದ ನೀರೊದಗಿಸುವ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ.

ಅಂತರ್ಜಲ ಮಟ್ಟ ಕುಸಿತ:

ತಾಲೂಕಿನ ಕೆಲವೆಡೆ ಅಂತರ್ಜಲ ಮಟ್ಟ 500 ಅಡಿಗಳಿಗಿಂತಲೂ ಕೆಳಗೆ ಹೋಗಿದೆ. ಈಗಾಗಲೇ ಗ್ರಾಮೀಣ ಕುಡಿಯುವ ನೀರಿಗಾಗಿ ಬಳಸುತ್ತಿರುವ ಕೊಳವೆ ಬಾವಿಗಳಲ್ಲಿ ನೀರು ಇಲ್ಲದಾದರೆ, ಅದೇ ಕೊಳವೆ ಬಾವಿಗಳನ್ನು ಇನ್ನಷ್ಟು ಆಳಕ್ಕೆ ಕೊರೆದು ನೀರು ತೆಗೆಯುವ ಯೋಜನೆ ಇಲಾಖೆಗಿದೆ.

ತಡಸ ಬಹುಗ್ರಾಮ ಯೋಜನೆ:

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಡಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಚಾಲನೆಯಲ್ಲಿದ್ದು, ಇದರಿಂದ ತಾಲೂಕಿನ 112 ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ನೀರು ಪೂರೈಸಲಾಗುತ್ತದೆ.

ಹಿರೇಕೆರೂರು ತಾಲೂಕಿನ ಚಟ್ನಳ್ಳಿ ಬಳಿ ಇನ್ನೊಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದು ಕೂಡ ತುಂಗಭದ್ರಾ ನದಿಯ ನೀರನ್ನು ಅವಲಂಬಿಸಿದೆ. ಹಾನಗಲ್ಲ ತಾಲೂಕಿನ 16 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಈ ಎರಡೂ ಯೋಜನೆಗಳು ಸಕಾಲಿಕವಾಗಿ ಕಾಮಗಾರಿ ಮುಗಿದು ನೀರೊದಗಿಸಲು ಸಾಧ್ಯವಾದರೆ ಹಾನಗಲ್ಲ ತಾಲೂಕು ಬಹುತೇಕ ಕುಡಿಯುವ ನೀರಿನ ಸಮಸ್ಯೆಯಿಂದ ಶಾಸ್ವತವಾಗಿ ಮುಕ್ತವಾಗಬಹುದು. ಈ 128 ಗ್ರಾಮಗಳನ್ನು ಹೊರತುಪಡಿಸಿ ಉಳಿದ ಗ್ರಾಮಗಳು ಹಾಗೂ ಹಾನಗಲ್ಲ ಪಟ್ಟಣಕ್ಕೆ ಧರ್ಮಾ ಜಲಾಶಯದಿಂದ ಕುಡಿವ ನೀರು ಸರಬರಾಜು ಮಾಡಬಹುದಾಗಿದೆ. ಇದಕ್ಕಾಗಿ ಹೊಸ ಯೋಜನೆಯೇ ರೂಪುಗೊಳ್ಳಬೇಕು.

ಮಳೆ ಅಭಾವದಿಂದ ನೀರಿನ ಕೊರತೆ ಬಗೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ನೀರಿನ ಹಿತ ಮಿತ ಬಳಕೆಗೆ ಸೂಚಿಸಲಾಗಿದೆ. ಗ್ರಾಪಂಗಳು ಕೂಡ ಹೆಚ್ಚು ಮುತವರ್ಜಿಯಿಂದ ನೀರನ್ನು ಉಳಿಸಿ ಬಳಸಲು ಮಾಹಿತಿ ನೀಡಲಾಗಿದೆ. 30ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಎಲ್ಲ ಹಳ್ಳಿಗಳಲ್ಲಿಯೂ ನೀರಿನ ಕೊರತೆಯಾಗದಂತೆ ಕ್ರಮ ಜರುಗಿಸಲಾಗುವುದು ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ನೆಗಳೂರು.