ಮಳೆ ಬಾರದೆ ಇರುವುದರಿಂದ ಬನವಾಸಿ ಪೂರ್ವ ಭಾಗದ ರೈತರು ಕಂಗಾಲಾಗಿದ್ದಾರೆ.
ಭತ್ತದ ನಾಟಿ ಕಾರ್ಯಕ್ಕೆ ಮುಂದೆ ಸಾಗುವುದು ಹೇಗೆ?
3,500 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡುವುದು ಬಾಕಿಶಂಕರ್ ಜಿ. ಜಾವೂರ
ಕನ್ನಡಪ್ರಭ ವಾರ್ತೆ ಶಿರಸಿಮಳೆ ಬಾರದೆ ಇರುವುದರಿಂದ ಬನವಾಸಿ ಪೂರ್ವ ಭಾಗದ ರೈತರು ಕಂಗಾಲಾಗಿದ್ದಾರೆ.
ಈಗಾಗಲೇ ರೈತರು ತಮ್ಮ ಜಮೀನುಗಳನ್ನು ಸ್ವಚ್ಛಗೊಳಿಸಿ ಭತ್ತದ ನಾಟಿ ಮಾಡಲು ಪ್ರತಿ ವರ್ಷದಂತೆ ಈ ವರ್ಷವೂ ಸಿದ್ಧ ಮಾಡಿಕೊಳ್ಳುತ್ತಿದ್ದರು. ಆದರೆ ಮಳೆಯ ಅಭಾವದಿಂದ ಈ ಭಾಗದ ರೈತರು ಇದುವರೆಗೂ ತಮ್ಮ ಜಮೀನಿನ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿಲ್ಲ.ದಾಸನಕೊಪ್ಪ, ಬಿಸಲಕೊಪ್ಪ, ಅಂಡಗಿ, ರಾಮಾಪುರ, ಮರಗುಂಡಿ, ದೊಡ್ನಳ್ಳಿ, ಬದನಗೋಡು, ಕಾಳಂಗಿ, ದನಗನಹಳ್ಳಿ , ಕೊರ್ಲಕಟ್ಟ, ಉಂಚಳ್ಳಿ ಮತ್ತು ಕುಂಬಾರ ಕಟ್ಟಿಕೆರೆ, ಹಿರೇಕೆರೆ ಕೆರೆ ಮುಂತಾದ ಕಡೆಗಳಲ್ಲಿ ಮಳೆ ಕೊರತೆ ಇದೆ.
ಒಂದು ವೇಳೆ ಮಳೆಯಾಗದೆ ಹೀಗೆ ಮುಂದುವರಿದರೆ ರೈತರು ಭತ್ತದ ನಾಟಿ ಕಾರ್ಯಕ್ಕೆ ಮುಂದೆ ಸಾಗುವುದು ಹೇಗೆ ಎಂಬ ಚಿಂತೆ ಒಂದು ಕಡೆ ಆದರೆ, ಇನ್ನೊಂದು ಕಡೆ ಈ ಭಾಗದ ರೈತರು ಈಗಾಗಲೇ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬಿತ್ತನೆ ಮಾಡಿದ್ದಾರೆ. ಅಂತಹ ರೈತರ ಪರಿಸ್ಥಿತಿ ಏನಾಗಬಹುದೆಂದು ಪ್ರಶ್ನೆ ರೈತ ವಲಯವನ್ನು ಕಾಡುತ್ತಿದೆ.ಭತ್ತ ಬಿತ್ತನೆ ಮಾಡಿದ ಸಾವಿರಾರು ಹೆಕ್ಟೇರ್ ಪ್ರದೇಶದ ಪೈರು ಒಣಗಿ ನಾಶವಾಗುವ ಆತಂಕದಲ್ಲಿ ಈ ಭಾಗದ ರೈತರಿದ್ದಾರೆ. ಇನ್ನು 3,500 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡುವುದು ಬಾಕಿ ಇದೆ. ಆದರೆ ಈಗಲೇ ರೈತರಿಗೆ ಬರಗಾಲದ ಆತಂಕ ಸೃಷ್ಟಿಯಾಗಿದೆ.
ಈ ಭಾಗದ ಜನರು ಮಳೆಯನ್ನೇ ಅವಲಂಬಿಸಿರುವುದರಿಂದ ರೈತರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಮಳೆಗಾಲ ಬಂದಾಗಿನಿಂದಲೂ ಶಿರಸಿ ತಾಲೂಕಿನಲ್ಲಿ ಇದುವರೆಗೂ ಉತ್ತಮ ಮಳೆಯಾಗಿಲ್ಲ. ಹೀಗಾಗಿ ಇಲ್ಲಿನ ಕೆರೆಕಟ್ಟೆಗಳು ಇದುವರೆಗೂ ಭರ್ತಿಯಾಗಿಲ್ಲ.ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಮಳೆಮಾಪನಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ದುರಸ್ತಿಗೊಳಿಸಿ ರೈತರಿಗೆ ಸರಿಯಾದ ಸಮಯದಲ್ಲಿ ವಿಮೆಯ ಪರಿಹಾರದ ಹಣ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಮುತುವರ್ಜಿವಹಿಸಿ ರೈತರ ಹಿತವನ್ನು ಕಾಪಾಡಬೇಕೆಂದು ಬನವಾಸಿ ಪೂರ್ವ ಭಾಗದ ರೈತರು ಒತ್ತಾಯಿಸಿದ್ದಾರೆ.ಕಳೆದ ನಾಲ್ಕು ದಿನಗಳಿಂದ ಮಳೆ ಕೊರತೆ ಎದ್ದು ಕಾಣುತ್ತಿದೆ. ಈಗಾಗಲೇ ರೈತರು ಸುಮಾರು ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಬಿತ್ತನೆ ಮಾಡಿದ್ದಾರೆ. ಇನ್ನು 3500 ಪ್ರದೇಶದಲ್ಲಿ ನಾಟಿ ಮಾಡುವ ಕಾರ್ಯ ಬಾಕಿ ಉಳಿದಿದೆ. ಮುಂದೆ ಹೆಚ್ಚಿನ ಮಳೆಯಾದರೆ ರೈತರಿಗೆ ನಾಟಿ ಕಾರ್ಯ ಮಾಡಲು ಅನುಕೂಲವಾಗುತ್ತದೆ. ಒಂದು ವೇಳೆ ಹೀಗೆ ಮುಂದುವರಿದರೆ ನಾಟಿ ಮಾಡಲು ಹಿನ್ನಡೆ ಆಗಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಮಧುಕರ್ ನಾಯ್ಕ್ ತಿಳಿಸಿದ್ದಾರೆ.