ಮಳೆ ಕೊರತೆ : ತರೀಕೆರೆ- ಅಜ್ಜಂಪುರದಲ್ಲಿ ತೀವ್ರ ಬರ

| Published : Nov 04 2023, 11:45 PM IST

ಮಳೆ ಕೊರತೆ : ತರೀಕೆರೆ- ಅಜ್ಜಂಪುರದಲ್ಲಿ ತೀವ್ರ ಬರ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ಕೊರತೆ : ತರೀಕೆರೆ- ಅಜ್ಜಂಪುರದಲ್ಲಿ ತೀವ್ರ ಬರ
ಅನಂತ ನಾಡಿಗ್ ಕನ್ನಡಪ್ರಭ ವಾರ್ತೆ, ತರೀಕೆರೆ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಾದ್ಯಂತ ತೀವ್ರ ಬರಗಾಲ ತಲೆದೋರಿದೆ. ಮುಂಗಾರು ಹಿಂಗಾರು ಮಳೆಯಾಗದೆ ಕೆರೆ ಕಟ್ಟೆ, ಹೊಳೆ ಹಳ್ಳಗಳಲ್ಲಿ ಬಾವಿಗಳಲ್ಲಿ ಜಲ ತೊರೆಗಳಲ್ಲಿ ಸಣ್ಣ ಪುಟ್ಟ ಜಲಾಶಯ, ಬೋರ್ವೆಲ್ ಗಳಲ್ಲಿ ಇದ್ದ ಅಲ್ಪಸ್ವಲ್ಪ ನೀರೆಲ್ಲಾ ಖಾಲಿಯಾಗುತ್ತಿದೆ. ತಾಲೂಕಿನಲ್ಲಿ ದಿನ ವಾಡಿಕೆ ಮಳೆಯೂ ಬಾರದೆ ಎಲ್ಲಡೆ ಬರಗಾಲ ವ್ಯಾಪಿಸಿ ಬೇಸಿಗೆ ಕಾಲ ನೆನಪಿಸುವಂತಹ ಬಿಸಿಲಿನ ಬೇಗೆ ಆವರಿಸಿದ್ದು, ಇಂದಲ್ಲಾ ನಾಳೆ ಮಳೆ ಬರಬಹುದು ಎಂಬ ನಿರೀಕ್ಷೆ ಹುಸಿಯಾಗತೊಡಗಿದೆ. ಮಳೆಯೇ ಬಂದಿಲ್ಲ: ತರೀಕೆರೆ ತಾಲೂಕಿನಲ್ಲಿ ಪ್ರಸಕ್ತ ವರ್ಷದ ಜೂನ್ ನಿಂದ ನವೆಂಬರ್ ವರೆಗೆ ಭೂಮಿ ಚೆನ್ನಾಗಿ ತನುವಾಗಿ ನೀರು ಕುಡಿದು ಮಳೆಯಾಶ್ರಿತ ಬೆಳೆಗಳಿಗೆ, ಕೆರೆ ಕಟ್ಟೆಗಳಿಗೆ ಸಣ್ಣ ಪುಟ್ಟ ಹಳ್ಳ ಕೊಳ್ಳಗಳಲ್ಲಿ ಜಲಾಶಯಗಳಲ್ಲಿ ನೀರು ಸಂಗ್ರಹವಾಗಬೇಕಿತ್ತು. ಕೆರೆಗಳಲ್ಲಿ ಕೋಡಿ ಬಿದ್ದು ನೀರು ಹರಿದಾಡಬೇಕಿತ್ತು, ಭೂಮಿ ಹಸಿರಾಗಿ ಜಾನುವಾರುಗಳಿಗೆ ಹೊಸ ಚಿಗುರು ಕಾಣಿಸಿಕೊಂಡು ಮೇವು ದೊರಕಬೇಕಾಗಿತ್ತು. ಆದರೆ ಈ ಸಾರಿ ಈ ಪರಿಸ್ಥಿತಿ ಕಂಡು ಬರುತ್ತಿಲ್ಲ, ಜೂನ್‌ನಿಂದ ನವೆಂಬರ್‌ವರೆಗಿನ ಮಳೆ ಅಂಕಿ ಅಂಶ ಗಮನಿಸಿದರೆ ಶೇ.70 ರಿಂದ 80 ರಷ್ಟು ಮಳೆಯೇ ಬಂದಿಲ್ಲ, ತಾಲೂಕಿನಲ್ಲಿ 845 ಮಿಮಿ ವಾಡಿಕೆ ಮಳೆ ಬರಬೇಕಿತ್ತು, ಆದರೆ ಮಳೆಯ ಸುಳಿವೇ ಇಲ್ಲ, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಮುಂಗಾರು ಮಳೆಯಿಂದ ಕೆರೆ ಕಟ್ಟೆಗಳೆಲ್ಲಾ ಭರ್ತಿಯಾಗಬೇಕಿತ್ತು, ಆದರೆ ಧಟ್ಟ ಮೋಡ ಮತ್ತು ಮಳೆಯ ಬದಲು ಬೇಸಿಗೆ ನೆನಪಿಸುವ ಬಿಸಿಲಿನ ಝಳ ಎಲ್ಲಡೆ ವ್ಯಾಪಿಸಿದೆ. ತಾಲೂಕಿನಲ್ಲಿ ಆಯಾ ದಿನಗಳಲ್ಲಿ ಸುರಿಯಬೇಕಾದ ಮಳೆ ಇಲ್ಲದೆ ಬೆಳೆಗಳು ನಾಶವಾಗಿದೆ. ಮುಂಗಾರು ಮಳೆ ಪ್ರಾರಂಭದ ದಿನಗಳಲ್ಲಿ ಭೂಮಿ ಹಸನುಗೊಳಿಸಿ, ಆಯಾ ಕೃಷಿ ಭೂಮಿಗೆ ತಕ್ಕ ಹಾಗೆ ಬಿತ್ತನೆ ಬೀಜ, ಗೊಬ್ಬರ. ಔಷಧ ಇತ್ಯಾದಿ ಕೃಷಿಪರ ಪರಿಕರಗಳ ಸಿದ್ಧತೆ ಮಾಡಿಕೊಂಡಿದ್ದ ರೈತರು ಮಳೆ ಬಾರದೆ ನಿರಾಶರಾಗಿರುವುದು ಒಂದು ಕಡೆಯಾದರೆ, ಮತ್ತೊಂದಡೆ ಅಲ್ಲಲ್ಲಿ ಬಂದ ಅಲ್ಪಸ್ವಲ್ಪ ಮಳೆ ನಂಬಿಕೊಂಡು ವ್ಯವಸಾಯ ಮಾಡಿ ಭೂಮಿಗೆ ಬಿತ್ತಿದ ಬೀಜಗಳಲ್ಲೆ ನಾಶವಾಗಿ ಬೆಳೆ ನಷ್ಟವಾಗಿದೆ. ಮುಸುಕಿನ ಜೋಳ, ರಾಗಿ, ಈರುಳ್ಳಿ, ಆಲೂಗೆಡ್ಡೆ ಮತ್ತು ಸಣ್ಣಪುಟ್ಟ ದ್ವಿದಳ ಧಾನ್ಯಗಳು, ಎಣ್ಣೆಕಾಳು ಮತ್ತು ಶೇಂಗಾ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಮಳೆಯಾಶ್ರಿತ ಪ್ರಮುಖ ಬೆಳೆಯಾಗಿದ್ದು, 2150 ಹೆಕ್ಟೇರ್ ಪ್ರದೇಶಗಳಲ್ಲಿ ಮುಸುಕಿನ ಜೋಳ ಮತ್ತು 2215 ಹೆಕ್ಕೇರ್ ಪ್ರದೇಶಗಳಲ್ಲಿ ರಾಗಿ ಬೆಳೆಯ ಬೇಕಾಗಿತ್ತು ಮಳೆ ಅಭಾವದಿಂದ ಈ ಬೆಳೆಗಳನ್ನು ಬೆಳೆಯಲಾಗಿಲ್ಲ ಮತ್ತು ಬೆಳೆ ನಷ್ಟವಾಗಿದೆ. ಇನ್ನು ಈರುಳ್ಳಿ ಆಲುಗೆಡ್ಡೆ ಬೆಳೆಗೂ ಇದೇ ಪರಿಸ್ಥಿತಿ ಒದಗಿದೆ, ಮಳೆ ಅಭಾವದಿಂದ ಈ ಬಾರಿ ಜಾನುವಾರುಗಳಿಗೂ ಹಸಿರು ಮೇವಿನ ತೀವ್ರ ಅಭಾವ ಮತ್ತು ಬರ ಪರಿಸ್ಥಿತಿ ಎದುರಾಗಿದೆ. ತರೀಕೆರೆ ತಾಲೂಕಿನ ವಾರ್ಷಿಕ ವಾಡಿಕೆ ಮಳೆ 919 ಮಿ.ಮೀಟರ್. ಆದರೆ ಜೂನ್ -ಸೆಪ್ಟಂಬರ್ ವರೆಗೆ 596 ಮಿಮೀ ಅಗತ್ಯವಿದ್ದು, ಈವರೆಗೆ 423 ಮಿ.ಮೀಟರ್ ಮಾತ್ರ ಮಳೆ ಬಿದ್ದಿದೆ. ಶೇ.29 ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್ ನಲ್ಲಿ ಕೃಷಿ ಬೆಳೆಗಳಿಗೆ ಮಳೆ ಅವಶ್ಯ. 174 ಎಂ.ಎಂ. ವಾಡಿಕೆ ಮಳೆ, ಆದರೆ 35 ಮಿ.ಮೀ ಮಾತ್ರ ಆಗಸ್ಟ್ ತಿಂಗಳಲ್ಲಿ ಮಳೆಯಾಗಿ ಶೇ. 80 ರಷ್ಟು ಮಳೆ ಕೊರತೆಯಾಗಿದೆ. ಅಕ್ಟೋಬರ್ ನಲ್ಲಿ 126 ಮಿ.ಮಿ.ವಾಡಿಕೆ ಮಳೆ ಆದರೆ ಕೇವಲ 37 ಮಿ.ಮಿ. ಮಳೆ ಬಿದ್ದಿದ್ದು ಶೇ.71 ರಷ್ಟು ಮಳೆ ಕೊರತೆಯಾಗಿದೆ. ತರೀಕೆರೆ ತಾಲೂಕಿನಲ್ಲಿ ರಾಗಿ -2275 ಹೆ. ಮೆಕ್ಕೆಜೋಳ- 2150 ಹೆ., ಆಲೂಗಡ್ಡೆ -795 ಹೆ. ಒಟ್ಟು 5220 ಹೆ. ಬೆಳೆಹಾನಿ ಹಾಗೂ 4425 ಹೆ.ಪ್ರದೇಶದ ಕೃಷಿ ಬೆಳೆಗಳು ಸೇರಿವೆ. ಅಜ್ಜಂಪುರ ತಾಲೂಕಿನ ಕೃಷಿ ಬೆಳೆಗಳು 9638 ಹೆ, ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಮಾಡಲಾಗಿದೆ. ಕೇಂದ್ರದ ಎನ್.ಡಿ.ಆರ್.ಎಫ್ ಹಾಗೂ ರಾಜ್ಯ ಸರ್ಕಾರದ ಎಸ್.ಡಿ ಆರ್.ಎಫ್ ಮಾರ್ಗಸೂಚಿ ಅನ್ವಯ ಪರಿಹಾರವನ್ನು ರೈತರಿಗೆ ನೇರವಾಗಿ ಎಫ್ಐಡಿ, ನಂಬರ್ ಗೆ ಲಿಂಕ್ ಆಗಿರುವ ಖಾತೆಯ ಮೂಲಕ ಪಾವತಿಸಲಾಗುವುದು ಎಂದು ತರೀಕೆರೆ ತಾ. ಸಹಾಯಕ ಕೃಷಿ ನಿರ್ದೇಶಕ ಲೋಕೇಶಪ್ಪ ತಿಳಿಸಿದ್ದಾರೆ. ಹಿಂಗಾರು ಬೆಳೆಗಳಲ್ಲಿ ಸಾಧ್ಯವಾದಷ್ಟು ರೈತರು ಬರ ನಿರೋಧಕ ತಳಿಗಳು ಉದಾಃ ಕಡಲೆ ಬೆಳೆಯಲ್ಲಿ ಜಾಕಿ-9218, ಮಾಲ್ದಂಡೆ-ಎಂ-35 ಬೆಳೆಗಳನ್ನು ಬಿತ್ತನೆ ಮಾಡುವುದು, ಲಭ್ಯವಿರುವ ನೀರಿನ ಸಮರ್ಪಕ ಬಳಕೆ ಮತ್ತು ತುಂತುರು ನೀರಾವರಿ ಘಟಕಗಳನ್ನು ಇಲಾಖೆ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಕೃಷಿ ಅಧಿಕಾರಿಗಳು ಕೋರಿದ್ದಾರೆ. ---ಕೋಟ್--- ಸಮೀಪದ ಭದ್ರಾ ನದಿಯಿಂದ ಕಾಲುವೆಗಳ ಮೂಲಕ 2.4. ಟಿಎಂಸಿ ನೀರು ಹರಿಸಲು ರಾಜ್ಯ ಸರ್ಕಾರ ಸಮ್ಮತಿಸಿದ್ದು ಇದರಿಂದ ಬರಪೀಡಿತ ಪ್ರದೇಶವಾದ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ರೈತರಿಗೆ ಹಾಗೂ ಜಾನುವಾರುಗಳಿಗೂ ನೀರು ದೊರಕುತ್ತದೆ. ರಾಜ್ಯ ಸರ್ಕಾರ ಬರ ಪರಿಹಾರ ಹಣ ಮಂಜೂರು ಮಾಡಿದೆ. ಕೇಂದ್ರ ಸರ್ಕಾರ ಬರ ಪರಿಹಾರ ಬಗ್ಗೆ ಅನುದಾನ ನೀಡಿಲ್ಲ, ಬೆಳೆ ನಷ್ಟದ ಪಟ್ಟಿ ಸಿದ್ಧವಿದೆ ಪರಿಹಾರ ಬಂದ ಕೂಡಲೇ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು. ಅಲ್ಲದೆ ಬರ ಪರಿಹಾರ ಕುರಿತು ಎರಡು ಬಾರಿ ಅಧಿಕಾರಿಗಳ ಸಭೆಗಳನ್ನು ನಡೆಸಲಾಗಿದೆ. ಜಿ.ಎಚ್, ಶ್ರೀನಿವಾಸ್ ಶಾಸಕರು 4ಕೆಟಿಆರ್.ಕೆ.1ಃ ಶೇಂಗಾ ಬೆಳೆ ನಾಶವಾಗಿರುವುದು 4ಕೆಟಿಆರ್.ಕೆ.2ಃ ಈರುಳ್ಳಿ ಬೆಳೆ ನಾಶವಾಗಿರುವುದು. 4ಕೆಟಿಆರ್.ಕೆ.3ಃ ಶಾಸಕ ಜಿ.ಹೆಚ್.ಶ್ರೀನಿವಾಸ್,. 4ಕೆಟಿಆರ್.ಕೆ.4ಃ ಲೋಕೇಶಪ್ಪ ಸಹಾಯಕ ಕೃಷಿ ನಿರ್ದೇಶಕರು, ತರೀಕೆರೆ