ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕಾದ ಅನಿವಾರ್ಯತೆ ಇದೆ. ನೀಡಿದ ಭರವಸೆಗಳನ್ನು ಈಡೇರಿಸಬೇಕಾಗಿದೆ. ರಾಜ್ಯದ ಸಂಪನ್ಮೂಲದ ಹೆಚ್ಚು ಭಾಗ ಗ್ಯಾರಂಟಿ ಯೋಜನೆಗಳಿಗೆ ವ್ಯಯ ಆಗುತ್ತಿರುವುದರಿಂದ ಸರ್ಕಾರದಲ್ಲಿ ಹಣ ಇಲ್ಲದಂತಾಗಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ತಾಲೂಕಿನ ಪಾಡಿಗಟ್ಟೆ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರೈತ ಸಮುದಾಯದ ಅಭಿವೃದ್ಧಿಗೆ ಕೆರೆಗಳು, ಚೆಕ್ ಡ್ಯಾಂಗಳ ಅಗತ್ಯವಿದೆ. ಆ ಕೆಲಸವನ್ನು ಕ್ಷೇತ್ರದಲ್ಲಿ ಮಾಡಲಾಗುತ್ತಿದೆ. ಮಳೆ ಕೈಕೊಟ್ಟಾಗ ರೈತರು ಪರಿತಪಿಸುವಂತಾಗಬಾರದು. ಅವರು ನಮ್ಮ ಭದ್ರತೆಯನ್ನು ಕಾಪಾಡಿಕೊಳ್ಳಲು ಕೆರೆಗಳು ಮತ್ತು ಚೆಕ್ ಡ್ಯಾಂಗಳು ಅಗತ್ಯವಾಗಿವೆ. ಅಂತಹ ಕಾರ್ಯಕ್ಕೆ ಆದ್ಯತೆಯ ಮೇಲೆ ಕೆಲಸ ಮಾಡುತ್ತಿದ್ದೇನೆ ಎಂದರು.ಎಂತಹ ಸಂದರ್ಭ ಬಂದರೂ ರೈತರು ಎದೆಗುಂದದೆ ಇರಬೇಕು. ಅವರು ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕಬಾರದು. ರೈತರು ವಿದ್ಯುತ್, ನೀರು ಕೊಟ್ಟರೆ ರೈತ ಏನನ್ನು ಕೇಳುವುದಿಲ್ಲ. ಹಾಗಾಗಿ ಎಲ್ಲಾ ಕಡೆ ಸರಣಿ ಚೆಕ್ ಡ್ಯಾಂಗಳನ್ನು ಕಟ್ಟುವುದರ ಜೊತೆ ಜೊತೆಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ ಎಂದು ಹೇಳಿದರು.
ದೊಡ್ಡ ಹಳ್ಳದಲ್ಲಿ ಮಳೆ ನೀರು ವ್ಯರ್ಥವಾಗಿ ಹರಿದು ಹೋಗಬಾರದೆನ್ನುವ ಕಾರಣಕ್ಕಾಗಿ ಚೆಕ್‍ಡ್ಯಾಂ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್‍ಗೆ 5 ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಮಳೆಗಾಲ ಆರಂಭವಾಗುವುದರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಸೂಚಿಸಿದ ಶಾಸಕ ಡಾ.ಎಂ.ಚಂದ್ರಪ್ಪ ರೈತರು ನೆಮ್ಮದಿಯಾಗಿ ಬದುಕಬೇಕೆಂಬುದು ನನ್ನ ಉದ್ದೇಶ ಎಂದರು.
ಚೆಕ್‍ಡ್ಯಾಂ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಯಥೇಚ್ಚವಾಗಿ ನೀರು ರೈತರ ತೋಟಗಳಿಗೆ ಹರಿಯಲಿದೆ. ತಾಲೂಕಿನಾದ್ಯಂತ ನೀರು, ವಿದ್ಯುತ್‍ಗೆ ಆದ್ಯತೆ ನೀಡಿದ್ದೇನೆ. ಅದೇ ರೀತಿ ರಸ್ತೆ, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ, ಅಂಗನವಾಡಿಗಳನ್ನು ಕಟ್ಟಿಸಿದ್ದೇನೆ. ಯಾರಿಂದಲೂ ಏನನ್ನು ಹೇಳಿಸಿಕೊಂಡಿಲ್ಲ. ಯಾವ ಊರಿಗೆ ಏನು ಅಭಿವೃದ್ದಿ ಕೆಲಸಗಳನ್ನು ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆನ್ನುವುದನ್ನು ಮನದಲ್ಲಿಟ್ಟುಕೊಂಡು ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ಡಿ.ಸಿ.ಮೋಹನ್, ಪಾಡಿಗಟ್ಟೆ ಕೃಷ್ಣಮೂರ್ತಿ, ಮರುಳಸಿದ್ದಪ್ಪ, ದಯಾನಂದ, ರೂಪ ಸುರೇಶ್, ಜಯಪ್ಪ, ರಾಜಪ್ಪ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.