ಸಾರಾಂಶ
ಪ್ರವೀಣ ಹೆಗಡೆ ಕರ್ಜಗಿ
ಶಿರಸಿ: ಗ್ರಾಮೀಣ ಪ್ರದೇಶಗಳ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಅನುಷ್ಠಾನಗೊಳಿಸಲಾದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆಗೆ ತಾಲೂಕಿನ ವಿವಿಧ ಭಾಗಗಳಲ್ಲಿ ಜಾಗದ ಕೊರತೆ ಎದುರಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ೨೦೨೦-೨೧ನೇ ಸಾಲಿನಲ್ಲಿ ಅನುಷ್ಠಾನಗೊಂಡ ಈ ಯೋಜನೆಯಡಿ ತಾಲೂಕಿನ ೨೦ಕ್ಕೂ ಹೆಚ್ಚು ಕಡೆಗಳಲ್ಲಿ ಈ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ೧೪ ಸ್ವಂತ ಕಟ್ಟಡದಲ್ಲಿದೆ. ತಾಲೂಕಿನ ಹುಲೇಕಲ್, ಸೋಂದಾ, ಭೈರುಂಬೆ, ಕುಳವೆ, ಭಾಶಿ, ಬಾಳೆಗದ್ದೆ, ದೊಡ್ಡಳ್ಳಿ, ಸಂಪಖಂಡ, ಕಾನಮುಷ್ಕಿ, ಶಿರಸಿ ನಗರ-೧, ನಗರ-೨, ನಗರ-೩ ಹಾಗೂ ನಗರ-೪ ಸೇರಿದಂತೆ ೧೨ ಕೇಂದ್ರಗಳು ಬಾಡಿಗೆ ಕಟ್ಟಡ ಅವಲಂಬಿಸಿವೆ. ಕೆಲವೊಂದು ಕಡೆಗಳಲ್ಲಿ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲು ಜಾಗದ ಕೊರತೆ ಸಮಸ್ಯೆಯಾಗಿ ಕಾಡುತ್ತಿದೆ.
ಸಿಬ್ಬಂದಿ-ಸೌಕರ್ಯ ಕೊರತೆ:ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಡಿ ಆರಂಭವಾಗಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಹದಿಹರೆಯದವರಿಗೆ ಆಪ್ತ ಸಮಾಲೋಚನೆ, ಸಾರ್ವಜನಿಕರಿಗೆ ಯೋಗ ಶಿಕ್ಷಣ ಶಿಬಿರಗಳು, ಅರ್ಹ ದಂಪತಿಗೆ ತಾತ್ಕಾಲಿಕ ಹಾಗೂ ಶಾಶ್ವತ ಗರ್ಭ ನಿರೋಧಕ ವಿಧಾನಗಳ ಸೇವೆ, ಕಣ್ಣು, ಮೂಗು, ಗಂಟಲು ಮತ್ತು ಬಾಯಿ ಸಂಬಂಧಿ ರೋಗಗಳಿಗೆ ತಪಾಸಣೆ, ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯವಿದ್ದರೆ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ಸೌಲಭ್ಯಗಳು ಲಭ್ಯವಾಗಬೇಕು. ಆದರೆ ಬಾಡಿಗೆ ಕಟ್ಟಡದಲ್ಲಿ ಇರುವ ಕೇಂದ್ರಗಳಲ್ಲಿ ಸಿಬ್ಬಂದಿ ಜತೆ ಸೌಲಭ್ಯಗಳ ಕೊರತೆ ಕಾಡುತ್ತಿದೆ. ತುರ್ತು ಸಂದರ್ಭಕ್ಕೆ ಬಳಸಿಕೊಳ್ಳಲು ಶೌಚಾಲಯ ಇಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಎಂಬ ಆಪಾದನೆಯೂ ಎಂಬ ಆರೋಪ ಗ್ರಾಮೀಣ ಜನರಿಂದ ಕೇಳಿ ಬರುತ್ತಿದೆ.
ಕೆಲವು ಭಾಗದ ಗ್ರಾಮಸ್ಥರು, ಸ್ಥಳೀಯ ಗ್ರಾಪಂ ಸಹಾಯದಿಂದ ೪ ಕಡೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದು, ಅಂತಹ ಕಡೆ ಕಾರ್ಯ ನಿರ್ವಹಿಸುವ ಕೇಂದ್ರಗಳಿಗೆ ಬಾಡಿಗೆ ನೀಡಲಾಗುತ್ತಿಲ್ಲ. ಉಳಿದ ಪ್ರತಿ ಕೇಂದ್ರಕ್ಕೆ ₹೩ ಸಾವಿರದಿಂದ ₹೫ ಸಾವಿರವರೆಗೂ ತಿಂಗಳ ಬಾಡಿಗೆ ಪಾವತಿಸಲಾಗುತ್ತಿದೆ. ಗ್ರಾಪಂ ಅಥವಾ ಕಂದಾಯ ಇಲಾಖೆಯಿಂದ ಸರ್ಕಾರಕ್ಕೆ ಜಾಗ ಲಭಿಸಿದರೆ ಉದ್ದೇಶಿತ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತದೆ. ಪ್ರತಿ ಕೇಂದ್ರ ನಿರ್ಮಿಸಲು ₹೬೫ ಲಕ್ಷ ಸರ್ಕಾರ ಬಿಡುಗಡೆ ಮಾಡುತ್ತದೆ. ಆದರೆ ಅದಕ್ಕೂ ಪೂರ್ವ ಜಾಗವು ಆರೋಗ್ಯ ಇಲಾಖೆ ಹೆಸರಿಗೆ ಆಗಬೇಕು. ಪ್ರಸ್ತುತ ತಾಲೂಕಿನಲ್ಲಿ ಬಹುತೇಕ ಕಡೆ ಜಾಗವನ್ನು ನೀಡಲು ಸ್ಥಳೀಯ ಗ್ರಾಪಂ ಮುಂದಾಗುತ್ತಿಲ್ಲ. ಹೀಗಾಗಿ ಯೋಜನೆಗೆ ಹಿನ್ನಡೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.ಅರಣ್ಯ ಇಲಾಖೆ ಜಾಗ ನೀಡಲಿ: ಲೀಸ್ ಆಧಾರದಲ್ಲಿ ಅರಣ್ಯ ಇಲಾಖೆಯಾದರೂ ಜಾಗ ನೀಡಿದರೆ ಯೋಜನೆಯ ಅನುಷ್ಠಾನಗೊಂಡು ಜನತೆಗೆ ಆರೋಗ್ಯ ಸೇವೆ ದೊರಕುತ್ತಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಗಂಭೀರ ಚಿಂತನೆ ಮಾಡಬೇಕಿರುವ ಅವಶ್ಯಕತೆ ಇದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ತಾಲೂಕಿನ ೧೨ ಕೇಂದ್ರಗಳನ್ನು ನಿರ್ಮಿಸಲು ಜಾಗ ಬೇಕಾಗಿದೆ. ಸಂಬಂಧಪಟ್ಟ ಗ್ರಾಪಂ ಅಥವಾ ಕಂದಾಯ ಇಲಾಖೆ ಜಾಗ ನೀಡಿದರೆ ಸ್ವಂತ ಕಟ್ಟಡ ನಿರ್ಮಿಸಲು ಅನುಕೂಲವಾಗುತ್ತದೆ. ಡಾ. ವಿನಾಯಕ ಭಟ್ಟ, ತಾಲೂಕು ಆರೋಗ್ಯಾಧಿಕಾರಿ;Resize=(128,128))
;Resize=(128,128))
;Resize=(128,128))
;Resize=(128,128))