ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ಇಲ್ಲದೆ ಪ್ರತಿನಿತ್ಯ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಆಗಮಿಸುವ ನೂರಾರು ಜನರು ತೊಂದರೆಗೀಡಾಗುತ್ತಿದ್ದಾರೆ. ಜಮೀನಿಗೆ ಸಂಬಂಧಪಟ್ಟ ದಾಖಲೆ ಹಾಗೂ ಆಸ್ತಿ ನೋಂದಾವಣೆಗೆ ಸಂಬಂಧಪಟ್ಟಂತೆ ಕಾರ್ಯ ನಿರ್ವಹಿಸಲು ಉಪನೊಂದಾವಣಾಧಿಕಾರಿಗಳ ಕಚೇರಿಯಲ್ಲಿ ಸೂಕ್ತ ಸಿಬ್ಬಂದಿ ಇಲ್ಲ. ಈ ಹಿಂದೆ ಇದ್ದ ಅಧಿಕಾರಿ ವರ್ಗಾವಣೆಗೊಂಡು ಬದಲಿ ಅಧಿಕಾರಿಯನ್ನು ನಿಯೋಜಿಸದೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.ಪ್ರಸ್ತುತ ಉಪ ನೋಂದಣಿ ಕಚೇರಿಯಲ್ಲಿ ಕನಿಷ್ಠ ಪಕ್ಷ ಪ್ರತಿನಿತ್ಯ ೮ ರಿಂದ೧೦ ಸಿಬ್ಬಂದಿ ಇಲಾಖೆ ಕಾರ್ಯನಿರ್ವಹಿಸುತ್ತಿದ್ದರು. ಉಪನೋಂದಣಾಧಿಕಾರಿಯೂ ಸೇರಿದಂತೆ ಕಚೇರಿಯಲ್ಲಿದ್ದ ಎಲ್ಲರಿಗೂ ಬೆಳಗೆಯಿಂದ ಸಂಜೆ ತನಕ ಕಾರ್ಯ ನಿರ್ವಹಿಸಬೇಕಿತ್ತು. ನೋಂದಾವಣೆಗೆ ಸಂಬಂಧಪಟ್ಟ ಸ್ಟಾಂಪ್‌ವೆಂಡರ್‌ಗಳು ಇಲಾಖೆಯ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ನೋಂದಣಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಸುಮಾರು ೩೦ಕ್ಕೂ ಹೆಚ್ಚು ನೋಂದಣಿ ಇರಲಿವೆ, ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರವಾದ ಚಿತ್ರದುರ್ಗವಾದ ಉಪನೋಂದಣಾಧಿಕಾರಿ ಕಚೇರಿ ಹೊರತುಪಡಿಸಿದರೆ ಸರ್ಕಾರಕ್ಕೆ ಪ್ರತಿತಿಂಗಳು ಅತಿಹೆಚ್ಚು ಆದಾಯ ತರುವ ಇಲಾಖೆ ಎಂದರೆ ಚಳ್ಳಕೆರೆ ಉಪನೊಂದಾವಣಾಧಿಕಾರಿಗಳ ಕಾರ್ಯಾಲಯ. ನೊಂದಾವಣೆಗೆ ಸಂಬಂಧಪಟ್ಟಂತೆ ಹಲವಾರು ತುರ್ತು ಕೆಲಸಗಳನ್ನು ಇಲಾಖೆ ಸಿಬ್ಬಂದಿ ಕೈಗೊಂಡು ಸಾರ್ವಜನಿಕ ನೋಂದಣಿ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ. ಆದರೆ, ಪ್ರತಿನಿತ್ಯ ಬೆಳಗ್ಗೆ ಯಿಂದ ಸಂಜೆವರೆಗೂ ನೋಂದಣಿಗೆ ಆಗಮಿಸಿದ ಸಾರ್ವಜನಿಕರು ತಮ್ಮ ದಾಖಲಾತಿಗಳನ್ನು ಪಡೆಯಲು ವ್ಯರ್ಥ ಓಡಾಟ ನಡೆಸಬೇಕಿದೆ.
ಚಳ್ಳಕೆರೆ ಉಪನೋಂದಣಾಧಿಕಾರಿ ಕಾರ್ಯಾಲಯ ಪ್ರತಿನಿತ್ಯ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಆದಾಯವನ್ನು ತಂದು ಕೊಡುವ ಇಲಾಖೆಯಾಗಿದೆ. ಇಲ್ಲಿನ ಸ್ಟಾಂಪ್‌ವೆಂಡರ್‌ಗಳು ಸಹ ಸರ್ಕಾರಕ್ಕೆ ಸಲ್ಲಬೇಕಾದ ಶುಲ್ಕವನ್ನು ಚಾಚೂ ತಪ್ಪದೆ ಸರ್ಕಾರಕ್ಕೆ ಪಾವತಿಸುತ್ತಾರೆ. ಆದರೆ, ಸರ್ಕಾರಕ್ಕೆ ಶುಲ್ಕ ಕಟ್ಟಿ ಕಚೇರಿಗೆ ಬಂದರೆ ಅಲ್ಲಿ ಯಾರ ಕೆಲಸವೂ ಆಗುವುದಿಲ್ಲ. ಕಾರಣ ಸಿಬ್ಬಂದಿಯೇ ಇಲ್ಲ. ಪ್ರಸ್ತುತ ಕಚೇರಿಯಲ್ಲಿ ದ್ವಿತಿಯ ದರ್ಜೆಯಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿಯೇ ಪ್ರಭಾರ ನೋಂದಣಾಧಿಕಾರಿಯಾಗಿ ತಾತ್ಕಾಲಿಕವಾಗಿ ನೇಮಿಸಲಾಗಿದೆ. ಈ ಹಿಂದೆ ಅಧಿಕಾರಿ ವರ್ಗಾವಣೆಗೊಂಡು ಕೆಲ ತಿಂಗಳಾದರೂ ಸರ್ಕಾರ ಮಾತ್ರ ಯಾರನ್ನೂ ನೇಮಕ ಮಾಡಿಲ್ಲ. ಪ್ರತಿನಿತ್ಯ ಈ ಕಚೇರಿಗೆ ಅಲೆದು ಜನರು ಈಗಾಗಲೇ ರೋಸಿದ್ದು, ಸರ್ಕಾರ ಈ ಕೂಡಲೇ ಉಪನೋಂದಣಾಧಿಕಾರಿಗಳ ಕಚೇರಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸಾರ್ವಜನಿಕರಿಗೆ ಅನುಕೂಲಮಾಡಿಕೊಡ ಬೇಕೆಂದು ಆಗ್ರಹಿಸಲಾಗಿದೆ.