ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಜಿಲ್ಲೆಯಲ್ಲಿ ಹೆಚ್ಚು ಪ್ರತಿಭಾವಂತ ಕ್ರೀಡಾಪಟುಗಳು ಇದ್ದರೂ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಬೇಸರ ವ್ಯಕ್ತಪಡಿಸಿದರು.ನಗರದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮತ್ತು ಉತ್ತರ ಕರ್ನಾಟಕ ಟೆನ್ನಿಸ್ ಬಾಲ್ ಕ್ರಿಕೆಟ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಲಯನ್ಸ್ ಕ್ಲಬ್ ಪರಿವಾರ ವಿಜಯಪುರ ಸಂಯುಕ್ತಾಶ್ರಯದಲ್ಲಿ ಹಿಮಾಚಲ ರಾಜ್ಯದ ಕುಲುವಿನಲ್ಲಿ ನಡೆದ ರಾಷ್ಟ್ರೀಯ ಟೆನಿಸ್ ಬಾಲ್ ಚಾಂಪಿಯನ್‌ಶಿಪ್‌ದಲ್ಲಿ ಭಾಗವಹಿಸಿ ಸಾಧನೆ ತೋರಿದ ಕರ್ನಾಟಕ ತಂಡದ ಮಹಿಳಾ ಆಟಗಾರ್ತಿಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡಾಪಟುಗಳಿಗೆ ಸೂಕ್ತವಾದ ಪ್ರೋತ್ಸಾಹ ನೀಡಿದರೆ, ಇನ್ನಷ್ಟು ಪರಿಣಾಮಕಾರಿಯಾಗಿ ಸಾಧನೆ ತೋರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ನೀಡುವ ಕೆಲಸ ನಡೆಯಬೇಕಿದೆ ಎಂದು ಕಿವಿಮಾತು ಹೇಳಿದರು.
ರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಅಶೋಕ ಜಾಧವ ಮಾತನಾಡಿ, ಕ್ರೀಡಾಪಟುಗಳು ತರಬೇತಿಯಲ್ಲಿ ತಲ್ಲೀನರಾಗಿ ತಮ್ಮ ಆತ್ಮವಿಶ್ವಾಸದಿಂದ ಕೌಶಲಗಳನ್ನು ಸೂಕ್ತ ಸಮಯದಲ್ಲಿ ಪ್ರದರ್ಶನ ಮಾಡುವಂತಹ ಕ್ಷಮತೆ ಹೊಂದಿದರೆ ಯಶಸ್ವಿ ಕ್ರೀಡಾಪಟುವಾಗಲು ಸಾಧ್ಯವಾಗಲಿದೆ. ಅಲ್ಲದೇ, ತಂಡದಲ್ಲಿ ಹೊಂದಾಣಿಕೆ ಇದ್ದಲ್ಲಿ ಗೆಲವು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಉತ್ತರ ಕರ್ನಾಟಕ ಟೆನ್ನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವಿ ಚವ್ಹಾಣ ಮಾತನಾಡಿ, ಆಟಗಾರರಲ್ಲಿ ಛಲ ಹಾಗೂ ಹಂಬಲವಿದ್ದರೆ ಗೆಲವು ಖಚಿತ. ಉತ್ತರ ಕರ್ನಾಟಕ ಭಾಗದ ಆಟಗಾರರು ದೈಹಿಕವಾಗಿ ಸದೃಢರು. ಅವರಿಗೆ ಸರಿಯಾದ ತರಬೇತಿ ಶಿಬಿರದ ಅತ್ಯವಶ್ಯಕತೆ ಇದೆ ಎಂದು ಹೇಳಿದರು.
ಮಾಜಿ ಸೈನಿಕ ಅಧಿಕಾರಿ ಸಂಕೇತ ನಾಯಕ, ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕಿ ವಿದ್ಯಾ ಕೋಟೆನ್ನವರ, ಎಂ.ಎನ್.ಉಟಗಿ, ಹಮೀದ ಬೀಳಗಿ, ಶಶಿಕಲಾ ಇಜೇರಿ, ನ್ಯಾಯವಾದಿ ಜಾಫರ ಅಂಗಡಿ, ವಿಶ್ರಾಂತ ಸಹಕಾರಿ ನೋಂದಣಾಧಿಕಾರಿ ಚಿದಾನಂದ ನಿಂಬಾಳ, ಕೃಷ್ಣ, ಪ್ರೊ.ಶಿವಕುಮಾರ ಉಕ್ಕಲಿ, ಪ್ರೊ.ಲತಾ ಪಾಟೀಲ, ಜಿ.ಎಸ್.ಬಳ್ಳೂರ, ಇಂದುಮತಿ ಕನ್ನೂರ, ಅಪ್ಪು ರಾಠೋಡ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಆಟಗಾರರಾದ ರಾಜೇಶ್ವರಿ ಮಾಗಿ, ವೈಷ್ಣವಿ ಬೋವಿ, ಪದ್ಮಶ್ರೀ ಖಂಡೆರಾಜು, ಅಗಸಬಾಳ, ಅಕ್ಷತಾ ಜಾಧವ, ಆಶಾ ಮುಂಗೋವಿ, ಸ್ವಾತಿ ನಾಟಿಕಾರ, ಜಿ.ಎಲ್.ಮಾರ್ಗರೆಟ್, ಅಫ್ರೋಜ್ ಹತ್ತರಕಿಹಾಳ, ವಿದ್ಯಾಶ್ರೀ ಪಾಟೀಲ, ಹಂಸಿಕಾ, ರುಕ್ಮಿಣಿ ಅಗಸರ, ಸುಚಿತ್ರಾ ರಾಠೋಡ, ಮಹಿಂತಾಜ ಹುಲಗೂರ ಅವರನ್ನು ಹಾಗೂ ತರಬೇತುದಾರರಾದ ಚಾಂದವಸೀಮ್ ಮುಖಾದಮ್, ಜಗದೀಶ ದೊಡಮನಿ, ಸೋಮಶೇಖರ ರಾಠೋಡ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಾಗೇಶ ಡೋಣೂರ ಹಾಗು ಸೋಮಶೇಖರ ರಾಠೋಡ ಪ್ರಾರ್ಥಿಸಿದರು. ಸುರೇಶ ಬಿಜಾಪುರ ನಿರೂಪಿಸಿದರು. ಅಬ್ಬಾಸ ತಡಲಗಿ ವಂದಿಸಿದರು.