ಅಭಿವೃದ್ದಿಗೆ ಗಮನ ನೀಡಲು ಲಾಡ್ ಕಿವಿಮಾತು

| Published : Jan 31 2024, 02:18 AM IST

ಸಾರಾಂಶ

ವೃತ್ತಿಯಲ್ಲಿ ಸಾಮಾಜಿಕ ಪ್ರಜ್ಞೆ, ಆತ್ಮತೃಪ್ತಿ ಮತ್ತು ಸಾಮಾಜಿಕ ನ್ಯಾಯ ಇರುವಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಧಾರವಾಡ: ಅಧಿಕಾರಿಗಳು ತಮ್ಮ ಇಲಾಖೆಯ ದಿನನಿತ್ಯದ ಕಾರ್ಯಗಳಿಗೆ ಮಾತ್ರ ಸೀಮಿತವಾಗದೇ ಜಿಲ್ಲೆಯ ಅಭಿವೃದ್ದಿಗೆ ಎಲ್ಲರೂ ಕಳಕಳಿ, ಪ್ರಜ್ಞಾವಂತಿಕೆ ತರಿಸಬೇಕು. ವೃತ್ತಿಯಲ್ಲಿ ಸಾಮಾಜಿಕ ಪ್ರಜ್ಞೆ, ಆತ್ಮತೃಪ್ತಿ ಮತ್ತು ಸಾಮಾಜಿಕ ನ್ಯಾಯ ಇರುವಂತೆ ಕರ್ತವ್ಯ ನಿರ್ವಹಿಸಬೇಕು. ಅಂದಾಗ ಸರ್ಕಾರದ ಜನಪರ ಯೋಜನೆಗಳು ಅರ್ಹರಿಗೆ ತಲುಪಲು ಸಾಧ್ಯ ಎಂದು ಕಾರ್ಮಿಕ ಇಲಾಖೆ ಹಾಗೂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ಜರುಗಿದ 2023-24ನೇ ಸಾಲಿನ ಡಿಸೆಂಬರ್ 2023ರ ಅಂತ್ಯಕ್ಕೆ ಕೊನೆಗೊಂಡಿರುವ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಅಭಿವೃದ್ದಿಗೆ ಮೂಲಭೂತವಾಗಿ ಅಗತ್ಯವಿರುವ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಕುಡಿಯುವ ನೀರು, ಕೃಷಿ, ತೋಟಗಾರಿಕೆ ಮತ್ತು ನಗರಾಭಿವೃದ್ದಿ ಯೋಜನೆಗಳಲ್ಲಿ ಜಿಲ್ಲೆಯ ಸಚಿವರನ್ನು, ಶಾಸಕರನ್ನು ಮತ್ತು ವಿವಿಧ ಜನಪ್ರತಿನಿಧಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಅಧಿಕಾರಿಗಳು ತಮಗೆ ತಿಳದಂತೆ ಕಾರ್ಯಕ್ರಮ ರೂಪಿಸಿದರೆ ಸಾಲದು. ಎಲ್ಲರ ಅಭಿಪ್ರಾಯ ಪಡೆಯಬೇಕು ಎಂದರು.

ಶೈಕ್ಷಣಿಕ ಪ್ರಗತಿ ಕಳಪೆ

ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಕಡಿಮೆ ಹಂತದಲ್ಲಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಡಯಟ್ ಸೇರಿ ಸಂಯುಕ್ತವಾಗಿ ಜಿಲ್ಲೆಯಲ್ಲಿ ಶಿಕ್ಷಣ ಸುಧಾರಣೆಗೆ ನೀಲನಕ್ಷೆ ರೂಪಿಸಬೇಕು ಎಂದರು.

ಅರಣ್ಯ ಇಲಾಖೆಯ ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನಕ್ಕೆ. ಅಧಿಕಾರಿಗಳು ಅರಣ್ಯ ಕಾಯ್ದೆಗಳ ಬಗ್ಗೆ ಸೂಕ್ತ ತಿಳಿವಳಿಕೆ ಪಡೆದುಕೊಳ್ಳಬೇಕು. ಅರಣ್ಯ ಹೆಚ್ಚಳಕ್ಕೆ ವಿವಿಧ ಯೋಜನೆಗಳಡಿ ಕ್ರಮ ವಹಿಸಬೇಕು ಎಂದು ಸಚಿವರು ಹೇಳಿದರು.

ಜಿಲ್ಲೆಯ ಯಾವುದೇ ಭಾಗದಲ್ಲಿ ಪಶು ಆಹಾರ ಕೊರತೆ ಆದರೆ ಅಧಿಕಾರಿಯನ್ನೇ ಹೊಣೆ ಮಾಡಲಾಗುತ್ತದೆ. ಪಶುಗಳ ಸಂಖ್ಯೆ, ರೈತರ ಸಂಖ್ಯೆ ಪರಿಗಣಿಸಿ, ಸರಿಯಾಗಿ ಕೆಲಸ ಮಾಡಲು ಸಚಿವರು ಸೂಚಿಸಿದ ಅವರು, ರೈತರಿಗೆ ಸಕಾಲಕ್ಕೆ ದನಗಳ ಮೇವು, ಚಿಕಿತ್ಸೆ ಮತ್ತು ಅಗತ್ಯ ಸೌಲಭ್ಯ ಸೀಗುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸಚಿವರು ಹೇಳಿದರು.

ಕುಡಿಯುವ ನೀರು ಕೊಡಿ

ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಬೇಸಿಗೆ ಹೆಚ್ಚಳವಾಗುತ್ತಿರುವುದರಿಂದ ಅಧಿಕಾರಿಗಳು ಗ್ರಾಮೀಣ ಕುಡಿಯುವ ನೀರು, ಗ್ರಾಮೀಣರಿಗೆ ಉದ್ಯೋಗ ಸೀಗುವಂತೆ ಕ್ರಮವಹಿಸಬೇಕು. ದನಕರುಗಳಿಗೆ ಮೇವು, ಕುಡಿಯುವ ನೀರು ಕೊರತೆ ಆಗದಂತೆ ಎಚ್ಚರಿಕೆವಹಿಸಬೇಕು. ರೈತರಿಗೆ ಪರಿಹಾರ ವಿತರಣೆಗೆ ಕ್ರಮವಹಿಸಬೇಕು ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ, ಕ್ಷೇತ್ರದಲ್ಲಿ ಎಲ್ಲ ಕಾಮಗಾರಿಗಳು ಮಾರ್ಚ್‌ದೊಳಗೆ ಮುಕ್ತಾಯಗೊಳಿಸಲು ಮತ್ತು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಬೆಳೆ ಹಾನಿ ಆಗಿದ್ದು, ಪರಿಹಾರ ಬಿಡುಗಡೆಗೆ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಹಿಂಗಾರು ಬೆಳೆ ಕುಂಠಿತವಾಗಿದ್ದು, ಈಗಾಗಲೇ ಹಿಂಗಾರು ಬೇಳೆ ಸಮೀಕ್ಷೆ ಮಾಡಲಾಗಿದ್ದು, ಬೆಳೆ ಕಟಾವು ಅಂತಿಮ ಹಂತದಲ್ಲಿದೆ ಎಂದು ಅವರು ಹೇಳಿದರು.

2023-24ನೇ ಸಾಲಿನ ಬೆಳೆ ವಿಮೆ ಮಾಡಿಸಿದ್ದ ರೈತರಿಗೆ ವಿವಿಧ ಬೆಳೆಗಳಿಗೆ ಮಧ್ಯಂತರ ಪರಿಹಾರವಾಗಿ ₹64.03 ಕೋಟಿಯನ್ನು ಸುಮಾರು 88.272 ರೈತರಿಗೆ ಬಿಡುಗಡೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಸಿ. ಬದ್ರಣ್ಣವರ ಮಾತನಾಡಿ, ಜಿಲ್ಲೆಯಲ್ಲಿ ಮಾವು ಉತ್ತಮ ಬೆಳೆ ಬಂದಿದೆ. ಸಾಕಷ್ಟು ರೈತರು ಮಾವಿಗೆ ವಿಮೆ ಮಾಡಿಸಿದ್ದಾರೆ ಎಂದರು.

108 ಹೊಸ ಆ್ಯಂಬುಲೆನ್ಸ್

ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ಪಾಟೀಲ ಶಶಿ ಮಾತನಾಡಿ, ಬರುವ ಫೆಬ್ರವರಿಯಲ್ಲಿ ಹೊಸದಾಗಿ 108 ಆ್ಯಂಬುಲೆನ್ಸ್ ಗಳು ಬರುತ್ತಿವೆ. ಜಿಲ್ಲೆಯಲ್ಲಿ ಅಗತ್ಯವಿದ್ದಲ್ಲಿ ಬಳಸಲು ಯೋಜನೆ ಸಿದ್ಧಗೊಳಿಸಲಾಗಿದೆ. ಜಿಲ್ಲೆಯಲ್ಲಿ ಲಿಂಗಾನಪಾತ ಕಡಿಮೆ ಇದ್ದು, ಇದರ ಬಗ್ಗೆ ಜಾಗೃತಿ ಮೂಡಸಲಾಗುತ್ತಿದೆ ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಈ ಸಲದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಮಕ್ಕಳಿಗೆ ತರಬೇತಿ ನೀಡಿ ಸಿದ್ಧಗೊಳಿಸಲಾಗಿದೆ ಎಂದರು.

ಜಿಲ್ಲಾ ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ, ಮೀನುಗಾರಿಕೆ ಇಲಾಖೆ ಅಧಿಕಾರಿ ಇಲಾಖೆ ಮಾಹಿತಿ ನೀಡಿದರು.

ಗುಣಮಟ್ಟದ ಕಾಮಗಾರಿ ಇರಲಿ:

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಅಧಿಕಾರಿಗಳು ತಮ್ಮ ಇಲಾಖೆ ಯೋಜನೆಗಳ ಸರಿಯಾದ ಮಾಹಿತಿ ಪಡೆದುಕೊಂಡು ರೈತರಿಗೆ, ಫಲಾನುಭವಿಗಳಿಗೆ ಅನುಕೂಲವಾಗುವಂತೆ ಕರ್ತವ್ಯ ನಿರ್ವಹಿಸಬೇಕು. ಕಾಮಗಾರಿಗಳ ಪ್ರತಿ ಹಂತದ ಅಪಡೆಟ್ ಪಡೆದು, ಶೀಘ್ರವಾಗಿ ಮತ್ತು ಗುಣಮಟ್ಟದಲ್ಲಿ ಕಾಮಗಾರಿ ಮುಗಿಸಬೇಕು ಎಂದರು.

ಜಿಲ್ಲಾ ಪಂಚಾಯತ್‌ ಸಿಇಒ ಸ್ವರೂಪ ಟಿ.ಕೆ. ಸೇರಿದಂತೆ ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿ, ತಮ್ಮ ಇಲಾಖೆಗಳ ಪ್ರಗತಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಫೆ. 24ರಂದು ಫಲಾನುಭವಿಗಳ ಜಿಲ್ಲಾ ಸಮಾವೇಶ-ಲಾಡ್‌ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜನಜಾಗೃತಿಗಾಗಿ ಜಿಲ್ಲೆಯಲ್ಲಿ ಫಲಾನುಭವಿಗಳ ಸಮಾವೇಶ ಸಂಘಟಿಸಲಾಗುತ್ತಿದೆ. ಜಿಲ್ಲಾಮಟ್ಟದ ಫಲಾನುಭವಿಗಳ ಸಮಾವೇಶವನ್ನು ಬರುವ ಫೆ. 24ರಂದು ಆಯೋಜಿಸಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.ಕೆಡಿಪಿ ಸಭೆ ನಂತರ ಮಾತನಾಡಿ, ಬರುವ ಫೆಬ್ರವರಿ 24ರಂದು ನವಲಗುಂದ ಮತಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿಗಳು ಬರುವ ಕಾರ್ಯಕ್ರಮ ನಿಗದಿ ಆಗಿದೆ. ಸರ್ಕಾರದ ನಿರ್ದೇಶನದಂತೆ ಐದು ಮುಖ್ಯ ಯೋಜನೆಗಳ ಹಾಗೂ ಇತರ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಫೆಬ್ರವರಿ 24ರಂದು ಫಲಾನುಭವಿಗಳ ಜಿಲ್ಲಾ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದ್ದು, ಸಿದ್ಧತೆ ಆರಂಭಗೊಂಡಿದೆ.ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದ್ದು, ಆಗಮಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.