ಶಾಂತಿಯುತವಾಗಿ ನಡೆದ ಲಾಡ್ಲೇ ಮಶಾಕ್‌ ನಮಾಜ್‌, ಶಿವಲಿಂಗ ಪೂಜೆ

| Published : Mar 09 2024, 01:34 AM IST

ಶಾಂತಿಯುತವಾಗಿ ನಡೆದ ಲಾಡ್ಲೇ ಮಶಾಕ್‌ ನಮಾಜ್‌, ಶಿವಲಿಂಗ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ದರ್ಗಾದ ಉತ್ತರ ಬಾಗಿಲಿನಿಂದ ಮುಸ್ಲಿಂ ಸಮುದಾಯದ 15 ಮಂದಿಗೆ, ಉತ್ತರ ದಿಕ್ಕಿನ ಬಾಗಿಲಿನಿಂದ 15 ಮಂದಿ ಹಿಂದೂ ಸಮಾಜ ಮುಖಂಡರಿಗೆ ದರ್ಗಾ ಆವರಣ ಪ್ರವೇಶ ನೀಡಿದ ಪೊಲೀಸರು. ಬೆಳಗ್ಗೆ ನಮಾಜ್‌, ಸಂಜೆ ಇಳಿಹೊತ್ತಲ್ಲಿ ರುದ್ರಾಭಿಷೇಕ, ಪೂಜೆ ಕೈಗೊಳ್ಳಲು ಅವಕಾಶ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿವಾದಕ್ಕೊಳಗಾಗಿದ್ದ ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ಸೂಫಿ ಸಂತ ಲಾಡ್ಲೇ ಮಶಾಕ್‌ ದರ್ಗಾ ಉರುಸ್‌, ನಮಾಜ್‌ ಹಾಗೂ ಅದೇ ದರ್ಗಾ ಆವರಣದಲ್ಲಿರುವ ಪ್ರಾಚೀನವಾದಂತಹ ಶ್ರೀ ರಾಘವ ಚೈತನ್ಯ ಶಿವಲಿಂಗದ ರುದ್ರಾಭಿಷೇಕ ಹಾಗೂ ಪೂಜೆ ನ್ಯಾಯಾಲಯದ ಆದೇಶದಂತೆ ಶಾಂತಿಯುತವಾಗಿ ಶುಕ್ರವಾರ ನಡೆಯಿತು.

ಕೋರ್ಟ್ ಆದೇಶದಂತೆ ಸೂಫಿ-ಸಂತ ಹಜರತ್ ಲಾಡ್ಲೆ ಮಶಾಕ ದರ್ಗಾ ಸುತ್ತಮುತ್ತ ಹಾಗೂ ಆಳಂದ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್‌ ನಿಯೋಜಿಸಲಾಗಿತ್ತು. ಶಿವರಾತ್ರಿಯಂದು ರಾಘವ ಚೈತನ್ಯ ಲಿಂಗದ ಪೂಜೆ ಹಾಗೂ ಶುಕ್ರವಾರದ ನಮಾಜ ಕಾರ್ಯ ಸುಸೂತ್ರವಾಗಿ ಅಹಿತಕರ ಘಟನೆಗಳು ಮುಕ್ತವಾಗಿ ನಡೆದಾಗ ಜಿಲ್ಲಾಡಳಿತ ನಿಟ್ಟುಸಿರು ಬಿಡುವಂತಾಯಿತು.

ಲಾಡ್ಲೆಮಶಾಕ ದರ್ಗಾದ ಉತ್ತರ ದಿಕ್ಕಿನ ಬಾಗಿಲಿನಿಂದ ಆಯ್ದ 15 ಮುಖಂಡರನ್ನು ಪ್ರವೇಶ ನೀಡಿದ ಪೊಲೀಸರು ನಮಾಜ್‌ ಮಾಡಲು ಅವಕಾಶ ಕಲ್ಪಿಸಿದ್ದರು. ಮುಸ್ಲಿಂ ಸಮಾಜದ 15 ಜನ ಬೆ.8 ರಿಂದ ಮ.2 ಗಂಟೆಯವರೆಗೆ ಒಳಗಿದ್ದು ಪ್ರಾರ್ಥನೆ ಸಲ್ಲಿಸಿದರು. ಶುಕ್ರವಾರ ದರ್ಗಾ ಆವರಣದಲ್ಲಿನ ಎಲ್ಲಾ ಪೂಜೆ- ಪುನಸ್ಕಾರ ಹಾಗೂ ನಮಾಜ್‌ ನಡೆದವು.

ಇದಾದ ಬಳಿಕ ಇಳಿಹೊತ್ತು 4 ಗಂಟೆ ಬಳಿಕ ಹಿಂದೂಪರ ಮುಖಂಡರಿಗೆ ಪ್ರವಾಸಿ ಮಂದಿರ ಮುಂಭಾಗದ ಉತ್ತರ ಭಾಗದ ಗೇಟ್‍ ಮೂಲಕ ದರ್ಗಾ ಆವರಣದ ಪ್ರವೇಶಾವಕಾಶ ನೀಡಿ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು.

ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ- ರುದ್ರಾಭಿಷೇಕವನ್ನು ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ, ಕಡಗಂಚಿ ಶ್ರೀಗಳು ಸೇರಿದಂತೆ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಶಾಸಕ ಡಾ. ಅವೀನಾಶ ಜಾಧವ, ಮಾಜಿ ಶಾಸಕ ಅಪ್ಪುಗೌಡ ಪಾಟೀಲ, ಗುಂಡು ಗೌಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ರದ್ದೇವಾಡಗಿ ಸೇರಿ 15 ಮುಖಂಡರಿಂದ ನಡೆಯಿತು. ಎರಡು ಸಮುದಾಯದ ಧಾರ್ಮಿಕ ವಿಧಾನಗಳು ದರ್ಗಾ ಆವರಣದಲ್ಲಿ ಶಾಂತಿಯುತವಾಗಿ ನಡೆದವು.

ದರ್ಗಾದ ಚಾರಮೀನಾರ್‌ ಇರುವ ಮುಖ್ಯದ್ವಾರದ ಪೂರ್ವಕ್ಕೆ ಯಾರನ್ನು ಪ್ರವೇಶ ನೀಡದೆ, ಉತ್ತರ ಭಾಗದ ಬಾಗಿಲಿನಿಂದ ಮುಸ್ಲಿಂ ಸಮುದಾಯದವರಿಗೆ ಕೋರ್ಟ್ ನಿರ್ದೇಶನದಂತೆ ಆಯ್ದ ಮುಖಂಡರಿಗೆ ಪ್ರವೇಶ ಕಲ್ಪಿಸಿ ನಮಾಜ್‌ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು.

ಡಿಐಜಿ ಅಜಯ ಹಿಲೋರಿ, ಎಸ್ಪಿ ಅಕ್ಷಯ ಹಾಕೆ, ಡಿವೈಎಸ್‍ಪಿ ಮೊಹ್ಮದ್ ಶರೀಫ್, ಸಿಪಿಐ ಮಹಾದೇವ ಪಂಚಮುಖಿ ಸೇರಿದಂತೆ ಕಲಬುರಗಿ, ಬೀದರ, ಯಾದಗೀರಿ ಜಿಲ್ಲೆಗಳ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಡಿವೈಎಸ್‍ಪಿ, ಸಿಪಿಐ, ಪಿಎಸ್‍ಐ ಸೇರಿದಂತೆ 1500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆಯೊಂದಿಗೆ ಅಲ್ಲಿದ್ದ ಪೊಲೀಸ್‌ ಸರ್ಪಗಾವಲಲ್ಲಿ ಪೂಜೆ- ನಮಾಜ್‌ ನಡೆದವು.

ಈ ಮೊದಲು ಪಟ್ಟಣದಿಂದ ಎರಡುವರೆ ಕಿ.ಮೀ. ಅಂತರದ ರಸ್ತೆಯಲ್ಲಿರುವ ಪ್ರಗತಿ ಟೌನ್‍ಶೀಪ್ ಮೈದಾನದಲ್ಲಿ ಬೃಹತ್ ಸಭೆ ಹಾಗೂ ಹೋಮ ಪೂಜೆ ಕಾರ್ಯಕ್ರಮ ನೆರವೇರಿಸಿದರು. ಮುಖಂಡರು, ಕಾರ್ಯಕರ್ತರು, ಧಾರ್ಮಿಕ ಗುರುಗಳು ಇದ್ದರು.

ಕಳೆದೊಂದು ವಾರದಲ್ಲಿ ಸತತ 30ಕ್ಕೂ ಹೆಚ್ಚು ಶಾಂತಿ ಸಭೆಗಳನ್ನು ಆಳಂದದಲ್ಲಿ ಪೊಲೀಸರು ನಡೆಸಿದ್ದರು. ಇದಲ್ಲದೆ ಪಥ ಸಂಚಲನ ಮಾಡುವ ಮೂಲಕ ಜನಜಾಗೃತಿ ಮಾಡಿದ್ದಲ್ಲದೆ ಸಾಮರಸಯ ಕಾಪಾಡುವಂತೆ ಕೋರಿದ್ದರಿಂದ ಶಿವರಾತ್ರಿ ದಿನದ ಪೂಜೆ, ನಮಾಜ್‌ ಎರಡೂ ಶಾಂತವಾಗಿ ಆಳಂದದಲ್ಲಿ ನಡೆದವು.

ಕೋರ್ಟ್ ನಿದೇಶನದಂತೆ ಎರಡೂ ಸಮುದಾಯಗಳ ಧಾರ್ಮಿಕ ವಿಧಾನ ಕೈಗೊಳ್ಳುವಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಜನ ಶ್ಲಾಘಿಸಿದರು.