ಸಾರಾಂಶ
ರೈತರಿಗೆ ಅನುಕೂಲವಾಗಲೆಂದು ಜಲಮೂಲದ ಉಳಿವಿಗಾಗಿ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಗೊಳಿಸಿ ರೈತರಿಗೆ ಕೆರೆಯನ್ನು ಹಸ್ತಾಂತರಿಸುವ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ರೈತರಿಗೆ ವರದಾನ
ತಿಪಟೂರು: ರೈತರಿಗೆ ಅನುಕೂಲವಾಗಲೆಂದು ಜಲಮೂಲದ ಉಳಿವಿಗಾಗಿ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಗೊಳಿಸಿ ರೈತರಿಗೆ ಕೆರೆಯನ್ನು ಹಸ್ತಾಂತರಿಸುವ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ರೈತರಿಗೆ ವರದಾನ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.
ತಾಲೂಕಿನ ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮಲಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ಕೆರೆ ಹೂಳೆತ್ತುವ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕೆರೆ ಕಾಮಗಾರಿಯ ಪುಣ್ಯದ ಕೆಲಸಕ್ಕೆ ಗ್ರಾಮಸ್ಥರೆಲ್ಲಾ ಒಟ್ಟಾಗಿ ಸಹಕರಿಸಿ ನಿಮ್ಮೂರ ಕೆರೆಯನ್ನು ಶುಚಿಗೊಳಿಸಿ ಮಾದರಿ ಕೆರೆಯನ್ನಾಗಿ ಮಾರ್ಪಾಡು ಮಾಡಬೇಕು. ರಾಜ್ಯದಲ್ಲಿಯೇ 6 ಲಕ್ಷ ಸಂಘಗಳನ್ನೊಳಗೊಂಡ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶ ಬಡವರ, ನಿರ್ಗತಿಕರ ಹಾಗೂ ಸಮಾಜದ ಅಶಕ್ತ ಕುಟುಂಬಗಳ ಏಳಿಗೆಯಾಗಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷೆ ಪ್ರೇಮಗಂಗಾಧರ್, ಕಾರ್ಯದರ್ಶಿ ಪ್ರಭಾ, ತಾಲೂಕು ಯೋಜನಾಧಿಕಾರಿ ಕೆ. ಉದಯ್, ಜನಜಾಗೃತಿ ವೇದಿಕೆ ಸದಸ್ಯರಾದ ಹರೀಶ್ ಗೌಡ, ಮಲ್ಲಿಗಪ್ಪಾಚಾರ್, ತಾಲೂಕು ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಕೆರೆ ಸಮಿತಿ ಅಧ್ಯಕ್ಷ ನೀಲಕಂಠಸ್ವಾಮಿ, ಉಪಾಧ್ಯಕ್ಷ ತಿಮ್ಮೇಗೌಡ, ಗುಡಿಗೌಡರಾದ ನಟರಾಜ್, ಸಹಕಾರ್ಯದರ್ಶಿ ದಕ್ಷಿಣಮೂರ್ತಿ, ಗ್ರಾಮದ ಹಿರಿಯರಾದ ನಂಜಾಮರಿ, ನೀಲಕಂಠಸ್ವಾಮಿ, ಮೇಲ್ವಿಚಾರಕ ಮನೀಶ್, ಸೇವಾಪ್ರತಿನಿಧಿ ವಿನೋದಮ್ಮ ಮತ್ತಿತರರಿದ್ದರು.