ಕೆರೆ ಹೂಳೆತ್ತುವ ಯೋಜನೆ ಅವೈಜ್ಞಾನಿಕ; ಗ್ರಾಮಸ್ಥರ ಆರೋಪ

| Published : May 23 2024, 01:00 AM IST

ಸಾರಾಂಶ

ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಸಮೀಪದ ಹಿರೇಬಾಸೂರು ಗ್ರಾಮದ ಕೆರೆಯ ಹೂಳು ತೆಗೆದು ಕಲ್ಲಿನ ಒಡ್ಡಿನ ಮೇಲೆಯೇ ಹಾಕುತ್ತಿರುವ ಕೂಲಿ ಕಾರ್ಮಿಕರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಸಾಸ್ವೇಹಳ್ಳಿ ಹೋಬಳಿ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬಾಸೂರು ಗ್ರಾಮದ ಕೆರೆ ಹೂಳನ್ನು ಅವೈಜ್ಞಾನಿಕವಾಗಿ ತೆಗೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಾಲ್ಕೈದು ವರ್ಷದ ಹಿಂದೆ ಗ್ರಾಮದವರು ಕೆರೆಯ ಅಭಿವೃದ್ಧಿ ಮಾಡಬೇಕು ಎಂದು ಕೆರೆಗೆ ಕಲ್ಲುಗಳಿಂದ ಒಡ್ಡು ನಿರ್ಮಾಣ ಮಾಡಿಸಲಾಗಿತ್ತು. ಗ್ರಾಮ ಪಂಚಾಯಿತಿಯವರು ಮಂಗಳವಾರ ಮತ್ತು ಬುಧವಾರದಂದು ಏಕಾಏಕಿ ನರೇಗಾ ಯೋಜನೆ ಯಡಿಯಲ್ಲಿ ಕೆರೆ ಮಣ್ಣನ್ನು ತೆಗೆದು, ಆ ಮಣ್ಣನ್ನು ಕಲ್ಲಿನ ರಿವಿಂಟ್ ಮೆಂಟ್‌ನ ಮೇಲೆ ಹಾಕಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಜನಾರ್ದನ ಪಟೇಲ್ ಆರೋಪಿಸಿದರು.

ಈ ಯೋಜನೆ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ಬಂದಿರುವುದಿಲ್ಲ. ಇದೆಲ್ಲ ಗಮನಿಸಿದರೆ ಸರ್ಕಾರದ ಹಣ ಲೂಟಿ ಮಾಡುವ ಉದ್ದೇಶ ಎದ್ದು ಕಾಣುತ್ತಿದೆ. ಕೆರೆ ಮಣ್ಣನ್ನು ಕೆರೆಯಿಂದ ದೂರ ಸಾಗಿಸಬೇಕು. ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿ ಕೆರೆ ಮಣ್ಣನ್ನು ಕೆರೆಗೆ ಚೆಲ್ಲುವ ಯೋಜನೆ ಇದಾಗಿದೆ. ನಮಗೆ ಸರ್ಕಾರದ ಈ ಯೋಜನೆ ಬೇಕಾಗಿರುವುದಿಲ್ಲ. ಇದರ ಬದಲು ಕೆರೆ ಏರಿ ಸ್ವಚ್ಛತೆ, ಪಕ್ಕದಲ್ಲಿರುವ ಸ್ಮಶಾನದ ಅಭಿವೃದ್ಧಿ, ಬಹುಮುಖ್ಯವಾಗಿ ನಮ್ಮೂರಿನ ಕೆರೆ ತುಂಬಿಸಲು ಈ ಹಣ ಬಳಸಬಹುದಿತ್ತು. ಇದರ ಬದಲು ಅಧಿಕಾರಿಗಳ ಸ್ವಾರ್ಥತೆಯಿಂದ ಈ ಕಾಮಗಾರಿ ಕೈಗೆ ಎತ್ತಿಕೊಂಡಿರುವಂತೆ ಕಾಣುತ್ತಿದೆ ಎಂದು ಗ್ರಾಮದ ನರಸಿಂಹಪ್ಪ ತಮ್ಮ ಅಕ್ಷೇಪ ವ್ಯಕ್ತಪಡಿಸಿದರು.

ಆರು ಎಕರೆಗಿಂತ ಹೆಚ್ಚು ವಿಸ್ತೀರ್ಣ ಇರುವ ಈ ಕೆರೆ ಅಭಿವೃದ್ಧಿಯನ್ನು ಅಧಿಕಾರಿಗಳು ಗಮನಹರಿಸಿ ಮಾಡುವ ಬದಲು. ಕೆರೆಯ ಮಣ್ಣನ್ನು ಅಲ್ಲಿಯೇ ಹಾಕುವುದರಿಂದ ಮಳೆ ಬಂದಾಗ ಮಣ್ಣು ಕೊಚ್ಚಿಕೊಂಡು ಮತ್ತೆ ಕೆರೆಗೆ ಬರುತ್ತದೆ. ಇದರಿಂದ ಈ ಮಣ್ಣನ್ನು ಹೊರ ಸಾಗಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.

ಬೀರಗೊಂಡನಹಳ್ಳಿ ಪಿಡಿಒ ಮಂಜುಳ ಪ್ರತಿಕ್ರಿಯಿಸಿ, ಎನ್‍ಆರ್‍ಇಜಿ ಯೋಜನೆಯಡಿಯಲ್ಲಿ ಕೆರೆ ಅಭಿವೃದ್ಧಿಗೆ ₹19 ಲಕ್ಷ ಹಣ ಮಂಜೂರಾಗಿದೆ. 16 ಜನರ ತಂಡ ಮಾಡಿ ಈ ಕೆರೆ ಹೂಳು ತೆಗೆಸಲಾಗುತ್ತಿದೆ. ನಮಗೆ ತಿಳಿಸಿದಂತೆ ಈ ಮಣ್ಣನ್ನು ಸರ್ಕಾರಿ ಜಾಗಕ್ಕೆ, ರೈತರ ಜಮೀನುಗಳಿಗೆ, ಕೆರೆ ಏರಿ ಮೇಲೆ ಅಥವಾ ಕೆರೆಯಿಂದ 15 ಅಡಿ ದೂರದಲ್ಲಿ ಹಾಕಿಸಬೇಕು. ಮಳೆ ಬಂದಿರುವುದರಿಂದ ಕೆರೆಗೆ ಯಾವುದೇ ವಾಹನಗಳು ಇಳಿಯದ ಕಾರಣ ಮಣ್ಣನ್ನು ಏರಿಗೆ ಹಾಕಿಸುತ್ತಿದ್ದೇವೆ. ಗ್ರಾಮಸ್ಥರು ಬೇಡ ಎಂದ ಕಾರಣ ಈ ಮಣ್ಣನ್ನು ಟ್ರ್ಯಾಕ್ಟರ್ ಮೂಲಕ ಹೊರ ಸಾಗಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಹಿರೇಬಾಸೂರು ಗ್ರಾಮದ ತಾರಕೇಶ್ವರ, ಸಂಪತ್ ಕುಮಾರ್, ಲಿಂಗರಾಜಯ್ಯ, ಎಚ್.ಎಂ ಹನುಮಂತಪ್ಪ, ಎಂ ಜಿ. ಹನುಮಂತಪ್ಪ, ಲಿಂಗರಾಜ್ ಬಿ.ಜಿ, ಎಂ.ಎಚ್ ಹನುಮಂತಪ್ಪ, ಗೋಪಾಲ್ ಸೇರಿ ಅನೇಕರಿದ್ದರು.