ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಕೆರೆಯಂಗಳ ತುಂಬೆಲ್ಲ ನೀರಿನ ಬಾಟಲಿ, ಪ್ಲಾಸ್ಟಿಕ್‌ ಚೀಲ, ವಿಷಯುಕ್ತ ವಸ್ತುಗಳಿಂದ ಆವರಿಸಿದ್ದು, ಎಲ್ಲವೂ ಜೀವ ಜಲದ ಒಡಲು ಸೇರುತ್ತಿದೆ. ಜಾನುವಾರುಗಳಿಗೆ ಕುಡಿವ ನೀರಿನ ದಾಹ ನೀಗಿಸಬೇಕಿದ್ದ ಕೆರೆ ನೀರು ವಿಷವಾಗುತ್ತಿದೆ.

ಹೌದು, ತಾಲೂಕಿನ ಮೈಲಾರ- ತೋರಣಗಲ್ಲು ರಾಜ್ಯ ಹೆದ್ದಾರಿ ಪಕ್ಕದ ಹಿರೇಹಡಗಲಿ ಗ್ರಾಮದ ಕೆರೆಗೆ ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ತುಂಗಭದ್ರಾ ನದಿಯಿಂದ ನೀರು ತುಂಬಿಸಲಾಗುತ್ತಿದೆ. ಈಗಾಗಲೇ ಶೇ.60 ರಿಂದ 70 ರಷ್ಟು ಕೆರೆಯಲ್ಲಿ ನೀರು ತುಂಬಿಕೊಂಡಿದೆ. ಸುತ್ತ ಹತ್ತಾರು ಹಳ್ಳಿಗಳ ಜನ ಜಾನುವಾರು ನೀರಿನ ದಾಹ ನೀಗಿಸುತ್ತಿದೆ. ನೀರಿಲ್ಲದೇ ಬತ್ತಿ ಹೋಗಿದ್ದ ರೈತರ ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದೆ. ಇಂತಹ ಜೀವ ಜಲಕ್ಕೆ ಇಂದು ಪ್ಲಾಸ್ಟಿಕ್‌ ಹಾಗೂ ವಿಷಯುಕ್ತ ವಸ್ತುಗಳು ಕಂಟಕವಾಗಿ ಪರಿಣಮಿಸಿವೆ.

ಹಿರೇಹಡಗಲಿ ಕೆರೆ ಈ ಹಿಂದೆ ಸಾಕಷ್ಟು ಒತ್ತುವರಿಯಾಗಿತ್ತು. ಇದನ್ನು ತಾಲೂಕ ಆಡಳಿತ ಮತ್ತು ಸರ್ವೇ ಇಲಾಖೆ ಸಹಯೋಗದಲ್ಲಿ ಒತ್ತುವರಿ ತೆರವು ಮಾಡಿ ಗಡಿ ಗುರುತು ಮಾಡಿ, ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆಗೆ ಹಸ್ತಾಂತರಿಸಿದ್ದರು. ಇಲಾಖೆಯಿಂದ ಹಿರೇಹಡಗಲಿ ಕೆರೆ ಸೇರಿದಂತೆ ಮೂರು ಕೆರೆಗಳ ಅಭಿವೃದ್ಧಿ ಮತ್ತು ವಿವಿಧ ಕಡೆಗಳಲ್ಲಿ 5 ಚೆಕ್‌ ಡ್ಯಾಂ ನಿರ್ಮಾಣ ಮಾಡಲು, ಗಣಿ ನಿಧಿಯಿಂದ ಮಂಜೂರಾಗಿದ್ದ ₹11 ಕೋಟಿ ವೆಚ್ಚದಲ್ಲಿ ಸಿಮೆಂಟ್‌ ಕಂಬಗಳನ್ನು ಅಳವಡಿಸಿ ತಂತಿ ಬೇಲಿ ಹಾಕಲಾಗಿದೆ. ಆದರೆ ಕೆರೆಯಂಗಳದಲ್ಲಿದ್ದ ತಿಪ್ಪೆ ಗುಂಡಿ, ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿನ ಬಣವಿಗಳು, ಗ್ರಾಮದ ಘನತ್ಯಾಜ್ಯ ವಸ್ತುಗಳನ್ನು ತೆರವು ಮಾಡಿಲ್ಲ. ಕೆಲವೆಡೆ ಜನ ತಂತಿ ಬೇಲಿ ಕಿತ್ತು ಹಾಕಿದ್ದಾರೆ. ಇದರಿಂದ ಗ್ರಾಮದಲ್ಲಿ ಬಳಕೆಯಾದ ಪ್ಲಾಸ್ಟಿಕ್‌ ವಸ್ತುಗಳು, ವಿಷಯುಕ್ತ ವಸ್ತುಗಳಿಂದ ತುಂಬಿ ಹೋಗಿದೆ. ಅಕ್ಕಪಕ್ಕದ ಅಂಗಡಿಗಳ ಘನತ್ಯಾಜ್ಯ ವಸ್ತುಗಳು ಕೂಡ ಕೆರೆಯ ನೀರಿನಲ್ಲೇ ಹಾಕುತ್ತಿದ್ದಾರೆ. ಇದರಿಂದ ಜೀವ ಜಲಕ್ಕೆ ಕುತ್ತು ಬಂದಿದೆ.

ಈ ಜೀವ ಜಲ ರಕ್ಷಣೆ ಮಾಡಿ ಜನ- ಜಾನುವಾರುಗಳಿಗೆ, ಶುದ್ಧ ಕುಡಿವ ನೀರನ್ನು ಒದಗಿಸುವ ಹೊಣೆಗಾರಿಕೆಯಿಂದ ಗ್ರಾಪಂ ಅಧಿಕಾರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ಅಧಿಕಾರಿಗಳು ಜಾಣರಂತೆ ಜಾರಿಕೊಳ್ಳುತ್ತಿದ್ದಾರೆ. ಕೆರೆಯಂಗಳವನ್ನು ಸ್ವಚ್ಛತೆ ಮಾಡುವ ಗೋಜಿ ಹೋಗುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕೆರೆಯ ನೀರು ದುರ್ನಾತ ಬೀರುವ ದಿನಗಳು ದೂರ ಇಲ್ಲ.


ಹಿರೇಹಡಗಲಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲಾಗುತ್ತಿದೆ. ಇದರಿಂದ ಸಾವಿರಾರು ಜನ ಜಾನುವಾರುಗಳಿಗೆ ಈ ನೀರು ಆಸರೆಯಾಗಿದೆ. ಗ್ರಾಪಂ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಸ್ವಚ್ಛತೆ ಮಾಡಿ ಜಲ ಮಾಲಿನ್ಯವನ್ನು ತಡೆಗಟ್ಟಬೇಕು ಎನ್ನುತ್ತಾರೆ ಹಿರೇಹಡಗಲಿ ಗ್ರಾಮಸ್ಥ ಗುಂಡಿ ಚರಣ.

ಕೆರೆಯ ಗಡಿ ಗುರುತಿಸಿ ಸುತ್ತ ಸಿಮೆಂಟ್‌ ಕಂಬ ಹಾಕಿ ತಂತಿ ಬೇಲಿ ಹಾಕಿದ್ದೇವೆ. ಆದರೆ ಕೆರೆಯ ನೀರಿನ ಮಹತ್ವವನ್ನು ಜನರು ಅರಿಯಬೇಕು. ನೀರಿನಲ್ಲಿ ಘನ ತ್ಯಾಜ್ಯ ಹಾಕುವುದನ್ನು ಗ್ರಾಪಂ ಅಧಿಕಾರಿಗಳು ತಡೆಯಬೇಕಿದೆ ಎನ್ನುತ್ತಾರೆ ಎಇಇ ಮುರುಳೀಧರ.