ಸಾರಾಂಶ
ಕನ್ನಡಪ್ರಭ ವಾರ್ತೆ ಕವಿತಾಳ
ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಕುಡಿಯುವ ನೀರಿನ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಲಕ್ಷಣ ಗೋಚರಿಸುತ್ತಿದ್ದು, ಇದರಿಂದಾಗಿ ನಿವಾಸಿಗಳು ಆತಂಕಗೊಂಡಿದ್ದಾರೆ.ಅಂದಾಜು 25-30 ಸಾವಿರ ಜನಸಂಖ್ಯೆ ಹೊಂದಿದ 16 ವಾರ್ಡ್ ಮತ್ತು ಸಮೀಪದ ಪರಸಾಪುರ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಸಮೀಪದ ಲಕ್ಷ್ಮೀ ನಾರಾಯಣ ಕ್ಯಾಂಪ್ 73ರ ಹತ್ತಿರ ಅಂದಾಜು ₹8.76ಕೋಟಿ ಮೊತ್ತದಲ್ಲಿ ಕೆರೆ ನಿರ್ಮಿಸಲಾಗಿದೆ. ಕಳೆದ ವರ್ಷ ಮಳೆ ಕೊರತೆಯಿಂದ ಡ್ಯಾಂನಲ್ಲಿ ನೀರು ಬರಿದಾದ ಪರಿಣಾಮ ಕಾಲುವೆ ನೀರು ಬಿಡದಿರುವುದು ಮತ್ತು ಕುಡಿಯುವ ನೀರಿನ ಕೆರೆ ಭರ್ತಿಗೆ ನೀರು ಬಿಟ್ಟರು ಹೆಚ್ಚಿನ ಪ್ರಮಾಣದ ನೀರು ಭರ್ತಿ ಮಾಡುವಲ್ಲಿ ಅಧಿಕಾರಿಗಳು ಕಾಳಜಿ ವಹಿಸದ ಕಾರಣ ಕೆರೆಯಲ್ಲಿ ಈಗಾಗಲೇ ನೀರು ಕಡಿಮೆಯಾಗಿದೆ.
ಕಳೆದ 15-20 ದಿನಗಳಿಂದ ಪಟ್ಟಣದಲ್ಲಿ ಐದು ದಿನಗಳಿಗೆ ಒಮ್ಮೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಅದೇ ಸಂದರ್ಭದಲ್ಲಿ ನೀರಿನ ಮಿತ ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವ ಅಧಿಕಾರಿಗಳು, ಒಂದು ವೇಳೆ ಕೆರೆ ನೀರು ಪೂರ್ತಿ ಖಾಲಿಯಾದಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಬಗ್ಗೆ ಯಾವುದೇ ಮುಂಜಾಗೃತ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.ಪಟ್ಟಣದ ಮೂರ್ನಾಲ್ಕು ವಾರ್ಡ್‌ಗಳಿಗೆ ಕೊಳವೆ ಬಾವಿ ನೀರು ಪೂರೈಸುತ್ತಿದ್ದು, ಬೋಸರಾಜು ಕಾಲೋನಿಯಲ್ಲಿನ ಕೊಳವೆಬಾವಿ ಕೆಟ್ಟು ಒಂದೂವರೆ ತಿಂಗಳಾದರೂ ಅದನ್ನು ದುರಸ್ತಿ ಮಾಡುವ ಬಗ್ಗೆ ಪಪಂ ಅಧಿಕಾರಿ ಗಮನ ಹರಿಸುತ್ತಿಲ್ಲ. ಹೀಗಾಗಿ ಹುಸೇನಪುರ ರಸ್ತೆಯಲ್ಲಿನ ಒಂದು ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡುತ್ತಿದ್ದು, ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸದ್ಯ ಕೆರೆಯಲ್ಲಿ 15 -20 ದಿನಗಳಿಗೆ ಸಾಕಾಗುವಷ್ಟು ನೀರು ಸಂಗ್ರಹವಿದ್ದು, ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗಬಹುದು ಎಂದು ಮುಖಂಡರಾದ ಸುರೇಶ ರಡ್ಡಿ ಹೇಳಿದರು.ಮುಂದಿನ ಒಂದು ತಿಂಗಳಿಗೆ ಸಾಕಾಗುವಷ್ಟು ನೀರು ಸದ್ಯ ಕೆರೆಯಲ್ಲಿದೆ. ಅಷ್ಟರಲ್ಲಿ ಕುಡಿಯುವ ನೀರಿಗಾಗಿ ಕಾಲುವೆಗೆ ನೀರು ಬಿಡುವ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಪಟ್ಟಣದ ಜನತೆಗೆ ನೀರಿನ ಕೊರತೆಯಾಗದಂತೆ ನೋಡಿ ಕೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ದುರುಗಣ್ಣ ಹೇಳಿದರು.