ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ವರಣನ ಕೃಪೆಯಿಂದ ಕೆರೆ-ಕಟ್ಟೆಗಳಲ್ಲಿ ನೀರು ತುಂಬಿದ್ದು, ನಾಡಿಗೆ ಸಮೃದ್ಧಿಯಾಗಿ ಮಳೆ ಬೆಳೆಯಾಗಿ ರೈತರು ನೆಮ್ಮದಿಯ ಬದುಕು ಸಾಗಿಸುವಂತಾಗಲಿ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ದೊಡ್ಡಕೆರೆ, ಮಾರೇಹಳ್ಳಿ ಕೆರೆ, ಕಂದೇಗಾಲ ಕೆರೆಗಳು ನೀರು ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದ ನಂತರ ಮಾತನಾಡಿ, ತಡವಾಗಿಯಾದರೂ ವರುಣ ಕೃಪೆ ತೋರಿದ್ದಾನೆ. ಮಳೆಯಾಗಿ ತಾಲೂಕಿನ ನೀರಿನ ಸಮಸ್ಯೆ ಬಗೆಹರಿದಿದೆ, ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬರಲಿ ಎಂದು ಗಂಗಾಮಾತೆಗೆ ಬಾಗಿನ ಅರ್ಪಿಸಿ ಪ್ರಾರ್ಥಿಸಿರುವುದಾಗಿ ಹೇಳಿದರು.
ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಕಾಲುವೆಗಳ ಮೂಲಕ ಕೊನೆ ಭಾಗಕ್ಕೆ ಸಮರ್ಪಕ ನೀರು ಪೂರೈಕೆಯಾಗುತ್ತಿದೆ. ಎಲ್ಲಾ ಸಮಸ್ಯೆಗಳಿಗೂ ಮಳೆಯೇ ಪರಿಹಾರವಾಗಿದ್ದು, ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಸಿ.ಪಿ.ರಾಕು, ಜಿಪಂ ಮಾಜಿ ಸದಸ್ಯ ವಿಶ್ವಾಸ್, ಪುರಸಭೆ ಸದಸ್ಯರಾದ ಶಿವಸ್ವಾಮಿ, ಪ್ರಮೀಳಾ, ರಾಜಶೇಖರ್, ಮುಖಂಡರಾದ ರಮೇಶ್, ಗಂಗರಾಜೇಅರಸು, ವೆಂಕಟೇಶ್, ಜಗದೀಶ್, ಆಯೂಬ್, ದಸ್ತಗೀರ್, ಬಸವರಾಜು, ಸಂತೋಷ್, ಮಾರೇಹಳ್ಳಿ ಬಸವರಾಜು, ಅಜಂಶ, ಕಿರಣ್‌ಕುಮಾರ್, ಆನಂದ್, ಶಿವು, ಸಿದ್ದಪ್ಪ, ಬಸಪ್ಪ, ಚೇತನ್ ನಾಯಕ್ ಇತರರಿದ್ದರು.ಉತ್ತರಾದಿ ಮಠದಲ್ಲಿ ನವರಾತ್ರಿ ಬ್ರಹ್ಮೋತ್ಸವ
ಶ್ರೀರಂಗಪಟ್ಟಣ:ಪಟ್ಟಣದ ಶ್ರೀಉತ್ತರಾದಿ ಮಠದಲ್ಲಿ ನವರಾತ್ರಿ ಅಂಗವಾಗಿ ಶ್ರೀಕಲ್ಯಾಣ ವೆಂಕಟೇಶ್ವರ ಸ್ವಾಮಿ ನವರಾತ್ರಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.ಅ.3ರಿಂದ ನಿತ್ಯ ವಿವಿಧ ಪೂಜೆಗಳು ಜರುಗತ್ತಿದ್ದು, ಅ.8ರಂದು ಬೆಳಗ್ಗೆ ಪಲ್ಲಕ್ಕಿ ಉತ್ಸವ, ಸಂಜೆ ಗರುಡ ವಾಹನ, ಅ.9ರಂದು ಬೆಳಗ್ಗೆ ಹನುಮಂತ ವಾಹನ, ಮಧ್ಯಾಹ್ನ ವಸಂತೋತ್ಸವ, ಸಂಜೆ ಗಜವಾಹನ, ಅ.10 ರಂದು ಬೆಳಗ್ಗೆ ಸೂರ್ಯಪ್ರಭ ವಾಹನ, ಸಂಜೆ ಚಂದ್ರಪ್ರಭ ವಾಹನ, ಅ.11 ರಂದು ಬೆಳಗ್ಗೆ ರಥೋತ್ಸವ, ಸಂಜೆ ಅಶ್ವವಾಹನ, ನ.12 ರಂದು ಬೆಳಗ್ಗೆ ಚಕ್ರಸ್ನಾನ ಅವಭೃತ, ಸಂಜೆ ಧ್ವಜ ಅವರೋಹಣ ನಡೆಯಲಿದೆ. ಅ.12ರಂದು ಶ್ರೀಮಧ್ವಾಚಾರ್ಯ ಅವತಾರ ದಿನ ಪ್ರಯುಕ್ತ ಸುಮಧ್ವವಿಜಯ ಪಾರಾಯಣ, ವಾಯುಸ್ತುತಿ ಪಾರಾಯಣ ಹಾಗೂ ಶ್ರೀನಿವಾಸದೇವರಿಗೆ ವಿಶೇಷ ಪುಷ್ಪಾರ್ಚನೆ, ಪ್ರತಿನಿತ್ಯ ಬೆಳಗ್ಗೆ 10 ರಿಂದ 12 ಗಂಟೆವರೆಗೆ ಪಂ.ಆನಂದತೀರ್ಥಾಚಾರ್ಯರಿಂದ ಶ್ರೀ ವೆಂಕಟಾಚಲ ಮಹಾತ್ಮೆ, ಶ್ರೀನಿವಾಸ ಕಲ್ಯಾಣ ಪ್ರವಚನ ಜರುಗಲಿದೆ.