ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರೈತರ ಜೀವನಾಡಿಯಾಗಿರುವ ಕೆರೆ ಕೋಡಿ ಬಿದ್ದಾಗ ಗಂಗಾಪೂಜೆ ನೆರವೇರಿಸುವುದು ಹಿಂದೂ ಸಂಪ್ರದಾಯದ ವಾಡಿಕೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ತಾಲೂಕಿನ ಲಕ್ಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾದರಸನ ಕೆರೆಗೆ ಶುಕ್ರವಾರ ಬಾಗಿನ ಸಮರ್ಪಣೆ ಮಾಡಿ ಮಾತನಾಡಿ, ಕೆರೆಗಳು ಕೋಡಿ ಬೀಳುವುದರಿಂದ ರೈತರು ಉತ್ತಮ ಬೆಳೆ ಬೆಳೆಯುವ ಮೂಲಕ ಅವರ ಬದುಕು ಹಸನಾಗಿ ಆರ್ಥಿಕ ಸದೃಢರಾಗುತ್ತಾರೆಂದು ಹೇಳಿದರು.
ಮಾದರಸನ ಕೆರೆ ತುಂಬಿದ್ದು, ಸಧ್ಯದಲ್ಲೇ ದಾಸರಹಳ್ಳಿ ಕೆರೆ ತುಂಬುವ ಹಂತಕ್ಕೆ ಬಂದಿದೆ. ಈ ಕೆರೆಗಳು ಮಳೆಯಿಂದ ತುಂಬಿರುವುದಲ್ಲ, ಹಿಂದಿನ ಶಾಸಕರಾಗಿದ್ದ ಸಿ.ಟಿ. ರವಿಯವರ ಅಪಾರ ಸೇವೆ ನಮ್ಮ ಅಳಿಲು ಸೇವೆ ಕಾರಣ ಎಂದರು.ಹಿರೇಮಗಳೂರು ಕೆರೆ ಮತ್ತು ಬೈರಾಪುರ ಪಿಕಪ್‌ನಿಂದ ನೀರಾವರಿ ಯೋಜನೆಗಳನ್ನು ಕೈಗೊಂಡರೆ ಈ ಭಾಗದ ಕೆರೆ ತುಂಬಿಸಲು ಯಶಸ್ವಿಯಾಗುವುದಾಗಿ ಮನಗಂಡಿದ್ದು, ಈ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸಲ್ಲದು ಎಂದು ಹೇಳಿದರು.
ಜಾತಿ, ಪಕ್ಷ ಇಲ್ಲದ ರೈತರಿಗೆ ಪಕ್ಷಾತೀತವಾಗಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತ ಸಕಲೇಶಪುರ ಎತ್ತಿನಹೊಳೆ ನೀರಾವರಿ ಯೋಜನೆಯಿಂದ ಬೆಳವಾಡಿ, ದೇವನೂರು ಕೆರೆಗಳು ಭರ್ತಿಯಾಗಿದ್ದು, ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗಂಗಾಪೂಜೆ ನೆರೆವೇರಿಸಲಾಗುವುದು ಎಂದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರಕೃತಿ ರಕ್ಷಣೆ ಮಾಡುವುದೇ ಧರ್ಮ. ಪ್ರಕೃತಿಯ ಒಂದು ಭಾಗವಾಗಿ ಕೆರೆ ಜಲರಕ್ಷಣೆ ಮಾಡಿದರೆ ಅದು ನಮ್ಮ ರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು.
ಪಂಚಭೂತಗಳಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಧರ್ಮ. ಉಪಕಾರ ಮಾಡಿದವರನ್ನು ಸ್ಮರಿಸುವುದೇ ಧರ್ಮದ ಸಾರ. ಜೀವಜಲಕ್ಕೆ ಬಾಗಿನ ಅರ್ಪಿಸುವ ಮೂಲಕ ಕೃತಜ್ಞತೆ ಸಲ್ಲಿಸಬೇಕಾಗಿರುವುದು ಅಗತ್ಯ ಎಂದರು.ಭೂಮಿ, ವಾಯು, ನೀರು, ಅಗ್ನಿ, ಆಕಾಶವನ್ನು ದೇವರೆಂದು ಪೂಜಿಸುವ ಸಂಸ್ಕೃತಿ ಭಾರತೀಯರ ಹಿರಿಮೆಯಾಗಿದ್ದು, 2020-21 ನೇ ಸಾಲಿನಲ್ಲಿ 28 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿ ದಾಸರಹಳ್ಳಿ ಕೆರೆ ಮತ್ತು ಮಾದರಸನ ಕೆರೆ ತುಂಬಿಸುವ ಯೋಜನೆಯನ್ನು 10 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಬದ್ಧತೆಯಿಂದ ಕೆಲಸ ಮಾಡಿರುವುದಾಗಿ ತಿಳಿಸಿದರು.
2018- 23 ರ ಅವಧಿಯಲ್ಲಿ ಲಕ್ಯಾ ಪಂಚಾಯಿತಿ ಒಂದಕ್ಕೆ 29 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ, ಚೆಕ್‌ಡ್ಯಾಂ, ಶಾಲಾಭಿವೃದ್ಧಿ, ಅಂಬೇಡ್ಕರ್ ಭವನ ನಿರ್ಮಾಣ, ಹಾಸ್ಟೆಲ್ ಜೋರ್ಣೋದ್ದಾರ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.ಅಭಿವೃದ್ಧಿಯಲ್ಲಿ ರಾಜಕಾರಣ ಮಾಡದೆ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ಕೊಡುವ ಜತೆಗೆ ಶಾಸಕ ಎಚ್.ಡಿ. ತಮ್ಮಯ್ಯ ಅವರೊಂದಿಗೆ ಸೇರಿ ರೈತರ, ಜನಹಿತ ಕೆಲಸ ಮಾಡುತ್ತೇವೆಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಯಾ ಗ್ರಾಪಂ ಅಧ್ಯಕ್ಷ ಹನೀಫ್, ಜಿ.ಪಂ ಮಾಜಿ ಸದಸ್ಯ ಬೆಳವಾಡಿ ರವೀಂದ್ರ, ಎಪಿಎಂಸಿ ಮಾಜಿ ಸದಸ್ಯ ಬಸವರಾಜ್, ಸದಾಶಿವ, ಈಶಣ್ಣ, ಮಹೇಶ್ ಇತರರು ಹಾಜರಿದ್ದರು.