ಮಹಾಶಿವರಾತ್ರಿ ಅಂಗವಾಗಿ ಸೌಮ್ಯಕೇಶವಸ್ವಾಮಿ ದೇಗುಲದ ಎದುರು ಲಕ್ಷ ದೀಪೋತ್ಸವ

| Published : Feb 27 2025, 12:37 AM IST

ಮಹಾಶಿವರಾತ್ರಿ ಅಂಗವಾಗಿ ಸೌಮ್ಯಕೇಶವಸ್ವಾಮಿ ದೇಗುಲದ ಎದುರು ಲಕ್ಷ ದೀಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ಪಟ್ಟಣದ ಶ್ರೀಭುವನೇಶ್ವರ ದೇವಸ್ಥಾನ, ಶ್ರೀವಿರಭದ್ರೇಶ್ವರಸ್ವಾಮಿ ದೇವಸ್ಥಾನ, ನಗರೇಶ್ವರಸ್ವಾಮಿ ದೇಗುಲ, ಶನೇಶ್ವರ ಮತ್ತು ಮುನೇಶ್ವರ ದೇವಸ್ಥಾನಗಳಲ್ಲಿ ಬುಧವಾರ ಬೆಳಗಿನಿಂದಲೇ ಹೋಮ ಹವನಾದಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮಹಾಶಿವರಾತ್ರಿ ಅಂಗವಾಗಿ 27ನೇ ವರ್ಷದ ವೈಭವದ ಲಕ್ಷ ದೀಪೋತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.

ಮಹಾಶಿವರಾತ್ರಿ ಪ್ರಯುಕ್ತ ಪ್ರತಿ ವರ್ಷ ಜರುಗುವ ಸರ್ವಾಲಂಕೃತ ವೈಭವಯುಕ್ತ ಲಕ್ಷದೀಪೋತ್ಸವದ ಅಂಗವಾಗಿ ಬುಧವಾರ ಬೆಳಗ್ಗೆಯಿಂದಲೇ ಶ್ರೀಸೌಮ್ಯಕೇಶವಸ್ವಾಮಿಗೆ ವಿಶೇಷ ಅಲಂಕಾರ, ತೋಮಾಲೆ ಸೇವೆ, ಅಷ್ಟೋತ್ತರ, ಸಹಸ್ರನಾಮ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ಸಂಜೆ 7 ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿನ 48 ಅಡಿ ಎತ್ತರದ ಗರುಡ ಕಂಭಕ್ಕೆ ದೀಪ ಹಚ್ಚುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ದೀಪ ಹಚ್ಚುವ ಮೂಲಕ ಶ್ರೀ ಸೌಮ್ಯಕೇಶವನಿಗೆ ತಮ್ಮ ಭಕ್ತಿ ಭಾವ ಸಮರ್ಪಿಸಿದರು. ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಶಿವಾಲಯಗಳಲ್ಲಿ ವಿಶೇಷ ಪೂಜೆ:

ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಶಿವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ, ಶಿವನಾಮ ಸ್ಮರಣೆಯೊಂದಿಗೆ ಭಜನೆ ಹಾಗೂ ಅನ್ನಸಂತರ್ಪಣಾ ಜರುಗಿದವು.

ಪಟ್ಟಣದ ಶ್ರೀಭುವನೇಶ್ವರ ದೇವಸ್ಥಾನ, ಶ್ರೀವಿರಭದ್ರೇಶ್ವರಸ್ವಾಮಿ ದೇವಸ್ಥಾನ, ನಗರೇಶ್ವರಸ್ವಾಮಿ ದೇಗುಲ, ಶನೇಶ್ವರ ಮತ್ತು ಮುನೇಶ್ವರ ದೇವಸ್ಥಾನಗಳಲ್ಲಿ ಬುಧವಾರ ಬೆಳಗಿನಿಂದಲೇ ಹೋಮ ಹವನಾದಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ತಾಲೂಕಿನ ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರಸ್ವಾಮಿ ಸೇರಿದಂತೆ ಪಡುವಲಟ್ಟಣ ಗ್ರಾಮದ ಶ್ರೀ ಕಾನನ ಬ್ರಹ್ಮಲಿಂಗೇಶ್ವರ, ದೊಡ್ಡಜಕ್ಕನಹಳ್ಳಿ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ, ಕಲ್ಲಿನಾಥಪುರ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ, ದಂ.ಜಕ್ಕನಹಳ್ಳಿ ಗ್ರಾಮದ ಶ್ರೀ ಮಹಾಗುರು ಶನೇಶ್ವರ, ಅರಕೆರೆ ಗ್ರಾಮದ ಶ್ರೀ ಶನೇಶ್ವರ, ವಜ್ರಮುನೇಶ್ವರ, ಲಕ್ಷ್ಮೀದೇವಿ ದೇವಸ್ಥಾನ, ದಾಸಗೋಳಪುರ ಗ್ರಾಮದ ಶ್ರೀ ಶನಿದೇವರ ದೇವಸ್ಥಾನ ಮತ್ತು ಬೀರೇಶ್ವರಪುರ ಗ್ರಾಮದ ಶ್ರೀ ದೊಡ್ಡಯ್ಯಸ್ವಾಮಿ, ಹುಲ್ಲೇಕೆರೆ, ತೊಳಲಿ, ಬೆಟ್ಟದಮಲ್ಲೇನಹಳ್ಳಿ, ಕರಡಹಳ್ಳಿ, ಹೊಣಕೆರೆ, ತಟ್ಟಹಳ್ಳಿ, ದೇವಲಾಪುರ, ಬಿಂಡಿಗನವಿಲೆ, ಬೆಳ್ಳೂರು ಮತ್ತು ಬೋಗಾದಿಯ ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆದವು.

ಲಕ್ಷ ದೀಪೋತ್ಸವದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಪುತ್ರ ಸಚ್ಚಿನ್, ಸೊಸೆ ಆಕಾಂಕ್ಷ, ಮುಖಂಡರಾದ ಸುನಿಲ್ ಲಕ್ಷ್ಮಿಕಾಂತ್, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್ ಗೌಡ ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು.