ಏಕಕಾಲದಲ್ಲಿ ಲಕ್ಷ ಸಸಿ ನೆಡುವ ಅಭಿಯಾನ: ಜಿಲ್ಲಾಧಿಕಾರಿ

| Published : Jun 08 2024, 12:31 AM IST

ಏಕಕಾಲದಲ್ಲಿ ಲಕ್ಷ ಸಸಿ ನೆಡುವ ಅಭಿಯಾನ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ ಸಸಿ ನೆಡುವ ಅಭಿಯಾನದ ಅಂಗವಾಗಿ ಜರುಗಿದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಜಿಲ್ಲೆಯಾದ್ಯಂತ ಜೂನ್ 16ರಂದು ಏಕಕಾಲಕ್ಕೆ ಒಂದು ಲಕ್ಷ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು..

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಲಕ್ಷ ಸಸಿ ನೆಡುವ ಅಭಿಯಾನದ ಅಂಗವಾಗಿ ಜರುಗಿದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯನ್ನು ಹಸರೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕಾರ್ಯಕ್ಕೆ ಮುಂದಾಗಿದ್ದು, ಅಭಿಯಾನದ ಯಶಸ್ವಿಗೆ ವಿವಿಧ ಇಲಾಖೆಗಳು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಕೈಜೋಡಿಸಬೇಕು ಎಂದು ತಿಳಿಸಿದರು.

ನಗರದ ಮುಚಖಂಡಿ ಕೆರೆಯು 480 ಹೆಕ್ಚೇರ್ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ಇದರ ವ್ಯಾಪ್ತಿಯಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್‌ ಮತ್ತು ಲಾಲ್‌ಬಾಗ್‌ ತರಹ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಕೆರೆಯ ವ್ಯಾಪ್ತಿಯಲ್ಲಿ ಯಾವ ಬಗೆಯ ಸಸಿಗಳು ಬೇಕಾಗುತ್ತವೆ. ಎಷ್ಟು ಸಸಿಗಳು ಬೇಕು ಹಾಗೂ ಸಸಿ ನೆಡಲು ಗುಂಡಿ ತೋಡಲು ಬೇಕಾಗುವ ಯಂತ್ರಗಳ ಬಗ್ಗೆ ಮಾಹಿತಿ ನೀಡುವಂತೆ ಸಣ್ಣ ನೀರಾವರಿ ಇಲಾಖೆಗೆ ತಿಳಿಸಿದರು.

ಬಾಗಲಕೋಟೆ ನವನಗರದ ಯುನಿಟ್-1ರಲ್ಲಿ ವ್ಯಾಪ್ತಿಯಲ್ಲಿ ಸೆಕ್ಟರ್‌ವಾರು ಗಿಡ ನೆಡಲು ಯೋಜನೆ ರೂಪಿಸಿ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ 195 ಗ್ರಾಮ ಪಂಚಾಯತಿಗಳು ಹಾಗೂ 17 ನಗರ ಸ್ಥಳೀಯ ಸಂಸ್ಥೆಗಳು ಇದ್ದು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡಲು ಯೋಜನೆ ರೂಪಿಸಬೇಕು. ಕೇವಲ ಗಿಡ ನೆಡವುದಷ್ಟೇ ಅಲ್ಲ ಅವುಗಳ ಪೋಷಣೆಗೆ ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗುತ್ತಿದೆ. ಕೆರೆ ವ್ಯಾಪ್ತಿಯಲ್ಲಿ ನೆಡುಸ ಸಸಿಗಳ ಪೋಷಣೆಗೆ ಕ್ರಮವಹಿಸಲಾಗುತ್ತಿದೆ ಎಂದರು.

ಪ್ರತಿ ಮತಕ್ಷೇತ್ರಕ್ಕೆ ಇಂತಿಷ್ಟು ಗ್ರಾಮ ಪಂಚಾಯತಿ ಎಂದು ಗುರುತಿಸಿ ಅದಕ್ಕೆ ಒಬ್ಬರು ಉಸ್ತುವಾರಿ ಮಾಡಲು, ಶಾಲಾ-ಕಾಲೇಜು ಆವರಣದಲ್ಲಿ ಸಸಿ ನೆಡಲು ಕ್ರಮವಹಿಸಲು ತಿಳಿಸಿದರು.

ಎಲ್ಲೆಲ್ಲಿ ಸಸಿ ನೆಡಲಾಗುತ್ತಿದೆ. ಅವುಗಳ ಪಟ್ಟಿ ಮಾಡಿ ಎರಡು ದಿನಗಳ ಒಳಗಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಲು ಸೂಚಿಸಿದರು. ಲಕ್ಷ ಸಸಿಗಳಲ್ಲಿ ಎಷ್ಟು ಸಾಧ್ಯವಾದಷ್ಟು ಸಸಿಗಳನ್ನು ಅರಣ್ಯ ಇಲಾಖೆ ಪೂರೈಸಬೇಕು. ಉಳಿದ ಸಸಿಗಳ ವ್ಯವಸ್ಥೆ ಮಾಡಲಾಗುತ್ತದೆ. ಸ್ವಯಂ ಪ್ರೇರಿತವಾಗಿ ಸಸಿ ನೆಡಲು ಬರುವವರು ಅಭಿಯಾನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಇದೊಂದು ಉತ್ತಮ ಕಾರ್ಯವೆಂದು ಭಾವಿಸಿ ಸಮಾಜಕ್ಕೆ ಒಂದು ಒಳ್ಳೆಯ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ನೆನಪು ಬರುವ ರೀತಿಯಲ್ಲಿ ಈ ಅಭಿಯಾನ ನಡೆಸಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಕಾರ್ಯನಿರ್ವಾಹಕ ಅಭಿಯಂತರ ವಿಜಯಶಂಕರ ಹೆಬ್ಬಳ್ಳಿ, ಜಿಪಂ ಸಹಾಯಕ ಕಾರ್ಯದರ್ಶಿ ವೆಂಕಟೇಶ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಪರಿಸರ ಸಂರಕ್ಷಣೆಗೆ ಈ ಅಭಿಯಾನ ಮುಖ್ಯವಾಗಿದ್ದು, ಸರ್ಕಾರಿ ಕಚೇರಿಯಲ್ಲಿರುವ ಸಿಪಾಯಿಯಿಂದ ಹಿಡಿದು ಅಧಿಕಾರಿಗಳವರೆಗೆ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ಕೈ ಜೋಡಿಸಬೇಕು. ಇದರೊಂದಿಗೆ ವಿದ್ಯಾರ್ಥಿಗಳು, ಎನ್.ಎಸ್.ಎಸ್., ಎನ್.ಸಿ.ಸಿ ಕೆಡೆಟ್‌ಗಳನ್ನು ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ತೊಡಗಿಸಿಕೊಳ್ಳಬೇಕು.

-ಜಾನಕಿ ಕೆ.ಎಂ ಜಿಲ್ಲಾಧಿಕಾರಿ