ಸಾರಾಂಶ
ಹೂವಿನಹಡಗಲಿ: ಪ್ರತಿ 6 ವರ್ಷಕ್ಕೊಮ್ಮೆ ನಡೆಯುವ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಬೂತ್ ಮಟ್ಟದಲ್ಲಿ ಅತಿಹೆಚ್ಚು ಸದಸ್ಯತ್ವ ಮಾಡಿಸಿದ ಕಾರ್ಯಕರ್ತರಿಗೆ ₹1 ಲಕ್ಷ ಬಹುಮಾನ ನೀಡುತ್ತೇನೆಂದು ಶಾಸಕ ಕೃಷ್ಣನಾಯ್ಕ ಭರವಸೆ ನೀಡಿದರು.
ಪಟ್ಟಣದ ಗೋಣಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಬಿಜೆಪಿ ಆಯೋಜಿಸಿದ್ದ ಸದಸ್ಯತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪಕ್ಷ ಮೊದಲು ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿ, ನಂತರದಲ್ಲಿ ಫಲ ಸಿಗಲಿದೆ. ಅತಿಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದವರಿಗೆ ₹1 ಲಕ್ಷ, 2ನೇ ಸ್ಥಾನಕ್ಕೆ ₹50 ಸಾವಿರ, ದ್ವಿತೀಯ ಸ್ಥಾನಕ್ಕೆ ₹25 ಸಾವಿರ ಬಹುಮಾನ ನೀಡಲಾಗುವುದು ಎಂದು ಕರೆ ನೀಡಿ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.
ಪ್ರತಿಯೊಂದು ಬೂತ್‌ನಲ್ಲಿ ಸದಸ್ಯತಾ ಅಭಿಯಾನದ ಪ್ರಾರಂಭೋತ್ಸವ ಮಾಡಬೇಕು. ಕ್ಷೇತ್ರದ ಪ್ರತಿ ಬೂತ್ ಮಟ್ಟದ ಮುಖಂಡರ ಮನೆಗೆ ಭೇಟಿ ನೀಡುತ್ತೇನೆ. ಪ್ರತಿಯೊಂದು ಮನೆಗೂ ಭೇಟಿ ಅವರ ಮನವೊಲಿಸಿ ನೋಂದಣಿ ಮಾಡಿಸಿ, ಯಾರಿಗೂ ಹೆಚ್ಚು ಒತ್ತಾಯ ಮಾಡಬೇಡಿ. ಇದು ಕಾಟಾಚಾರಕ್ಕೆ ಆಗಬಾರದು. ಪ್ರಾಮಾಣಿಕತೆಯಿಂಕ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಕರೆ ನೀಡಿದರು.ಪಕ್ಷಕ್ಕೆ ಯಾರು ಅನಿವಾರ್ಯ ಅಲ್ಲ. ನನ್ನಂತವರು ಬರುತ್ತಾರೆ, ಹೋಗುತ್ತಾರೆ. ಪಕ್ಷ ಮಾತ್ರ ಶಾಶ್ವತವಾಗಿ ಇರುತ್ತದೆ. ಪಕ್ಷ ಸಂಘಟನೆಗೆ ಎಲ್ಲರೂ ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.
ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಕಳೆದ ಬಾರಿ ಸದಸ್ಯತಾ ಅಭಿಯಾನದಲ್ಲಿ ಅಖಂಡ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿತ್ತು. ಈ ಬಾರಿ ಎಲ್ಲ ಕಾರ್ಯಕರ್ತರು ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿಸಿ ಮೊದಲ ಸ್ಥಾನಕ್ಕೆ ತರಬೇಕು. ಈಗಾಗಲೇ ಹೊಸಪೇಟೆಯ ಪಕ್ಷ ಸಭೆಯಲ್ಲಿ ವಿಜಯನಗರ ಜಿಲ್ಲೆಯ ಯಾವ ಮಂಡಲ ಅತಿಹೆಚ್ಚು ಸದಸ್ಯರನ್ನು ನೋಂದಣಿ ಮಾಡಿಸುತ್ತಾರೋ ಅವರಿಗೆ ₹1.8 ಲಕ್ಷ ಬಹುಮಾನ ನೀಡುತ್ತೇನೆಂದು ಸಿದ್ದಾರ್ಥ ಸಿಂಗ್ ಘೋಷಣೆ ಮಾಡಿದ್ದಾರೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 6 ತಿಂಗಳಲ್ಲೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಪಾದಯಾತ್ರೆ ಮಾಡಿ ಸರ್ಕಾರಕ್ಕೆ ಚಳಿ ಬಿಡಿಸಿದ್ದಾರೆ. ಪ್ರತಿ ಇಲಾಖೆಯ ಸಚಿವರು ಲೂಟಿಗೆ ನಿಂತಿದ್ದಾರೆ. ಇವರ ಹಗರಣಗಳನ್ನು ಬಯಲಿಗೆಳೆದು ಜನರ ಮುಂದೆ ಇವರ ಮುಖವಾಡ ಕಳಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಸಂವಿಧಾನದಲ್ಲಿ ರಾಜಪಾಲರ ಹುದ್ದೆಗೆ ಬಹಳ ಗೌರವವಿದೆ. ಅವರಿಗೆ ಬಾಯಿಗೆ ಬಂದಂತೆ ಮಾತನಾಡದೇ ತಾವು ಮಾಡಿರುವ ತಪ್ಪು ಒಪ್ಪಿಕೊಳ್ಳಬೇಕಿದೆ. ನೀವು (ಸಿಎಂ ಸಿದ್ದರಾಮಯ್ಯ) ತಪ್ಪು ಮಾಡದಿದ್ದರೆ ಏಕೆ ಹೆದರುತ್ತೀರಿ? ತನಿಖೆ ಎದುರಿಸಿ. ಅದು ಬಿಟ್ಟು ಪ್ರಚೋದನಕಾರಿ ಭಾಷಣ ಮಾಡುತ್ತಾ, ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಹೇಳಿದರು.ಈಟಿ ಲಿಂಗರಾಜ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಮಂಡಲದ ಅಧ್ಯಕ್ಷ ಹಣ್ಣಿ ಶಶಿಧರ, ಮುಖಂಡರಾದ ಬಲ್ಲಹುಣ್ಸಿ ರಾಮಣ್ಣ, ಎಚ್.ಪೂಜೆಪ್ಪ, ಎಸ್.ಸಂಜೀವ ರಡ್ಡಿ, ಓದೋ ಗಂಗಪ್ಪ, ಎಂ.ಪರಮೇಶಪ್ಪ, ಭಾಗ್ಯಮ್ಮ, ವಾರದ ಗೌಸ್ ಮೋಹಿದ್ದೀನ್, ತೋಟಾ ನಾಯ್ಕ, ಸೋಗಿ ವೀರಭದ್ರಪ್ಪ, ಗುರುಸಿದ್ದಪ್ಪ, ಸಿ.ಮೋಹನ ರಡ್ಡಿ, ಬೀರಬ್ಬಿ ಬಸವರಾಜ, ಶಿವಪುರ ಸುರೇಶ, ಪುತ್ರೇಶ ಇದ್ದರು.