ಸಾರಾಂಶ
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಣ್ಣು ಹಾಯಿಸಿದಷ್ಟು, ಎಲ್ಲಿ ನೋಡಿದರೂ ಅಲ್ಲಿ ಭಕ್ತರ ದಂಡೇ ಕಾಣುತ್ತಿದೆ
ಹೂವಿನಹಡಗಲಿ: ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಣ್ಣು ಹಾಯಿಸಿದಷ್ಟು, ಎಲ್ಲಿ ನೋಡಿದರೂ ಅಲ್ಲಿ ಭಕ್ತರ ದಂಡೇ ಕಾಣುತ್ತಿದೆ. ನಾಡಿನ ಭವಿಷ್ಯ ನುಡಿ ಕಾರ್ಣಿಕ ಆಲಿಸಲು ರಾಜ್ಯ ಅಂತರಾಜ್ಯಗಳಿಂದ ಲಕ್ಷೋಪಲಕ್ಷ ಭಕ್ತರು ಆಗಮಿಸಿದ್ದರು.
ಕಳೆದ 3-4 ದಿನಗಳಿಂದ ಎತ್ತಿನಬಂಡಿ, ಟ್ಯಾಕ್ಟರ್, ಇತರೆ ವಾಹನ ಮತ್ತು ಸರ್ಕಾರಿ ಬಸ್‌ಗಳ ಮೂಲಕ ಮೈಲಾರಕ್ಕೆ ಭಕ್ತರು ಆಗಮಿಸಿದ್ದರು. ಭಕ್ತರ ಸಂಖ್ಯೆ ಹೆಚ್ಚಿತ್ತು. ಕಾರ್ಣಿಕ ನುಡಿಯುವ ಡೆಂಕಣ ಮರಡಿಯ ತುಂಬೆಲ್ಲ ಭಕ್ತರು ನೆರೆದಿದ್ದರು. ಐತಿಹಾಸಿಕ ಬಿಲ್ಲಿನೊಂದಿಗೆ ಉಪವಾಸ ವ್ರತದಲ್ಲಿದ್ದ ಗೊರವಯ್ಯನನ್ನು ಕಾಯಲು ಸಾವಿರಾರು ಭಕ್ತರು ಕೂಡ ಉಪವಾಸ ವ್ರತ ಆಚರಿಸಿದರು. ಡೆಂಕಣ ಮರಡಿಯಲ್ಲಿ ಭಕ್ತರು ಕಾಯ್‌ಕೋಲ್ ಸೇವೆ, ಢಮರುಗ, ಚಾಮರ ಸೇವೆಗಳು ನಡೆದವು.ಜಾತ್ರೆಗೆ ಬಂದ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮೈಲಾರ ಗ್ರಾಮ ಪಂಚಾಯಿತಿ ಹೆಚ್ಚು ಆಸಕ್ತಿ ವಹಿಸಿ, ಎಲ್ಲ ಕಡೆಗೂ ಸ್ವಚ್ಛತೆ ಮಾಡಲು 200ಕ್ಕೂ ಹೆಚ್ಚು ಕಾರ್ಮಿಕರನ್ನು ನಿಯೋಜಿಸಿತ್ತು. ಮುಖ್ಯ ರಸ್ತೆ ಸೇರಿದಂತೆ ಡೆಂಕಣ ಮರಡಿಗೆ, ಹೋಗುವ ದಾರಿಯಲ್ಲಿ ನೀರು ಸಿಂಪರಣೆ ಮಾಡಿ ಧೂಳು ಮುಕ್ತ ರಸ್ತೆ ವ್ಯವಸ್ಥೆ ಮಾಡಿದ್ದರು. ಇದರಿಂದ ಜಾತ್ರೆ ಸುಗಮವಾಗಿ ನಡೆಯಿತು.
ತುಂಗಭದ್ರಾ ನದಿಗೆ ಭದ್ರ ಡ್ಯಾಂನಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ನದಿಯಲ್ಲಿ ಮರಳಿನ ಗುಂಡಿಗಳು ನಿರ್ಮಾಣವಾಗಿದ್ದು, ಸ್ನಾನ ಮಾಡಲು ಹೋಗಿ ಪ್ರಾಣಾಪಾಯದಲ್ಲಿರುವವರ ರಕ್ಷಣೆಗಾಗಿ ಯಾಂತ್ರಿಕೃತ ಬೋಟಿನ ವ್ಯವಸ್ಥೆಯ ಜತೆಗೆ ಹತ್ತಾರು ಈಜುಗಾರರನ್ನು ನಿಯೋಜಿಸಿತ್ತು.