ಸಾರಾಂಶ
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಅನುಮತಿ ಪಡೆದ ಬಳಿಕ ನಿಯಮ ಮೀರಿ ಅಟೆಂಡರ್ ನೇಮಕ ಮತ್ತು ಗಣಕಯಂತ್ರ, ಯೋಗ ತರಬೇತಿಗೆ ಅತಿಥಿ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಲಕ್ಷಾಂತರ ರು. ಪಡೆದು ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಕನ್ನಡಪ್ರಭ ವರದಿ ಮಾಡಿದ್ದರಿಂದ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಈ ಹಗರಣ ತನಿಖೆಗಾಗಿ ಮೂವರು ಅಧಿಕಾರಿಗಳನ್ನು ನೇಮಿಸಿದೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಅನುಮತಿ ಪಡೆದ ಬಳಿಕ ನಿಯಮ ಮೀರಿ ಅಟೆಂಡರ್ ನೇಮಕ ಮತ್ತು ಗಣಕಯಂತ್ರ, ಯೋಗ ತರಬೇತಿಗೆ ಅತಿಥಿ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಲಕ್ಷಾಂತರ ರು. ಪಡೆದು ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಕನ್ನಡಪ್ರಭ ವರದಿ ಮಾಡಿದ್ದರಿಂದ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಈ ಹಗರಣ ತನಿಖೆಗಾಗಿ ಮೂವರು ಅಧಿಕಾರಿಗಳನ್ನು ನೇಮಿಸಿದೆ. ಪಟ್ಟಣದ ಡಾ.ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥೆಯ ಶ್ರೀಕಂಠ, ಕೖಷ್ಣ ಇನ್ನಿತರರು ಮೊದಲಿಗೆ ನಾವು ಉಚಿತವಾಗಿ ಗಣಕಯಂತ್ರ ಸಿಬ್ಬಂದಿ ಮತ್ತು ಯೋಗ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನಿಯೋಜಿಸಿ, ನಮ್ಮ ಸಂಸ್ಥೆಯಿಂದ ಅವರಿಗೆ ಸಂಬಳ ಪಾವತಿಸುತ್ತೇವೆ ಎಂಬ ಮನವಿ ಮೇರೆಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರಿಂದ ಅನುಮತಿ ಆದೇಶ ಪಡೆದಿದ್ದಾರೆ.ಆದರೆ ಶಿಕ್ಷಕರ ನಿಯೋಜನೆಗೆ ಪ್ರತಿ ಶಾಲೆಗೆ ಕಳುಹಿಸಲು ಒಂದೊಂದು ದರ ನಿಗದಿ ಮಾಡಿ ವಸೂಲಿ ಮಾಡಲಾಗಿದೆ. ಇಲ್ಲಿ ಡಿಡಿಪಿಐ ಆದೇಶವನ್ನೆ ಮಾನದಂಡವನ್ನಾಗಿಸಿಕೊಂಡು ಲಕ್ಷಾಂತರ ರು. ಭ್ರಷ್ಟಾಚಾರ ನಡೆಸಲಾಗಿದೆ. ಅಲ್ಲದೆ ಡಿಡಿಪಿಐ ಅಟೆಂಡರ್ ನೇಮಕಕ್ಕೆ ಅನುಮತಿ ನೀಡಿಲ್ಲ, ಆದರೂ ಅಟೆಂಡರ್ ನೇಮಿಸಿಕೊಂಡು ಸಂಸ್ಥೆ ಅಕ್ರಮ ಮತ್ತು ಭ್ರಷ್ಟಾತಾರ ಎಸಗಿರುವ ಬಗ್ಗೆ ಗಂಭೀರ ಆರೋಪವಿದೆ. ಈ ಹಗರಣದಲ್ಲಿ ಶಿಕ್ಷಣ ಇಲಾಖೆಯ ಕೆಲವರು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ನೇಮಕಗೊಂಡವರು ತನಿಖೆಯನ್ನು ಯಾವ ಪ್ರಮಾಣದಲ್ಲಿ ನಡೆಸಿ ವರದಿ ಸಲ್ಲಿಸಲಿದ್ದಾರೆ. ಯಾರನ್ನು ವಿಚಾರಣೆಗೊಳಪಡಿಸಲಿದ್ದಾರೆ ಎಂಬುದೇಗ ಯಕ್ಷಪ್ರಶ್ನೆಯಾಗಿದೆ. ತನಿಖಾ ತಂಡ ಜ.4ರಂದು ತನಿಖೆ ನಡೆಸುವ ಸಂಬಂಧ ಹನೂರಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು, ಆದರೆ ಸೋಮವಾರ ತನಿಖೆ ನಡೆಸಿ ವರದಿ ಸಲ್ಲಿಸುವ ಸಾಧ್ಯತೆ ಇದೆ. ತನಿಖಾ ತಂಡದ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಕಲಾಂ ಸಂಸ್ಥೆಯ ನೇಮಕಾತಿ ಅಕ್ರಮದ ವಿಚಾರ ಕುರಿತು ತನಿಖೆಗೆ ಡಿಡಿಪಿಐ ಅವರು ಜಿಲ್ಲಾ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಹಾಗೂ ನನ್ನನು ಸೇರಿದಂತೆ ಇನ್ನಿತರರನ್ನು ನೇಮಿಸಿದ್ದು, ಈ ಸಂಬಂಧ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಸತ್ಯಾಸತ್ಯತೆ ಪರಿಶೀಲಿಸಿ ವರದಿ ಸಲ್ಲಿಸಲಾಗುವುದು.ನಾಗೇಂದ್ರ, ಡಿವೈಪಿಸಿ ಚಾ.ನಗರ ತನಿಖೆಗೆ ಡಿವೈಪಿಸಿ, ಇಒ ನೇಮಕ: ಈ ಪ್ರಕರಣದ ಸತ್ಯಾಸತ್ಯತೆಗಾಗಿ ಕಲಂ ಸಂಸ್ಥೆಗೆ ಅನುಮತಿ ನೀಡಿ ಅಧ್ವಾನಕ್ಕೆ ಕಾರಣೀಕರ್ತರಾದ ಡಿಡಿಪಿಐ ಅವರೇ ಇಲಾಖಾಧಿಕಾರಿಗಳ ತಂಡವನ್ನು ತನಿಖೆಗಾಗಿ ನೇಮಿಸಿದ್ದಾರೆ. ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ನಾಗೇಂದ್ರ, ಜಿಲ್ಲಾ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಮತ್ತು ಹನೂರು ಬಿಇಒ ಗುರುಲಿಂಗಯ್ಯರನ್ನು ನೇಮಕ ಮಾಡಲಾಗಿದೆ.
ತನಿಖಾ ತಂಡಕ್ಕೆ ಬಿಇಒ ನೇಮಕ ಸಮಂಜಸವಲ್ಲ: ಹನೂರು ಶಿಕ್ಷಣಾಧಿಕಾರಿಗಳೇ ಇತ್ತೀಚೆಗೆ ಕಲಾಂ ಸಂಸ್ಥೆಯು ಅಕ್ರಮವಾಗಿ ನೇಮಿಸಿಕೊಂಡ ಅಟೆಂಡರ್‌ಗಳನ್ನು ಬಿಡುಗಡೆಗೊಳಿಸಿ ಎಂದು ಆದೇಶ ಹೊರಡಿಸಿ ವಿವಾದಕ್ಕಿಡಾಗಿದ್ದರು. ಅಲ್ಲದೆ ಡಿಡಿಪಿಐ ಅಟೆಂಡರ್ ನೇಮಕಕ್ಕೆ ಆದೇಶ ನೀಡಿಲ್ಲ, ಅಲ್ಲದಿದ್ದರೂ ಹೇಗೆ ಸರ್ಕಾರಿ ಶಾಲೆಗಳಿಗೆ ಅಟೆಂಡರ್ ಸೇರಿಸಿಕೊಳ್ಳಲಾಯಿತು ಎಂಬುದು ಶಂಕೆ ಮೂಡಿದೆ. ಇನ್ನು ಈವಿಚಾರದಲ್ಲಿ ಕೂಡಲೇ ಅಟೆಂಡರ್‌ಗಳನ್ನು ಬಿಡುಗಡೆಗೊಳಿಸಿ ಎಂಬ ಹನೂರು ಬಿಇಒ ಆದೇಶ ಡಿಡಿಪಿಐ ಆದೇಶಕ್ಕೆ ವಿರೋಧವಿದೆ. ಯಾರ ಸೂಚನೆ ಮೇರೆಗೆ ಇವರು ಈ ಆದೇಶ ಹೊರಡಿಸಿದ್ದರು ಎಂಬ ಪ್ರಶ್ನೆ ಉದ್ಬವವಾಗಿದೆ. ಈ ಆದೇಶದ ವೇಳೆ ನಿಯಮ ಮೀರಿ ನೇಮಕಾತಿ ಎಂಬ ವಿಚಾರ ಪ್ರಸ್ತಾಪಿಸಲಾಗಿರುವುದನ್ನು ಗಮನಿಸಿದರೆ ಬಿಇಒಗೆ ಅಕ್ರಮ ನಡೆದಿದೆ ಎಂಬ ಮಾಹಿತಿಗಳಿವೆ ಎನ್ನಲಾಗಿದೆ. ಅಕ್ರಮ ಮನಗಂಡೆ ಈ ಆದೇಶ ಹೊರಡಿಸಿರಬಹುದು ಎನ್ನಲಾಗಿದೆ. ಇವರನ್ನು ಸಹಾ ಈ ಪ್ರಕರಣದಲ್ಲಿ ವಿಚಾರಣೆಗೊಳಪಡಿಸಬೇಕು. ಡಿಡಿಪಿಐ ಬಿಇಒರನ್ನು ತನಿಖಾ ತಂಡಕ್ಕೆ ನೇಮಿಸಿರುವುದು ಸಮಂಜಸವಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಕ್ಕೂ ಕಾರಣವಾಗಿದೆ.