ಚಿತ್ರಸಂತೆಗೆ ಹರಿದುಬಂದ ಪ್ರವಾಹದಂತೆ ಜನಸಾಗರ!

| Published : Jan 08 2024, 01:45 AM IST

ಸಾರಾಂಶ

ಚಿತ್ರಸಂತೆಗೆ ಹರಿದುಬಂದ ಪ್ರವಾಹದಂತೆ ಜನಸಾಗರ! ಹಿಂದಿಗಿಂತಲೂ ಹೆಚ್ಚು ಕಲಾವಿದರು, ಜನರು ಭಾಗಿ, ಶಿವಾನಂದ ಸರ್ಕಲ್‌ ರಸ್ತೆವರೆಗೂ ಹಬ್ಬಿದ್ದ ಸಂತೆ. ವಿದೇಶದಿಂದ ಬಂದಿದ್ದ ಕಲಾಪ್ರೇಮಿಗಳು. ಗಮನ ಸೆಳೆದ ವಾಟರ್ ಕಲರ್‌, ಸ್ಟೋನ್‌ ಆರ್ಟ್‌, ಗ್ಲಾಸ್‌ ಪೇಂಟಿಂಗ್‌, ಕ್ಯಾರಿಕೆಚರ್‌, ಚರ್ಮದ ಮೇಲೆ ಬರೆದ ಚಿತ್ರಗಳು. ಮಿನಿಯೇಚರ್‌ ಆಕರ್ಷಣೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿಲಿಕಾನ್‌ ಸಿಟಿಯ ಕಲಾರಾಧನಾ ದಿನ ‘ಚಿತ್ರಸಂತೆ’ಗೆ ಜನಸಾಗರ ಅಕ್ಷರಶಃ ಮನಸೋತಿತು. ಹಿಂದೆಂದಿಗಿಂತಲೂ ಹೆಚ್ಚಿನ ಕಲಾವಿದರು, ಕಲಾಕೃತಿಗಳ ಆಗಮನದಿಂದ ಅದ್ಧೂರಿಯಾಗಿ ಜರುಗಿದ ಕಲಾಜಾತ್ರೆಗೆ ಒಂದೇ ದಿನ 4 ಲಕ್ಷ ಜನ ಭೇಟಿ ನೀಡಿದ್ದು, ಬರೋಬ್ಬರಿ ₹5 ಕೋಟಿಗೂ ಹೆಚ್ಚು ವಹಿವಾಟು ಕಂಡಿದೆ.

ಚಿತ್ರಕಲಾ ಪರಿಷತ್‌ನಿಂದ ಭಾನುವಾರ ನಡೆದ 21ನೇ ‘ಚಿತ್ರಸಂತೆ’ಯಲ್ಲಿ ಮನಸೂರೆಗೊಳ್ಳುವ ವಿವಿಧ ಕಲಾಕೃತಿಗಳಿಂದ ವಿವಿಧ ರಾಜ್ಯಗಳ ಕಲಾವಿದರು ಕಳೆದ ವರ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಇಲ್ಲಿವರೆಗೆ ಕುಮಾರಕೃಪಾ ರಸ್ತೆಯಲ್ಲಿ ಮಾತ್ರ ನಡೆಯುತ್ತಿದ್ದ ಕಲಾವಿದರ ಜಾತ್ರೆ ಈ ಬಾರಿ ಶಿವಾನಂದ ಸರ್ಕಲ್‌ ರಸ್ತೆಗೆ ಹಬ್ಬಿತ್ತು.

ಬೆಳಗ್ಗೆಯಿಂದಲೇ ಚಿತ್ರ ಕಲಾವಿದರ, ಕಲಾಪ್ರೇಮಿಗಳ ಕಲರವ ಜೋರಾಗಿತ್ತು. ಎರಡೂ ರಸ್ತೆಗಳ ಉದ್ದಕ್ಕೂ ಇಕ್ಕೆಲದಲ್ಲಿ ಕಲಾವಿದರು ತಮ್ಮ ಕೃತಿಗಳ ಪ್ರದರ್ಶನ, ಮಾರಾಟ ಆರಂಭಿಸಿದ್ದರು. ಬೆಂಗಳೂರು ಮಾತ್ರವಲ್ಲದೆ ದೇಶ, ವಿದೇಶದಿಂದ ಆಗಮಿಸಿದ್ದ ಜನ ಕಲಾಸ್ವಾದನೆ ಮಾಡಿದರು. ಇಡೀ ದಿನ ಜನತೆ ಓಡಾಡಿ ಕಲಾಕೃತಿಗಳ ವಿವರ, ಪಟ್ಟ ಶ್ರಮದ ಮಾಹಿತಿ ಪಡೆದರು.ಅನೇಕರು ತಮಗೆ ಇಷ್ಟವಾದ ಕೃತಿಗಳನ್ನು ಖರೀದಿಸಿದರು.

ಚಿತ್ರಸಂತೆಗೆ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ದೆಹಲಿ, ಪುದುಚೆರಿ, ಗೋವಾ, ರಾಜಸ್ಥಾನ, ಉತ್ತರಪ್ರದೇಶ ಸೇರಿದಂತೆ 22 ರಾಜ್ಯಗಳ 1780ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು. 400ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಾವು ರಚಿಸಿ ತಂದಿದ್ದ ಚಿಕ್ಕಪುಟ್ಟ ಗಾತ್ರದಿಂದ ಹಿಡಿದು ಆಳೆತ್ತರದ ಕೃತಿಗಳನ್ನು ಪ್ರದರ್ಶಿಸಿದರು.

ತರಹೇವಾರಿ ಕಲಾಕೃತಿ:

ಕ್ಯಾನ್ವಾಸ್‌ ಮೇಲೆ ಬರೆಯಲಾದ ಚಿತ್ರಗಳ ಜೊತೆಗೆ ವಾಟರ್‌ ಕಲರ್‌, ಸ್ಟೋನ್‌ ಆರ್ಟ್‌, ಬಾಟಲ್‌ ಆರ್ಟ್‌, ಗ್ಲಾಸ್‌ ಪೇಂಟಿಂಗ್‌, ಕ್ಯಾರಿಕೆಚರ್‌, ಲ್ಯಾಂಡ್‌ಸ್ಕೇಪ್‌, ಸಾಂಪ್ರದಾಯಿಕ ಚರ್ಮದ ಮೇಲೆ ಬರೆದ ಚಿತ್ರ, ಕರ್ನಾಟಕದ ಹಸೆ ಚಿತ್ರ, ಬಿಹಾರದ ಟಿಕುಲಿ, ರಾಜಸ್ಥಾನದ ಮಂಡನಾ ಚಿತ್ರಕಲೆಗಳು ಗಮನ ಸೆಳೆದವು. ರೇಷ್ಮೆ, ಕಾಗದ, ಮರ ಮತ್ತು ಅಮೃತಶಿಲೆ, ವರ್ಣಚಿತ್ರಗಳು. ಮೇಣದ ಕಲಾಕೃತಿ, ಮಿನಿಯೇಚರ್ ಪೇಂಟಿಂಗ್‌ಗಳು ಕಲಾಸಕ್ತರನ್ನು ಆಕರ್ಷಿಸಿದವು.

₹15 ಲಕ್ಷದ ಜಲ್ಲಿಕಟ್ಟು ಚಿತ್ರ

ಹೈದ್ರಾಬಾದ್‌ ಮೂಲದ ಕಲಾವಿದ ಪರಶುರಾಮ್‌ ರೂಪಿಸುತ್ತಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಮಹಿಳೆ ಕೋಣವನ್ನು ತಬ್ಬಿರುವ ಚಿತ್ರ ಬರೋಬ್ಬರಿ ₹15 ಲಕ್ಷ ಬೆಲೆಯಿಂದ ಆಕರ್ಷಿಸಿತು. ಆಯಿಲ್‌ ಪೇಂಟ್‌ ಬಳಸಿ ಈ ಚಿತ್ರ ಬರೆದಿದ್ದೇನೆ. ತೇಗದ ಮರದ ಚೌಕಟ್ಟು ಇದಕ್ಕಿದ್ದು, ಕಳೆದ ಆರು ತಿಂಗಳಿಂದ ಬರೆಯುತ್ತಿದ್ದೇನೆ. ಇದಿನ್ನೂ ಪೂರ್ಣಗೊಂಡಿಲ್ಲ. ಚಿತ್ರವನ್ನು ಇಲ್ಲಿ ಮಾರುತ್ತಿಲ್ಲ. ಪ್ರದರ್ಶನಕ್ಕೆ ಮಾತ್ರ ಇಟ್ಟಿದ್ದೇನೆ ಎಂದು ಅವರು ಹೇಳಿದರು.2016ರಿಂದ ಚಿತ್ರಸಂತೆಗೆ ಬರುತ್ತಿದ್ದೇವೆ. ಈ ಬಾರಿ ಚರ್ಮದ ಮೇಲೆ ರಚಿಸಿರುವ ರಾಮಾಯಣದ ಸುಂದರಕಾಂಡ ಚಿತ್ರ, ಮಹಾಭಾರತದ ಕುರುಕ್ಷೇತ್ರ ಯುದ್ಧದ ಚಿತ್ರವನ್ನು ತಂದಿದ್ದೇವೆ ಇದಕ್ಕೆ ಕನಿಷ್ಠ ₹75 ಸಾವಿರದಿಂದ ₹2 ಲಕ್ಷ ಬೆಲೆಯಿದೆ ಎಂದು 2008ರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಆಂಧ್ರಪ್ರದೇಶದ ಚಿತ್ರ ಕಲಾವಿದ ಹನುಮಂತ ತಿಳಿಸಿದರು.

ಮೈಸೂರು ಜಂಬೂ ಸವಾರಿಯ ಚಿತ್ರ ಕಲಾಕೃತಿ ತಂದಿದ್ದ ಬೆಳಗಾವಿಯ ಕಲಾವಿದೆ ಮೀನಾಕ್ಷಿ ಸದಲಗಿ ಮಾತನಾಡಿ, ಕಳೆದ ವರ್ಷ ನಾನು ಮಂತ್ರಾಲಯದ ಲ್ಯಾಂಡ್‌ಸ್ಕೇಪ್‌ ಚಿತ್ರಗಳನ್ನು ತಂದಿದ್ದೆ. 1-2 ಲಕ್ಷ ಮೌಲ್ಯದ ಈ ಕಲಾಕೃತಿಗಳು ಮಾರಾಟ ಆಗಿದ್ದವು. ಜಂಬೂ ಸವಾರಿ ಚಿತ್ರಕ್ಕೆ ₹50 ಸಾವಿರದಿಂದ ₹3 ಲಕ್ಷ ಬೆಲೆ ನಿಗದಿಸಿದ್ದೇನೆ ಎಂದರು.

ಬೆಂಗಳೂರಿನ ಎಸ್‌.ಅಂಜನ್‌ ರೂಪಿಸಿದ್ದ ಸಾಂಪ್ರದಾಯಿಕ ವಾದ್ಯದ ಗೋಡೆ ಚಿತ್ರಕಲೆ ವಿಶೇಷವಾಗಿತ್ತು. ಗೋಡೆಗೆ ಅಳವಡಿಸುವ ಚಿತ್ರಕಲೆ ಇದಾಗಿದ್ದು, ಪ್ರಖ್ಯಾತ ಕಲಾವಿದರ ಚಿತ್ರದ ಜೊತೆಗೆ ಅವರು ನುಡಿಸುವ ನೈಜ ಮಾದರಿಯ ವೀಣೆ, ತಬಲಾ, ಕೊಳಲು, ಕೀ ಬೋರ್ಡ್‌ ಅಳವಡಿಸಲಾಗುತ್ತದೆ. ಸ್ವಿಚ್‌ ಒತ್ತಿದಲ್ಲಿ ಲೈಟಿಂಗ್‌ ಜೊತೆಗೆ ವಾದ್ಯಗಳಿಂದ ಧ್ವನಿ ಹೊರಹೊಮ್ಮುವಂತೆ ಮಾಡಲಾಗಿದೆ ಎಂದು ತಿಳಿಸಿದರು. ₹75 ಸಾವಿರದಿಂದ ₹1.50 ಲಕ್ಷ ಬೆಲೆಯಿದೆ ಎಂದು ಹೇಳಿದರು.