ಸಾರಾಂಶ
ಉತ್ಥಾನ ದ್ವಾದಶಿಯ ಪರ್ವಕಾಲದಲ್ಲಿ ಕಿರಿಯ ಪಟ್ಟ ಶ್ರೀಪಾದರು ಎರಡು ತಿಂಗಳ ಕಾಲ ಗರ್ಭಗುಡಿಯಲ್ಲಿದ್ದ ಕೃಷ್ಣನ ಉತ್ಸವ ಮೂರ್ತಿಯನ್ನು ಹೊರಗೆ ತಂದು, ಮಧ್ವ ಸರೋವರ ಮಂಟಪದಲ್ಲಿ ಉಭಯ ಶ್ರೀಪಾದರು ಸಾಯಂ ಕ್ಷೀರಾಬ್ದಿ ಪೂಜೆಯನ್ನು ವೈಭವದಿಂದ ನಡೆಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕೃಷ್ಣಮಠದ ರಥಬೀದಿಯಲ್ಲಿ ಬುಧವಾರ ಸಂಜೆ ರಥೋತ್ಸವದ ಮೂಲಕ ಮಳೆಗಾಲದ ನಂತರದ ನಿತ್ಯೋತ್ಸವಗಳಿಗೆ ಚಾಲನೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ 4 ದಿನಗಳ ಕಾಲ ನಡೆಯುವ ಲಕ್ಷ ದೀಪೋತ್ಸವವೂ ನಡೆಯಿತು.ಇದಕ್ಕೂ ಮುನ್ನ ಮಧ್ಯಾಹ್ನ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯರೊಂದಿಗೆ ಸಂಪ್ರದಾಯದಂತೆ ರಥಬೀದಿಯಲ್ಲಿ ಅಟ್ಟಳಿಗೆಯ ಮೇಲೆ ಹಣತೆಗಳನ್ನು ಇಟ್ಟು ಲಕ್ಷದೀಪೋತ್ಸವಕ್ಕೆ ಮುಹೂರ್ತ ನಡೆಸಿದರು. ನಂತರ ರಥಕ್ಕೆ ಸಾಂಪ್ರದಾಯಿಕವಾಗಿ ಶಿಖರಪೂಜೆ ಮಾಡಿ ಕಲಶ ಇಡಲಾಯಿತು. ಇದಕ್ಕೆ ಪೂರಕವಾಗಿ ಸಂಜೆ ಕೆಲವು ನಿಮಿಷಗಳ ಕಾಲ ಉಡುಪಿ ನಗರದಲ್ಲಿ ಹನಿಹನಿ ಮಳೆಯೂ ಸುರಿಯಿತು.
ಸಂಜೆ ಉತ್ಥಾನ ದ್ವಾದಶಿಯ ಪರ್ವಕಾಲದಲ್ಲಿ ಕಿರಿಯ ಪಟ್ಟ ಶ್ರೀಪಾದರು ಎರಡು ತಿಂಗಳ ಕಾಲ ಗರ್ಭಗುಡಿಯಲ್ಲಿದ್ದ ಕೃಷ್ಣನ ಉತ್ಸವ ಮೂರ್ತಿಯನ್ನು ಹೊರಗೆ ತಂದು, ಮಧ್ವ ಸರೋವರ ಮಂಟಪದಲ್ಲಿ ಉಭಯ ಶ್ರೀಪಾದರು ಸಾಯಂ ಕ್ಷೀರಾಬ್ದಿ ಪೂಜೆಯನ್ನು ವೈಭವದಿಂದ ನಡೆಸಿದರು.ನಂತರ ರಥಬೀದಿಯಲ್ಲಿ ಕಾಯುತ್ತಿದ್ದ ಸಾವಿರಾರು ಮಂದಿ ಭಕ್ತರು ಭಕ್ತಿಯಿಂದ ಲಕ್ಷ ದೀಪಗಳನ್ನು ಹಚ್ಚಿದರು. ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯಿತು.