ಸಾರಾಂಶ
- ಜಾನ್ಸಾಲೆ ಗ್ರಾಮದಲ್ಲಿ ಕ್ಯಾತನಬೀಡು ಪ್ರತಿಷ್ಟಾನದಿಂದ ರೈತರ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಹಳಷ್ಟು ವರ್ಷಗಳ ಹಿಂದೆಯೇ ಬಯಲು ಸೀಮೆ ಜನರ ಜೀವನಾಡಿಯಾಗಿದ್ದ ಸಖರಾಯ ಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಕ್ಯಾತನಬೀಡು ಪ್ರತಿಷ್ಟಾನದ ಕಾರ್ಯದರ್ಶಿ ರವೀಶ್ ಕ್ಯಾತನಬೀಡು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಜಾನ್ಸಾಲೆ ಗ್ರಾಮದ ಕೃಷಿಕ ರವೀಶ್ ಅವರ ಮನೆಯಂಗಳದಲ್ಲಿ ಕ್ಯಾತನ ಬೀಡು ಪ್ರತಿಷ್ಟಾನ ಗುರುವಾರ ಏರ್ಪಡಿಸಿದ್ದ ರೈತರ ಸಭೆಯಲ್ಲಿ ಮಾತನಾಡಿ, ಇದೀಗ ಜೀರ್ಣಾವಸ್ಥೆಯಲ್ಲಿರುವ 50 ಎಕರೆಯಷ್ಟು ವಿಶಾಲವಾದ ಲಕ್ಸಾಗರಕೆರೆ ಬಹಳಷ್ಟು ವರ್ಷಗಳ ಹಿಂದೆ ನೀರಿನಿಂದ ತುಂಬಿ ತುಳುಕುತ್ತಿತ್ತು, ಜಾನ್ಸಾಲೆ ಸುತ್ತಮುತ್ತಲ ರೈತರ ಜೀವ ಸೆಲೆಯಾಗಿತ್ತು. ಆದರೆ, ಇದೀಗ ಆ ಕೆರೆ ನೀಲಗಿರಿ ಮರಗಳ ತೋಪಾಗಿ ಅವಸಾನದ ಅಂಚಿ ನಲ್ಲಿದ್ದು ಕೃಷಿಕರ ಉಪಯೋಗಕ್ಕೆ ಬಾರದಂತಾಗಿದೆ ಎಂದು ವಿಷಾದಿಸಿದರು.ಬಯಲು ಸೀಮೆಯಲ್ಲಿ ಯಾವಾಗಲೂ ಮಳೆ ಕೊರತೆ ಎದುರಾಗುವುದರಿಂದ ರಾಜ್ಯ ಸರ್ಕಾರ ಲಕ್ಸಾಗರ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು, ಗುಡ್ಡಗಳ ಬೀಳು ನೀರು ಕೆರೆಗೆ ಹರಿಯುವಂತೆ ಮಾಡಬೇಕು. ಸ್ಥಳೀಯ ರೈತರೂ ಸಹ ಕಣ್ಮರೆ ಯಾಗುತ್ತಿರುವ ಕೆರೆ ಉಳಿಸಲು, ಸಂರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು.ರೈತ ಸಮುದಾಯ ಮಾತು ಮರೆತು ಮೌನಕ್ಕೆ ಶರಣಾಗಿರುವ ಈ ಹೊತ್ತಿನಲ್ಲಿ ಕೃಷಿಕರ ನೋವು, ನಲಿವು, ಸಂಕಟ, ಬೇಗುದಿ ಹಂಚಿಕೊಳ್ಳುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.ಸಭೆ ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ಗುರುಶಾಂತಪ್ಪ, ಜಿಲ್ಲೆಯಲ್ಲಿ ಹುಟ್ಟುವ ಎಲ್ಲಾ ನದಿಗಳು ಬೇರೆ ಜಿಲ್ಲೆಗಳಿಗೆ, ಬೇರೆ ರಾಜ್ಯಗಳಿಗೆ ಹರಿದು ಅಲ್ಲಿ ನನ್ನ ನೆಲವನ್ನು ಸಂಪದ್ಭರಿತಗೊಳಿಸುತ್ತಿವೆ. ಆದರೆ ನಮಗೆ ಅದರಿಂದ ಯಾವುದೇ ಪ್ರಯೋಜನವೂ ಆಗುತ್ತಿಲ್ಲ. ಜಿಲ್ಲೆಯಲ್ಲಿರುವ ಕೆರೆಕಟ್ಟೆಗಳು ದಿನೇ ದಿನೇ ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿ ಕೊಳ್ಳುವತ್ತ ರೈತಾಪಿ ವರ್ಗ ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.ಆಧುನಿಕತೆಯಿಂದ ರಾಸಾಯನಿಕ ಕೃಷಿಗೆ ರೈತರು ಮುಂದಾದ ಪರಿಣಾಮ ಇಂದು ಭೂಮಿ ಬರಡಾಗುತ್ತಿದೆ. ಕುಡಿಯುವ ನೀರು, ಗಾಳಿ, ತಿನ್ನುವ ಅನ್ನ ಎಲ್ಲವೂ ವಿಷವಾಗಿದೆ. ರೈತರು ಈಗಲಾದರೂ ಎಚ್ಚೆತ್ತು ಕೊಳ್ಳಬೇಕು. ನೆಲ, ಜಲವನ್ನು ಉಳಿಸಿ ಕೊಳ್ಳಲು ಮುಂದಾಗಬೇಕು ಎಂದು ಸಲಹೆ ಮಾಡಿದರು.ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್ ಮಾತನಾಡಿ, ಸಾಲ ಸೋಲಗಳಿಂದ, ಸರ್ಕಾರಗಳ ಕಡೆಗಣನೆಯಿಂದ ಬೇಸತ್ತು ರೈತ ಕುಟುಂಬಗಳಿಂದು ಕೃಷಿಯಿಂದ ವಿಮುಖವಾಗುತ್ತಿವೆ. ದೇಶದಲ್ಲಿ ಶೇ.80 ರಷ್ಟಿದ್ದ ಕೃಷಿ ಭೂಮಿ ಇಂದು ಶೇ. 56ಕ್ಕೆ ಇಳಿದಿದೆ. ಕಾರ್ಪೊರೇಟ್ ಕಂಪನಿಗಳು, ಮಾಫಿಯಾಗಳು, ಕೃಷಿ ಭೂಮಿ ಕಬಳಿಸುತ್ತಿವೆ ಎಂದು ವಿಷಾದಿಸಿದರು.ರೈತ ಸಮುದಾಯ ಈಗಲಾದರೂ ಎಚ್ಚೆತ್ತು ಭೂಮಿ ಫಲವತ್ತತೆ ಕಾಪಾಡಿಕೊಳ್ಳುವುದೂ ಸೇರಿದಂತೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕುರಿತು ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಕೃಷಿಕ ನಿಂಗಪ್ಪ, ರೈತರು ಒಂದಾಗಿ ಹೋರಾಟ ಮಾಡಿದರೆ ಮಾತ್ರ ಕೆರೆ, ಕಟ್ಟೆ, ನೆಲ, ಜಲ ಉಳಿಸಿಕೊಳ್ಳಲು ಸಾಧ್ಯ ಎಂದರು.ಕೃಷಿಕ ರವೀಶ್, ತಾಪಂ ಮಾಜಿ ಅಧ್ಯಕ್ಷ ಎನ್.ಡಿ. ಚಂದ್ರಪ್ಪ, ಸಾಹಿತಿ ಡಿ.ಎಂ. ಮಂಜುನಾಥಸ್ವಾಮಿ, ಕೃಷಿಕರಾದ ಪಿಳ್ಳೇನಹಳ್ಳಿ ವಿಜಯಕುಮಾರ್, ನಿಂಗಪ್ಪ, ಚಂದ್ರಪ್ಪ, ಗಂಗಾಧರ್ ಶಿವಪುರ ಸಭೆಯಲ್ಲಿ ಪಾಲ್ಗೊಂಡಿದ್ದರು. 11 ಕೆಸಿಕೆಎಂ 2ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಜಾನ್ಸಾಲೆ ಗ್ರಾಮದ ಕೃಷಿಕ ರವೀಶ್ ಅವರ ಮನೆಯಂಗಳದಲ್ಲಿ ಕ್ಯಾತನಬೀಡು ಪ್ರತಿಷ್ಟಾನ ಗುರುವಾರ ಏರ್ಪಡಿಸಿದ್ದ ರೈತರ ಸಭೆಯಲ್ಲಿ ಗುರುಶಾಂತಪ್ಪ ಮಾತನಾಡಿದರು.