ಲಕ್ಷ ದೀಪೋತ್ಸವ ಸಮಿತಿಯಿಂದ ಏರ್ಪಡಿಸಿದ್ದ ದೀಪೋತ್ಸವದಲ್ಲಿ ದೇವಾಲಯದ ಎದುರಿನಿಂದ ಗಂಡು ಭೇರುಂಡ ವೃತ್ತದ ವರೆಗಿನ ರಸ್ತೆಯ ಎರಡೂ ಬದುಗಳಲ್ಲೂ ಬಿದಿರಿನ ದಬ್ಬೆಗಳ ಮೇಲೆ ಸಾಲು ಸಾಲಾಗಿ ಹಚ್ಚಲಾಗಿದ್ದ ದೀಪಗಳ ಬೆಳಕು ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇಗುಲದ ಆವರಣದಲ್ಲಿ 36ನೇ ವರ್ಷದ ಲಕ್ಷ ದೀಪೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ದೇಗುಲದ ಆವರಣ ಮುಂಭಾಗದಲ್ಲಿ ನಡೆದ ವೈಭವಯುತ ಲಕ್ಷ ದೀಪೋತ್ಸವ ಭಕ್ತರು ಹಾಗೂ ಸಾರ್ವಜನಿಕರ ಕಣ್ಮನ ತಣಿಸಿತು.

ಲಕ್ಷ ದೀಪೋತ್ಸವ ಸಮಿತಿಯಿಂದ ಏರ್ಪಡಿಸಿದ್ದ ದೀಪೋತ್ಸವದಲ್ಲಿ ದೇವಾಲಯದ ಎದುರಿನಿಂದ ಗಂಡು ಭೇರುಂಡ ವೃತ್ತದ ವರೆಗಿನ ರಸ್ತೆಯ ಎರಡೂ ಬದುಗಳಲ್ಲೂ ಬಿದಿರಿನ ದಬ್ಬೆಗಳ ಮೇಲೆ ಸಾಲು ಸಾಲಾಗಿ ಹಚ್ಚಲಾಗಿದ್ದ ದೀಪಗಳ ಬೆಳಕು ಗಮನ ಸೆಳೆಯಿತು. ದೇವಾಲಯದ ಮುಂಭಾಗದ ರಸ್ತೆಯಲ್ಲಿ 10 ಸಾಲು ಹಾಗೂ ಎರಡೂ ಬದುಗಳಲ್ಲಿ ತಲಾ 2 ಸಾಲುಗಳ ಜೊತೆಗೆ ಬಿದಿರು ಪಟ್ಟಿಗಳ ಮೂಲಕ ಎರಡು ಬದಿಯಲ್ಲೂ 4 ಸಾಲುಗಳ ದೀಪಗಳ ಜೋಡಿಸಿ ಅವುಗಳಿಗೆ ಎಣ್ಣೆ ಬತ್ತಿ ಇಟ್ಟು ಜೋಡಣೆ ಮಾಡಲಾಗಿತ್ತು.

ಸಮಿತಿ ಸದಸ್ಯರಾದ ವೇದಬ್ರಹ್ಮ ಡಾ.ಭಾನುಪ್ರಕಾಶ್ ಹಾಗೂ ಲಕ್ಷ್ಮೀಶ್ ನೇತೃತ್ವದಲ್ಲಿ ಸಮಿತಿ ಸದಸ್ಯರು ದೇಗುಲದ ಮುಂಭಾಗದಲ್ಲಿ ಹೋಮ ಹವನಗಳ ನಡೆಸಿ ಪೂಜೆ ಸಲ್ಲಿಸಿದ ನಂತರ ಗೋಧೂಳಿ ಲಗ್ನದಲ್ಲಿ ದೀಪಗಳ ಹಚ್ಚುವ ಕಾರ್ಯಕ್ಕೆ ಚಾಲನೆ ನೀಡಿದರು.

ಸ್ಥಳೀಯರು ಹಾಗೂ ವಿವಿಧೆಡೆ ಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ದೀಪೋತ್ಸವವನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ದೇವಾಲಯದ ಮುಖ್ಯ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ಶ್ರೀರಂಗನಾಥಸ್ವಾಮಿಯನ್ನು ಬೆಣ್ಣೆ ಅಲಂಕಾರ ಮಾಡಿ ವಿಶೇಷವಾಗಿ ಸಿಂಗರಿಸಲಾಗಿತ್ತು. ಶ್ರೀರಂಗನಾಥಸ್ವಾಮಿಯನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೂ ವಿಶೇಷ ಪೂಜೆ, ನೈವೇದ್ಯಗಳು ಜರುಗಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.

ಸಂಕ್ರಾಂತಿ ಹಬ್ಬದಂದು ಮಾತ್ರ ಸ್ವರ್ಗದ ಬಾಗಿಲನ್ನು ತೆರಯುವ ಸಂಪ್ರದಾಯವಿದ್ದು, ಸ್ವರ್ಗದ ಬಾಗಿಲು ಪ್ರವೇಶಿಸಿಲು ಭಕ್ತರು ನಾ ಮುಂದು ತಾ ಮುಂದು ಎಂಬಂತೆ ಮುನ್ನುಗ್ಗುತ್ತಿದ್ದ ದೃಶ್ಯ ಕಂಡು ಬಂತು.

ವರ್ಷಕ್ಕೊಮ್ಮೆ ಮಾತ್ರ ಭಕ್ತರ ದರ್ಶನಕ್ಕೆ ಈ ಬಾಗಿಲನ್ನು ತೆರಯುವುದರಿಂದ ಒಮ್ಮೆ ಈ ಸ್ವರ್ಗದ ಬಾಗಿಲು ಪ್ರವೇಶಿಸಿದರೆ ಮಾಡಿದ ಪಾಪವೆಲ್ಲಾ ಪರಿಹಾರವಾಗುದೆಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಲಕ್ಷ ದೀಪೋತ್ಸವ ಹಾಗೂ ಬೆಣ್ಣ ಅಲಂಕಾರದಿಂದ ಕಂಗೊಳಿಸುತ್ತಿದ್ದ ಶ್ರೀರಂಗನಾಥನನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಟ್ ಅಳವಡಿಸಿದ್ದ ಪೊಲೀಸರು ನೂಕು-ನುಗ್ಗಲಿನಲ್ಲಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸರದಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.