ಗೌಡಗೆರೆ ಕ್ಷೇತ್ರದಲ್ಲಿ ವಿಜೃಂಭಣೆಯ ಲಕ್ಷ ದೀಪೋತ್ಸವ

| Published : Dec 02 2024, 01:19 AM IST

ಗೌಡಗೆರೆ ಕ್ಷೇತ್ರದಲ್ಲಿ ವಿಜೃಂಭಣೆಯ ಲಕ್ಷ ದೀಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಭಾನುವಾರ ಲಕ್ಷ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಭಾನುವಾರ ಲಕ್ಷ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಕ್ಷೇತ್ರದ ಪವಾಡ ಬಸಪ್ಪನವರ ಹುಟ್ಟುಹಬ್ಬ ಹಾಗೂ ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಸಾಗರ ಹರಿದು ಬಂದಿತ್ತು.

ಲಕ್ಷದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಮುಂಜಾನೆಯಿಂದಲೇ ತಾಯಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಚಾಮುಂಡೇಶ್ವರಿ ತಾಯಿಗೆ ಅಭಿಷೇಕ, ವಿಶೇಷ ಅಲಂಕಾರ, ತಾಯಿಯ ಮೆರವಣಿಗೆ, ಪವಾಡ ಬಸವಪ್ಪನ ಗದ್ದುಗೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಮಧ್ಯಾಹ್ನ ಕ್ಷೇತ್ರದ ಪವಾಡ ಬಸವಪ್ಪನವರ ಹುಟ್ಟುಹಬ್ಬ ಆಚರಿಸಲಾಯಿತು. ಭಕ್ತಾದಿಗಳು ಬಸವಪ್ಪನ ಮುಂಭಾಗ ಕೇಕ್ ಕತ್ತರಿಸಿ ಸಂಭ್ರಮಪಟ್ಟರು. ಬಳಿಕ, ಬಸವಪ್ಪನಿಗೆ ಹೂವಿನ ಅಭಿಷೇಕ ಮಾಡಿ ಶುಭಾಶಯ ಕೋರಿದರು.

ಜಿಟಿಜಿಟಿ ಹನಿಯುವ ಮಳೆಯಲ್ಲೂ ದೇಗುಲ ಆವರಣದಲ್ಲಿ ಇಟ್ಟಿದ್ದ ದೀಪಗಳಿಗೆ ಭಕ್ತರು ಎಣ್ಣೆ ಬತ್ತಿ ಹಾಕಿ ದೀಪ ಹಚ್ಚಿ ತಾಯಿಯ ಕೃಪೆಗೆ ಪಾತ್ರರಾದರು. ಸಹಸ್ರಾರು ಭಕ್ತರು ದೀಪೋತ್ಸವಕ್ಕೆ ಸಾಕ್ಷಿಭೂತರಾದರು. ಈ ಬಾರಿ ದೇವರನಾಡು ಕೇರಳ ಶೈಲಿಯ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಆಗಸದಲ್ಲಿ ಬಾಣಬಿರುಸಿನ ಚಿತ್ತಾರ:

ದೀಪೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾದ ಸಿಡಿಮದ್ದು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಒಂದು ಗಂಟೆ ಕಾಲ ಸಿಡಿಮದ್ದು ಸಿಡಿಸಿ ಅಕಾಶದಲ್ಲಿ ವಿವಿಧ ಬಣ್ಣ ಹಾಗೂ ಆಕೃತಿಗಳ ಚಿತ್ತಾರ ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ರಾಜ್ಯವಷ್ಟೇ ಅಲ್ಲದೇ ಹೊರರಾಜ್ಯ ಹಾಗೂ ವಿದೇಶಿಗರು ಆಗಮಿಸಿದ್ದು ವಿಶೇಷವಾಗಿತ್ತು. ಭಕ್ತಾದಿಗಳಿಗೆ ಊಟ, ನೀರು ಹಾಗೂ ವಸತಿ ಸವಲತ್ತು ಕಲ್ಪಿಸಲಾಗಿತ್ತು.

ಹರಿದು ಬಂದ ಭಕ್ತಸಾಗರ:

ಕ್ಷೇತ್ರದಲ್ಲಿ ಪ್ರತಿವರ್ಷವೂ ಕಾರ್ತಿಕ ಮಾಸದ ದೀಪೋತ್ಸವಕ್ಕೆ ಭಕ್ತಸಾಗರ ಕ್ಷೇತ್ರದತ್ತ ಹರಿದುಬಂದಿದ್ದು ವಿಶೇಷವಾಗಿತ್ತು. ತಾಲೂಕು, ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದ ವಿವಿಧ ಭಾಗಗಳ ಭಕ್ತಾದಿಗಳು ದೀಪೋತ್ಸವವನ್ನು ಕಣ್ತುಂಬಿಕೊಂಡರು. ನ್ಯಾಯಾಧೀಶರು, ಹಿರಿ ಹಾಗೂ ಕಿರುತೆರೆ ಕಲಾವಿದರು ಹಾಗೂ ರಾಜಕೀಯ ಧುರೀಣರು ದೀಪೋತ್ಸವಕ್ಕೆ ಸಾಕ್ಷಿಯಾದರು.

ಜಗಮಗಿಸಿದ ಶ್ರೀ ಕ್ಷೇತ್ರ:

ದೀಪೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ನೇತೃತ್ವದಲ್ಲಿ ಭಾನುವಾರ ಮುಂಜಾನೆಯಿಂದ ರಾತ್ರಿವರೆಗೂ ನಿರಂತರ ಅನ್ನದಾಸೋಹ ನಡೆಯಿತು. ದೀಪೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ವಿದ್ಯುತ್ ದೀಪಗಳಿಂದ ಜಗಮಗಿಸಿತ್ತು.

ಪೊಟೋ೧ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಗೌಡಗೆರೆಯ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವಕ್ಕೆ ಹರಿದು ಬಂದ ಭಕ್ತಸಾಗರ.