ಪ್ರಸ್ತುತ ಡಿಜಿಟಲ್ ಯುಗದಲ್ಲಿ ಮಾಹಿತಿ ಸ್ಫೋಟ ಆಗಾಧವಾಗಿದೆ. ಇದಕ್ಕೆ ಕೃತಕ ಬುದ್ಧಿಮತ್ತೆ ಸೇರ್ಪಡೆಯಾಗಿದ್ದು, ಮೊಬೈಲ್ ಬಳಕೆ ಅತಿಯಾಗಿದೆ. ಪ್ರಸ್ತುತ ಡಿಜಿಟಲ್ ಸುನಾಮಿಯಿಂದ ಧನಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಮನುಕುಲ ಎದುರಿಸುತ್ತಿದೆ.
ಧಾರವಾಡ:
ಭವಿಷ್ಯದಲ್ಲಿ ಎಐ ಬಳಕೆಯಿಂದ ಮನುಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದು ಅಧ್ಯಯನದ ಪ್ರಕಾರ 2050ರ ಹೊತ್ತಿಗೆ ಎಐ ಅಂತಹ ಆಧುನಿಕ ತಂತ್ರಜ್ಞಾನದಿಂದ ಬಿಕ್ಕಟ್ಟು, ಡಿಜಿಟಲ್ ಪೆಂಡಾಮಿಕ್ ಸವಾಲು ಸಹ ಎದುರಾಗಬಹುದು. ಆದ್ದರಿಂದ ಎಐ ಬಳಕೆಯಲ್ಲಿ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕಿದೆ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಎಚ್ಚರಿಸಿದರು.ಕರ್ನಾಟಕ ವಿಶ್ವವಿದ್ಯಾಲಯದ ಗಣಕಯಂತ್ರ ವಿಜ್ಞಾನ ಅಧ್ಯಯನ ವಿಭಾಗವು ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡ "ರೆಸ್ಪಾನಿಸಿಬಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ " ವಿಷಯದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿ, ಪ್ರಸ್ತುತ ಡಿಜಿಟಲ್ ಯುಗದಲ್ಲಿ ಮಾಹಿತಿ ಸ್ಫೋಟ ಆಗಾಧವಾಗಿದೆ. ಇದಕ್ಕೆ ಕೃತಕ ಬುದ್ಧಿಮತ್ತೆ ಸೇರ್ಪಡೆಯಾಗಿದ್ದು, ಮೊಬೈಲ್ ಬಳಕೆ ಅತಿಯಾಗಿದೆ. ಪ್ರಸ್ತುತ ಡಿಜಿಟಲ್ ಸುನಾಮಿಯಿಂದ ಧನಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಮನುಕುಲ ಎದುರಿಸುತ್ತಿದೆ. ಕೃತಕ ಬುದ್ಧಿಮತ್ತೆ ಎಲ್ಲಾ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿದೆ. ಆದ್ದರಿಂದ ಎಐ ಅನ್ನು ಜವಾಬ್ದಾರಿಯುತವಾಗಿ ಬಳಕೆ ಮಾಡುವ ಅಗತ್ಯವಿದೆ ಎಂದರು.
ಇಂಗ್ಲೆಂಡಿನ ಕ್ಯಾರ್ಢಿಫ್ ಮೆಟ್ರೊಪಾಲಿಟನ್ ಯುನಿವರ್ಸಿಟಿಯ ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಅಂಗೇಶ್ ಅನುಪ್, ಈ ವಿಚಾರ ಸಂಕಿರಣವು ಹಲವಾರು ಸಂಶೋಧನಾತ್ಮಕ ಆಯಾಮಗಳನ್ನು ಒಳಗೊಂಡಿವೆ. ಹೊಸ ರೀತಿಯ ಯೋಚನೆ, ಕಲ್ಪನೆಯನ್ನು ಈ ವಿಚಾರ ಸಂಕಿರಣ ಒದಗಿಸಿಕೊಟ್ಟಿದೆ ಎಂದ ಅವರು, ಎಐ ಅನ್ನು ಹೊಸ ರೀತಿಯ ಭಿನ್ನವಾದ ದೃಷ್ಟಿಕೋನದಿಂದ ನೋಡಬೇಕಾಗಿದೆ ಎಂದರು.ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಮಾತನಾಡಿದರು. ಪ್ರೊ. ಶ್ರೀದೇವಿ, ವಿಚಾರ ಸಂಕಿರಣದ ಸಂಯೋಜಕ ಪ್ರೊ. ಈಶ್ವರ ಬೈದಾರಿ, ಸಹ ಸಂಯೋಜಕ ಪ್ರೊ. ಶಿವಶಂಕರ ಎಸ್. ಇದ್ದರು.