ಸಾರಾಂಶ
ಬೆಳಗಾವಿ ತಹಸೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪಾತ್ರವೇನೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ತಹಸೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪಾತ್ರವೇನೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಪಷ್ಟಪಡಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರುದ್ರಣ್ಣ ಅವರೇ ಮೇಡಂ ಅವರ ಪಾತ್ರಇಲ್ಲ ಎಂದು ಹೇಳಿದ್ದಾರೆ. ರುದ್ರಣ್ಣ ಆತ್ಮಹತ್ಯೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ನಾವು ಪಿಎಗಳನ್ನು ನಂಬಿಕೊಂಡು ಕೆಲಸ ಮಾಡಲ್ಲ. ನಾನಾಗಲಿ, ಸಹೋದರಿ ಲಕ್ಷ್ಮೀ ಹೆಬ್ಬಾಳಕರ ಆಗಲಿ ಜನರ ಜೊತೆಗೆ ನೇರವಾಗಿ ಸಂಪರ್ಕ ಹೊಂದಿದ್ದೇವೆ. ಲಕ್ಷ್ಮೀ ಹೆಬ್ಬಾಳಕರ ಜನರ ಜೊತೆಗೆ ನೇರ ಸಂಪರ್ಕ ಹೊಂದಿರುವ ರಾಜಕಾರಣಿ ಎಂದರು.ಸಚಿವೆ ಹೆಬ್ಬಾಳಕರ ಪಿಎ ಸೋಮು ವರ್ಗಾವಣೆ ವಿಚಾರದಲ್ಲಿ ಹಣಕಾಸಿನ ವ್ಯವಹಾರಕ್ಕೆ ವಿಚಾರವಾಗಿ ಮಾತನಾಡಿದ ಅವರು, ಈ ರೀತಿಯಲ್ಲಿ ವ್ಯವಹಾರ ಆಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ರುದ್ರಣ್ಣ ಯುವ ಸರ್ಕಾರಿ ನೌಕರನಾಗಿದ್ದ. ಇನ್ನೂ ಸಾಕಷ್ಟು ವರ್ಷ ಸರ್ವಿಸ್ ಇತ್ತು. ಘಟನೆ ಸಂಬಂಧ ನನಗೆ ಪೂರ್ಣ ಮಾಹಿತಿ ಇಲ್ಲ. ಪೊಲೀಸ್ ತನಿಖೆ ಆಗಿ ಪ್ರಾಥಮಿಕ ವರದಿ ಬರಲಿ, ರುದ್ರಣ್ಣ ಸಾವಿಗೂ ಮುನ್ನ ವಾಟ್ಸಪ್ ಗ್ರೂಪ್‌ನಲ್ಲಿ ರವಾನಿಸಿದ್ದ ಸಂದೇಶ ಗಮನಿಸಿದ್ದೇನೆ. ತಹಶೀಲ್ದಾರ್ ಕಚೇರಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಈ ಸಂಬಂಧ ತನಿಖೆ ನಡೆಸಿ, ಪೊಲೀಸರು ಹೇಳಿಕೆ ನೀಡಬೇಕು, ಅದಿನ್ನೂ ಬಂದಿಲ್ಲ ಎಂದು ಹೇಳಿದರು.
ಈಶ್ವರಪ್ಪರಂತೆ ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಪ್ರಕರಣ, ಈ ಪ್ರಕರಣ ಬೇರೆ ಬೇರೆ ಇವೆ. ಗುತ್ತಿಗೆದಾರ ಆತ್ಮಹತ್ಯೆಗೂ ಮುನ್ನ ಮಾಧ್ಯಮಗಳ ಎದುರು ದಾಖಲೆ ಸಮೇತ ಪ್ರತಿಕ್ರಿಯಿಸಿದ್ದರು. ಬಿಲ್ ಬಿಡುಗಡೆಗೆ ಈಶ್ವರಪ್ಪ ಅಂದು ಲಂಚ ಕೇಳಿದ್ದರು. ಆತ್ಮಹತ್ಯೆ ಸಂದರ್ಭದಲ್ಲಿ ಈಶ್ವರಪ್ಪ ಹೆಸರನ್ನು ಅಂದು ಸಂತೋಷ ಪಾಟೀಲ ಉಲ್ಲೇಖಿಸಿದ್ದರು. ಆದರೆ ಇಲ್ಲಿ ರುದ್ರಣ್ಣ ವರ್ಗಾವಣೆ ವಿಚಾರ ಹೆಬ್ಬಾಳಕರ ಅವರಿಗೆ ಏನೂ ಗೊತ್ತಿಲ್ಲ ಎಂದಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೆಸರನ್ನು ಪ್ರಸ್ತಾಪ ಮಾಡಿಲ್ಲ ಎಂದರು.