ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಇತಿಹಾಸ ಪ್ರಸಿದ್ದ ಕರಿಗಿರಿ ಕ್ಷೇತ್ರ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಕರಿಗಿರಿ ಕ್ಷೇತ್ರದಲ್ಲಿ ಲಕ್ಷ್ಮೀನರಸಿಂಹಸ್ವಾಮಿಯ ಬ್ರಹ್ಮರಥೋತ್ಸವವು ಮಧ್ಯಾಹ್ನ ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಗರುಡ ಬಂದು ರಥವನ್ನು ಪ್ರದಕ್ಷಿಣೆ ಹಾಕಿದ ನಂತರ ವಿದ್ಯುಕ್ತವಾಗಿ ನೆರವೇರಿತು.ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಶಾಸಕ ಬಿ. ಸುರೇಶ್‌ಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ತಹಸೀಲ್ದಾರ್ ರಾಜೇಶ್ವರಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ. ಸುನೀಲ್‌ಕುಮಾರ್ ಅವರು ಶ್ರೀಲಕ್ಷ್ಮೀ ನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು.ರಥೋತ್ಸವದ ಅಂಗವಾಗಿ ಮುಂಜಾನೆಯೇ ಶ್ರೀಸ್ವಾಮಿಗೆ ಅಭಿಷೇಕ ನೆರವೇರಿತು. ದೇವರು ಮತ್ತು ರಥಕ್ಕೆ ಗೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದ್ದು, 7 ಗಂಟೆಯ ನಂತರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಭಕ್ತರ ಮನೆಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆಯಾದ ನಂತರ ಮಧ್ಯಾಹ್ನ ರಥದ ಬಳಿ ಬಂದ ದೇವರನ್ನು ರಥಕ್ಕೆ ಕೂರಿಸಲಾಯಿತು. ರಥಕ್ಕೆ ಗರುಡ ಪ್ರದಕ್ಷಿಣೆ ಹಾಕಿದ ನಂತರ ಭಕ್ತರ ಜೈಕಾರ, ವೇದ ಘೋಷದೊಂದಿಗೆ ರಥವನ್ನು ಮುಂದಕ್ಕೆ ಎಳೆಯಲಾಯಿತು. ರಥದ ಗಾಲಿಗಳು ಮುಂದಕ್ಕೆ ಚಲಿಸುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಭಕ್ತಾದಿಗಳು ರಥಕ್ಕೆ ಹೂ, ಬಾಳೆಹಣ್ಣು, ದವನ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು.
ರಥೋತ್ಸವದಲ್ಲಿ ಪಾಲ್ಗೊಳ್ಳಲು ಬಂದ ಭಕ್ತಾದಿಗಳಿಗೆ ಅಲ್ಲಲ್ಲಿ ಕೊಪ್ಪಲು ಹಾಕಿಕೊಂಡಿದ್ದ ಭಕ್ತರು ಪಾನಕ, ಮಜ್ಜಿಗೆ ನೀಡಿ ಅವರ ದಣಿವನ್ನು ತಣಿಸಿದರು. ಹಾಗೆಯೇ ದೇವಾಲಯದ ವತಿಯಿಂದಲೂ ಭಕ್ತಾದಿಗಳಿಗಾಗಿ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವದಲ್ಲಿ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.