ಬೈಕ್ ಸಾಹಸ ಪ್ರದರ್ಶನಕ್ಕೆ ಕಾಟಾಪುರದ ಯೋಧೆ ಆಯ್ಕೆ ಲಕ್ಷ್ಮೀ ಪಚ್ಚೇರ್

| Published : Jan 24 2024, 02:03 AM IST

ಬೈಕ್ ಸಾಹಸ ಪ್ರದರ್ಶನಕ್ಕೆ ಕಾಟಾಪುರದ ಯೋಧೆ ಆಯ್ಕೆ ಲಕ್ಷ್ಮೀ ಪಚ್ಚೇರ್
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಎಸ್‌ಬಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮೀ ಸಾಹಸ ಪ್ರದರ್ಶನದ ಹಿನ್ನೆಲೆಯಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದಾರೆ. ಡೇರ್ ಡೆವಿಲ್ಸ್ ತಂಡದ ಮೂಲಕ ಚಂದ್ರಯಾನ-೩ ಹೆಸರಿನಲ್ಲಿ ಬೈಕ್ ಸಾಹಸ ಪ್ರದರ್ಶನಗೊಳ್ಳಲಿದ್ದು, ಹಳ್ಳಿ ಪ್ರತಿಭೆ ದಿಲ್ಲಿಯಲ್ಲಿ ಮಿಂಚುತ್ತಿರುವುದಕ್ಕೆ ಕೊಪ್ಪಳ ಜನತೆಗೆ ಖುಷಿ ತಂದಿದೆ.

ಎಂ. ಪ್ರಹ್ಲಾದ

ಕನಕಗಿರಿ: ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಅರೆಸೇನಾ ಪಡೆಯ ಮಹಿಳಾ ಯೋಧರಿಂದ ಮೊದಲ ಬಾರಿಗೆ ಬೈಕ್ ಸಾಹಸ ಪ್ರದರ್ಶನಗೊಳ್ಳಲಿದೆ. ಈ ಸಾಹಸ ಪ್ರದರ್ಶನಕ್ಕೆ ಜಿಲ್ಲೆಯ ಕನಕಗಿರಿ ತಾಲೂಕಿನ ಕೆ. ಕಾಟಾಪುರ ಗ್ರಾಮದ ಲಕ್ಷ್ಮೀ ಪಚ್ಚೇರ್ ಆಯ್ಕೆಯಾಗುವ ಮೂಲಕ ರಾಜ್ಯದ ಘನತೆ ಹೆಚ್ಚಿಸುತ್ತಿದ್ದಾರೆ.

ದೇಶದ ಎಸ್‌ಎಸ್‌ಬಿ (ಸಶಸ್ತ್ರ ಸೇನಾ ಬಲ), ಬಿಎಸ್‌ಎಫ್ ಹಾಗೂ ಸಿಆರ್‌ಪಿಎಫ್ ಈ ಮೂರು ವಿಭಾಗದಿಂದ ೧೩೦ ಮಹಿಳಾ ಯೋಧರಿಂದ ಬೈಕ್ ಸಾಹಸ ಪ್ರದರ್ಶನ ನಡೆಯಲಿದ್ದಾರೆ. ೧೮ ರೀತಿಯ ಆಯಾಮಗಳಲ್ಲಿ ನಡೆಯುವ ಬೈಕ್ ಸಾಹಸ ಪ್ರದರ್ಶನವು ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ದಿನದಂದು ಅನಾವರಣಗೊಳ್ಳಲಿದೆ.

ಎಸ್‌ಎಸ್‌ಬಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮೀ ಸಾಹಸ ಪ್ರದರ್ಶನದ ಹಿನ್ನೆಲೆಯಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದಾರೆ. ಡೇರ್ ಡೆವಿಲ್ಸ್ ತಂಡದ ಮೂಲಕ ಚಂದ್ರಯಾನ-೩ ಹೆಸರಿನಲ್ಲಿ ಬೈಕ್ ಸಾಹಸ ಪ್ರದರ್ಶನಗೊಳ್ಳಲಿದ್ದು, ಹಳ್ಳಿ ಪ್ರತಿಭೆ ದಿಲ್ಲಿಯಲ್ಲಿ ಮಿಂಚುತ್ತಿರುವುದಕ್ಕೆ ಕೊಪ್ಪಳ ಜನತೆಗೆ ಖುಷಿ ತಂದಿದೆ.

ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೈಕ್ ಸಾಹಸ ಪ್ರದರ್ಶನಕ್ಕೆ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಅವಕಾಶ ದೊರೆತಿದ್ದು, ಅದರಲ್ಲೂ ದೈಹಿಕವಾಗಿ ಸದೃಢವಾಗಿರುವ ಮಹಿಳಾ ಯೋಧರನ್ನು ಗುರುತಿಸಲಾಗಿದೆ. ನೆರೆಯ ರಾಜ್ಯಗಳ ಮಹಿಳಾ ಯೋಧರಿಗೂ ಈ ಪ್ರದರ್ಶನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕರ್ನಾಟಕದಿಂದ ಲಕ್ಷ್ಮೀ ಪಚ್ಚೇರ ಎನ್ನುವ ಏಕೈಕ ಯೋಧ ಮಹಿಳೆ ಸಾಹಸ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾರೆ.

ಯೋಧೆ ಬಡತನ ಕುಟುಂಬದವಳಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಸೈನಿಕ ಹುದ್ದೆಗೆ ನೇಮಕವಾಗಿ ದೇಶದ ಭೂತಾನ್, ಸದ್ಯ ಇಂಡಿಯಾ ಗೇಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಗಣರಾಜ್ಯೋತ್ಸವದಲ್ಲಿ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಹೆಣ್ಣುಮಗಳು ಬೈಕ್ ಸಾಹಸ ಪ್ರದರ್ಶನಕ್ಕೆ ಆಯ್ಕೆಯಾಗುವ ಮೂಲಕ ಕನಕಗಿರಿಯನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದ್ದಾಳೆ. ಹಳ್ಳಿಯಿಂದ ದಿಲ್ಲಿವರೆಗಿನ ಲಕ್ಷ್ಮೀ ಸಾಧನೆ ದೇಶದ ಮಹಿಳೆಯರಿಗೂ ಪ್ರೇರಣೆ ನೀಡಿದೆ ಎನ್ನುತ್ತಾರೆ ಕನಕಗಿರಿ ತಾಪಂ ಇಒ ಚಂದ್ರಶೇಖರ ಕಂದಕೂರು.ಬ್ಯಾಂಡ್, ಪಥ ಸಂಚಲನಕ್ಕೂ ಆದ್ಯತೆ: ಹೀಗೆ ಬ್ಯಾಂಡ್, ಮ್ಯೂಸಿಕ್ ಹಾಗೂ ಪಥ ಸಂಚಲನದಲ್ಲಿಯೂ ಮಹಿಳಾ ಯೋಧರನ್ನೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾರಿಶಕ್ತಿ ಯೋಜನೆಯಡಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮಹಿಳೆಯರಿಗೆ ಅನೇಕ ಅವಕಾಶಗಳನ್ನು ನೀಡಲಾಗಿದೆ.ಗಣರಾಜ್ಯೋತ್ಸವದಲ್ಲಿ ಮೊದಲ ಬಾರಿಗೆ ಬೈಕ್ ಸಾಹಸ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಸೇವೆಗೆ ಸೇರಿ ಎರಡ್ಮೂರು ವರ್ಷದಲ್ಲಿ ಇದು ಹೊಸ ಅನುಭವ. ಪ್ರಧಾನಿಯ ನಾರಿಶಕ್ತಿ ಯೋಜನೆಯಿಂದ ಒಳ್ಳೆಯ ಅವಕಾಶ ಸಿಕ್ಕಿರುವುದು ಖುಷಿಯಾಗಿದೆ ಎನ್ನುತ್ತಾರೆ ಯೋಧೆ ಲಕ್ಷ್ಮೀ ಪಚ್ಚೇರ.