ಸಾರಾಂಶ
ಸಿರಿಗೆರೆ: ಸೋಮವಾರ ರಾತ್ರಿ ಮತ್ತೆ ಸುರಿದ ಭಾರೀ ಮಳೆಗೆ ದೊಡ್ಡ ಪ್ರಮಾಣದ ನೀರು ಲಕ್ಷ್ಮೀಸಾಗರಕ್ಕೆ ಬಂದಿದೆ. ಕೆರೆ ಈಗಾಗಲೇ ಕೋಡಿ ಬಿದ್ದಿದ್ದರಿಂದ ಅಪಾರ ಪ್ರಮಾಣದ ನೀರು ಹರಿದು ಲಕ್ಷ್ಮೀಸಾಗರ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ನುಗ್ಗಿ ಬಂದು ನಿಂತಿದೆ.
ಸಿರಿಗೆರೆ: ಸೋಮವಾರ ರಾತ್ರಿ ಮತ್ತೆ ಸುರಿದ ಭಾರೀ ಮಳೆಗೆ ದೊಡ್ಡ ಪ್ರಮಾಣದ ನೀರು ಲಕ್ಷ್ಮೀಸಾಗರಕ್ಕೆ ಬಂದಿದೆ. ಕೆರೆ ಈಗಾಗಲೇ ಕೋಡಿ ಬಿದ್ದಿದ್ದರಿಂದ ಅಪಾರ ಪ್ರಮಾಣದ ನೀರು ಹರಿದು ಲಕ್ಷ್ಮೀಸಾಗರ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ನುಗ್ಗಿ ಬಂದು ನಿಂತಿದೆ. ಸರ್ಕಾರಿ ಪ್ರೌಢಶಾಲೆಯ ಸುಮಾರು ೨ ಎಕರೆ ಪ್ರದೇಶದಲ್ಲಿ ಬಹಳ ನೀರು ನಿಂತಿದ್ದು, ಶಾಲೆಯ ಕಟ್ಟಡವನ್ನು ತಗ್ಗು ಪ್ರದೇಶದಲ್ಲಿ ನಿರ್ಮಿಸಿದ್ದರಿಂದ ನೀರು ನಿಂತಿದೆ ಎಂದು ಹೇಳಲಾಗಿದೆ. ಶಾಲಾ ಕಟ್ಟಡದ ಮೂರು ಮೆಟ್ಟಿಲುಗಳನ್ನು ಮೀರಿ ಅಧಿಕ ಪ್ರಮಾಣದ ನೀರು ನಿಂತಿದೆ. ಶಾಲೆಯಲ್ಲಿರುವ ಕಡತಗಳನ್ನು ರಕ್ಷಿಸಲು ಕಟ್ಟಡಕ್ಕೆ ಹೋಗುವುದಕ್ಕೂ ಕೆಲವರು ಭಯ ಬೀಳುವ ಪರಿಸ್ಥಿತಿ ಇದೆ.
ಇಡೀ ಶಾಲೆಯ ಆವರಣವೇ ಕೆರೆಯಂತಾಗಿದ್ದು, ಈಗ ಅಲ್ಲಿ ನಿಂತಿರುವ ನೀರು ಹೊರಗೆ ಹೋಗಲು ಒಂದು ವಾರವೇ ಕಾಯಬೇಕಾಗಬಹುದು. ಇಡೀ ಕಟ್ಟಡ ಹಾಗೂ ಶಾಲೆಗೆ ನಿರ್ಮಿಸಿರುವ ಕಾಂಪೋಂಡ್ ಗೋಡೆಗಳಿಗೆ ಇದರಿಂದ ಧಕ್ಕೆ ಬರುವ ಸಂಭವವೂ ಇದೆ.ಶಾಲೆಯಲ್ಲಿ ೬೦ ಮಕ್ಕಳು ಓದುತ್ತಿದ್ದು, ತಾತ್ಕಾಲಿಕವಾಗಿ ಊರಿನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ತರಗತಿಗಳನ್ನು ನಡೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆಂದು ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ತಿಳಿಸಿದರು.
ಲಕ್ಷ್ಮೀಸಾಗರ ಮತ್ತು ವಿಜಾಪುರದ ಕೆಲವು ಯುವಕರು ಜೆಸಿಬಿ ಇಟಾಚಿ ಬಳಸಿ ಶಾಲಾ ಆವರಣದಲ್ಲಿ ನಿಂತಿರುವ ನೀರನ್ನು ಹೊರಗೆ ಹಾಕುವ ಕೆಲಸ ಮಾಡಿದರು.