: ರಾಜ್ಯದಲ್ಲಿ ಅಂತಾರಾಜ್ಯ ಸಹಕಾರಿ ಕಾಯ್ದೆ, ಕರ್ನಾಟಕ ಸಹಕಾರಿ ಕಾಯ್ದೆ ಮತ್ತು ಸೌಹಾರ್ದ ಸಹಕಾರಿ ಕಾಯ್ದೆಗಳ ಅಡಿಯಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಸುಮಾರು 2.60 ಕೋಟಿ ಅಧಿಕ ಮಂದಿ ಸಹಕಾರಿ ಕ್ಷೇತ್ರದ ಸದಸ್ಯರಾಗಿದ್ದಾರೆ. ಇಷ್ಟೊಂದು ದೊಡ್ಡ ಜನಸಮೂಹವನ್ನು ಹೊಂದಿರುವ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಹಕಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಮಂಗಳೂರು: ರಾಜ್ಯದಲ್ಲಿ ಅಂತಾರಾಜ್ಯ ಸಹಕಾರಿ ಕಾಯ್ದೆ, ಕರ್ನಾಟಕ ಸಹಕಾರಿ ಕಾಯ್ದೆ ಮತ್ತು ಸೌಹಾರ್ದ ಸಹಕಾರಿ ಕಾಯ್ದೆಗಳ ಅಡಿಯಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಸುಮಾರು 2.60 ಕೋಟಿ ಅಧಿಕ ಮಂದಿ ಸಹಕಾರಿ ಕ್ಷೇತ್ರದ ಸದಸ್ಯರಾಗಿದ್ದಾರೆ. ಇಷ್ಟೊಂದು ದೊಡ್ಡ ಜನಸಮೂಹವನ್ನು ಹೊಂದಿರುವ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಹಕಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು. ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮಂಗಳೂರು ಇವುಗಳ ನೇತೃತ್ವದಲ್ಲಿ ನಡೆದ 73ನೇ ಸಹಕಾರ ಸಪ್ತಾಹದ-2026ರ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ 21 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅತ್ಯಧಿಕ ಠೇವಣಿ ಸಂಗ್ರಹಿಸುವ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸುವ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲೂ ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ಹೆಚ್ಚಿನ ಪ್ರಮಾಣದ ಸಾಲ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರ ಅತ್ಯಂತ ಬಲಿಷ್ಠವಾಗಿ ಬೆಳೆದಿದ್ದು, ಜನರ ವಿಶ್ವಾಸವೇ ಇದಕ್ಕೆ ಪ್ರಮುಖ ಕಾರಣ ಎಂದರು.

ಬೆಳಗಾವಿ, ದ.ಕ. ಬ್ಯಾಂಕ್‌ ಮಾದರಿ: ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳ ಬೆಳವಣಿಗೆಗೆ ಅಪೆಕ್ಸ್ ಬ್ಯಾಂಕ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಮುಖವಾಗಿ ನೆರವಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಆಸ್ಪತ್ರೆಗಳು, ಕ್ರೀಡಾ ಸಂಸ್ಥೆಗಳು ಸೇರಿದಂತೆ ಸಹಕಾರಿ ಕ್ಷೇತ್ರದ ಮೂಲಕ ವಿಶಿಷ್ಟ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಹುಕ್ಕೇರಿ ತಾಲೂಕಿನಲ್ಲಿ ವಿದ್ಯುತ್ ಸಹಕಾರಿ ಸಂಘದ ಮೂಲಕ ಹೆಸ್ಕಾಂ, ಬೆಸ್ಕಾಂ ಮತ್ತು ಮೆಸ್ಕಾಂ ಮಾದರಿಯಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಸಹಕಾರಿ ಸಂಸ್ಥೆಯೇ ಪಾರದರ್ಶಕವಾಗಿ ನಿರ್ವಹಿಸುತ್ತಿದೆ. ಇಂತಹ ಪ್ರಯೋಗಗಳು ಸಹಕಾರಿ ಕ್ಷೇತ್ರದ ವ್ಯಾಪಕ ಸಾಮರ್ಥ್ಯವನ್ನು ತೋರಿಸುತ್ತವೆ ಎಂದರು.ಡಾ.ಎಂ.ಎನ್‌.ಆರ್‌. ಸಹಕಾರಿ ಕ್ಷೇತ್ರದ ದೊಡ್ಡ ಶಕ್ತಿಸಹಕಾರಿ ಕ್ಷೇತ್ರಕ್ಕೆ ಕರಾವಳಿ ಭಾಗದಲ್ಲಿ ವಿಶೇಷ ಮೌಲ್ಯ ಮತ್ತು ಗೌರವ ತಂದುಕೊಟ್ಟವರಲ್ಲಿ ಡಾ. ರಾಜೇಂದ್ರ ಕುಮಾರ್ ಅವರ ಪಾತ್ರ ಮಹತ್ವದ್ದಾಗಿದೆ. ಅವರು ಕೇವಲ ವ್ಯಕ್ತಿಯಲ್ಲ, ಸಹಕಾರಿ ಕ್ಷೇತ್ರದ ದೊಡ್ಡ ಶಕ್ತಿ. ಅವರ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.ಸಹಕಾರಿ ಸಪ್ತಾಹದ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸುವ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಿದ್ದರೂ ರಾಜೇಂದ್ರ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಸಮಾರೋಪ ಸಮಾರಂಭ ನಡೆಸುವ ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬಂದಿದ್ದರು. ಆರೋಗ್ಯಕ್ಕಿಂತ ಸಹಕಾರಿ ಕ್ಷೇತ್ರದ ಮೇಲಿನ ಅವರ ಬದ್ಧತೆ ಮತ್ತು ವಿಶ್ವಾಸ ದೊಡ್ಡದು ಎಂಬುದನ್ನು ಇದು ತೋರಿಸುತ್ತದೆ. ಅವರ ಈ ಬದ್ಧತೆ ಎಲ್ಲರಿಗೂ ಮಾದರಿ ಎಂದು ಸಚಿವರು ಶ್ಲಾಘಿಸಿದರು.ಡಾ. ರಾಜೇಂದ್ರ ಕುಮಾರ್ ಅವರು ಜಾತಿ, ಮತ, ಕುಲದ ಭೇದವಿಲ್ಲದೆ ಎಲ್ಲರನ್ನೂ ಸಹಕಾರಿ ಕ್ಷೇತ್ರಕ್ಕೆ ಬರಮಾಡಿಕೊಂಡಿದ್ದಾರೆ. ವಿಶೇಷವಾಗಿ ಸ್ವಸಹಾಯ ಸಂಘಗಳ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿ, ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸಿ ಅವರ ಬದುಕಿನಲ್ಲಿ ಬೆಳಕು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಸಚಿವರು ಹೇಳಿದರು.ಸಹಕಾರಿ ಕ್ಷೇತ್ರ ಸಮಾಜಕ್ಕೆ ಗೌರವ, ಸ್ವಾಭಿಮಾನ ಮತ್ತು ಆರ್ಥಿಕ ಶಕ್ತಿ ತಂದುಕೊಡುವ ಕ್ಷೇತ್ರವಾಗಿದೆ. ಈ ಕ್ಷೇತ್ರದ ಮೌಲ್ಯಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೂ ಅದರ ಮಹತ್ವವನ್ನು ತಲುಪಿಸುವ ಕೆಲಸವನ್ನು ಎಲ್ಲರೂ ಒಗ್ಗಟ್ಟಿನಿಂದ ಮಾಡಬೇಕು. ಸಹಕಾರಿ ಸಪ್ತಾಹದ ಸಮಾರೋಪವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಿ, ಹಿರಿಯ ಸಹಕಾರಿಗಳನ್ನು ಆಹ್ವಾನಿಸಿ ಗೌರವಿಸಿರುವುದು ಶ್ಲಾಘನೀಯ ಎಂದರು.