ಸಾರಾಂಶ
ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯ ಲಲಿತ್ ರಾಘವ್ (ದೀಪು) ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇಮಕ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರಿಂದ ನೇಮಕ । ಪಕ್ಷ ಸಂಘಟನೆಗೆ ಒತ್ತು: ಲಲಿತ್
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣತಾಲೂಕಿನ ಹಿರೀಸಾವೆಯ ಲಲಿತ್ ರಾಘವ್ (ದೀಪು) ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇಮಕ ಮಾಡಿದ್ದಾರೆ.
ಒಂದು ತಿಂಗಳ ಹಿಂದೆ ರಾಜ್ಯ ಸರ್ಕಾರ ಲಲಿತ್ ರಾಘವ (ದೀಪು) ಅವರನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷರನ್ನಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇಮಕ ಮಾಡುವ ಮೂಲಕ ಮಾಜಿ ಮಂತ್ರಿ ದಿ.ಶ್ರೀಕಂಠಯ್ಯ ಕುಟುಂಬಕ್ಕೆ ಮಣೆ ಹಾಕಿದ್ದರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವರಿಷ್ಠರು ಮಾಜಿ ಸಂಸದ ದಿ. ಜಿ.ಪುಟ್ಟಸ್ವಾಮಿಗೌಡರ ಕುಟುಂಬಕ್ಕೆ ಹಾಸನ ಕ್ಷೇತ್ರದ ಟಿಕೆಟ್ ನೀಡಿದೆ. ಇಂತಹ ವೇಳೆ ಶ್ರೀಕಂಠಯ್ಯ ಕುಟುಂಬಕ್ಕೆ ಮೊತ್ತೊಂದು ಹುದ್ದೆಯನ್ನು ನೀಡುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಹೆಚ್ಚು ಒತ್ತು ನೀಡಿದೆ.ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿ ಲಲಿತ್ ರಾಘವ್ ಮಾತನಾಡಿ, ಜಿಲ್ಲೆಯ ಶ್ರೀಕಂಠಯ್ಯ ಹಾಗೂ ಪುಟ್ಟಸ್ವಾಮಿಗೌಡ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟಣೆ ಮಾಡುವುದರೊಂದಿಗೆ ರಾಜ್ಯದ ಹಳೆಮೈಸೂರು ಭಾಗದಲ್ಲಿಯೂ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ, ಇದೇ ಹಾದಿಯಲ್ಲಿ ತಾನು ಈಗಿನಿಂದಲೇ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು.
ಲೊಕಸಭೆ ಚುನಾವಣೆ ವೇಳೆ ಪಕ್ಷದ ವರಿಷ್ಠರು ಅಧಿಕಾರ ನೀಡಿದ್ದಾರೆ. ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆದು ಹಾಸನ ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವಿಗೆ ಅವಿರತವಾಗಿ ಶ್ರಮಿಸುತ್ತೇನೆ, ಹಳೆಮೈಸೂರು ಭಾಗದ ಮಂಡ್ಯ, ಮಡಿಕೇರಿ, ತುಮಕೂರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಂಚಾರ ಮಾಡಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಲಲಿತ್ ರಾಘವ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲಲಿತ್ ಅವರನ್ನು ಗೌರವಿಸಿದರು.