ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಡಾ.ಬಿ.ಟಿ.ಲಲಿತಾ ನಾಯಕ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಲಲಿತಾ ನಾಯಕ್ ೮೦ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಹೆಸರಿನಲ್ಲೇ ಮಾನವತಾ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಏ.೪ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಬಿ.ಟಿ.ಲಲಿತಾ ನಾಯಕ್ ಬಡಾವಣೆಯಲ್ಲಿ ಏರ್ಪಡಿಸಲಾಗಿದೆ.ಬೆಂಗಳೂರಿನ ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿ ಸರಳ ಮದುವೆಯ ಪ್ರಮಾಣ ವಚನ ಬೋಧಿಸುವರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಮಾರಂಭ ಉದ್ಘಾಟಿಸುವರು ಎಂದು ಟ್ರಸ್ಟ್‌ನ ಅಧ್ಯಕ್ಷೆ ಎಸ್.ಎಲ್.ಉಮಾದೇವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸುವರು. ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರ್ ಅವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾನವತಾ ಪ್ರಶಸ್ತಿ ಪ್ರದಾನ ಮಾಡುವರು. ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಭಾಗವಹಿಸುವರು. ಬಮಜಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರ ಕುರಿತು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ ವಿಷಯ ಮಂಡಿಸುವರು. ಮದುವೆ ನೋಂದಣಿ ಪ್ರಾಮುಖ್ಯತೆ ಕುರಿತು ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವನಾಯಕ್ ಮಾತನಾಡುವರು.ಮಾಜಿ ಸಚಿವ ಬಿ.ಟಿ.ಲಲಿತಾನಾಯಕ್ ಮಾತನಾಡಿ, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕಬ್ಬು ಕಡಿಯಲು ಬಂದಿದ್ದವರು ಮಲಗಿದ್ದ ವೇಳೆ ಅಪಘಾತ ಸಂಭವಿಸಿತ್ತು. ಆ ಸಮಯದಲ್ಲಿ ಹೆಗಡೆಯವರಿಗೆ ಮೃತರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವಂತೆ ಕೋರಿದಾಗ ನಗರದ ಚಿಕ್ಕೇಗೌಡನದೊಡ್ಡಿ ಹೊರವಲಯದಲ್ಲಿ ೧.೨೪ ಗುಂಟೆ ಜಮೀನು ಮಂಜೂರು ಮಾಡಿ ೨೪ ಮಂದಿಗೆ ಹಕ್ಕುಪತ್ರ ದೊರಕಿಸಿಕೊಟ್ಟಿದ್ದರು ಎಂದು ನೆನಪಿಸಿಕೊಂಡರು.
ಬಡಾವಣೆ ನಗರಸಭಾ ವ್ಯಾಪ್ತಿಯ ೩೪ನೇ ವಾರ್ಡ್‌ಗೆ ಸೇರಿದ್ದರೂ ಹಲವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಬಡಾವಣೆಗೆ ಹೋಗುವುದಕ್ಕೆ ಸರಿಯಾದ ರಸ್ತೆಗಳಿಲ್ಲ, ಚರಂಡಿ ವ್ಯವಸ್ಥೆ ಇಲ್ಲ. ಅಂಗನವಾಡಿ ಕುಸಿದುಬೀಳುವ ಸ್ಥಿತಿಯಲ್ಲಿದೆ. ಸಮುದಾಯ ಭವನದೊಳಗೆ ಗ್ರಂಥಾಲಯ ನಡೆಯುತ್ತಿದೆ. ೩೫ ವರ್ಷಗಳಿಂದ ವ್ಯವಸ್ಥಿತವಾಗಿ ಅಭಿವೃದ್ಧಿ ಕಾಣುವುದಕ್ಕೆ ಇದುವರೆಗೂ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬಡಾವಣೆಯಲ್ಲಿ ವಾಸವಿರುವ ಜನರಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ವಸತಿ ಸಚಿವ ಜಮೀರ್ ಅಹಮದ್ ಅವರಿಗೆ ಮನವಿ ಮಾಡಿದ್ದೇನೆ. ಮೂಲಸೌಲಭ್ಯ, ರಸ್ತೆ, ಚರಂಡಿ ವ್ಯವಸ್ಥೆಗಳ ಕುರಿತು ಸಚಿವ ಎನ್.ಚಲುವರಾಯಸ್ವಾಮಿ ಅವರ ಗಮನಕ್ಕೆ ತಂದಿದ್ದು, ಅವರೂ ಅಭಿವೃದ್ಧಿಗೆ ಉತ್ಸಾಹ ತೋರಿದ್ದಾರೆ. ಬಡಾವಣೆಯ ಅಭಿವೃದ್ಧಿಗೆ ಏನೇನು ಕೆಲಸಗಳಾಗಬೇಕೋ ಅವುಗಳನ್ನು ಕಾರ್ಯಗತಗೊಳಿಸುವುದಾಗಿ ಭರವಸೆ ನೀಡಿದರು.
ಗೋಷ್ಠಿಯಲ್ಲಿ ಹನುಮಂತರಾಮ್ ನಾಯಕ್, ಎಸ್.ಎಂ.ಪುಟ್ಟಸ್ವಾಮಿ, ಓಂಪ್ರಕಾಶ್, ಶೀನನಾಯಕ ಇತರರಿದ್ದರು.