ನಗರಸಭೆಗೆ ಲಲಿತಾ ರವಿನಾಯ್ಕ ನೂತನ ಉಪಾಧ್ಯಕ್ಷೆ

| Published : Sep 01 2025, 01:04 AM IST

ಸಾರಾಂಶ

ಚಿಕ್ಕಮಗಳೂರು, 35ನೇ ವಾರ್ಡಿನ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆಯ ನೂತನ ಉಪಾಧ್ಯಕ್ಷರಾಗಿ ಶನಿವಾರ ಅವಿರೋಧ ಆಯ್ಕೆಯಾದರು.

ಉಪಾಧ್ಯಕ್ಷೆ ಅನು ಮಧುಕರ್‌ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

35ನೇ ವಾರ್ಡಿನ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆಯ ನೂತನ ಉಪಾಧ್ಯಕ್ಷರಾಗಿ ಶನಿವಾರ ಅವಿರೋಧ ಆಯ್ಕೆಯಾದರು.

ಉಪಾಧ್ಯಕ್ಷೆ ಅನು ಮಧುಕರ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಲಲಿತಾ ರವಿನಾಯ್ಕ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಸುದರ್ಶನ್‌ ನೂತನ ಉಪಾಧ್ಯಕ್ಷರ ಆಯ್ಕೆ ಘೋಷಣೆ ಮಾಡಿದರು.

ಬಳಿಕ ನಡೆದ ಸಮಾರಂಭದಲ್ಲಿ ನೂತನ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಸಿಕ್ಕಿರುವ ಅಧಿಕಾರವಧಿಯಲ್ಲಿ ಒಳ್ಳೆಯ ಕೆಲಸದ ಮೂಲಕ ತಮ್ಮ ವಾರ್ಡಿನಲ್ಲಿಯೂ ಹೆಸರು ಪಡೆದು ಬಿಜೆಪಿಯಲ್ಲೂ ಕೆಲಸ ಮಾಡುತ್ತಾ ಸರ್ವ ಸಮ್ಮತಿಯ ಮೇರೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಹೇಳಿದರು.

ತಾವು ಶಾಸಕರಾಗಿದ್ದಾಗ ಎಸ್‌ಎಫ್‌ಸಿ ಯೋಜನೆಯಡಿ ವಿಶೇಷ ಅನುದಾನ ತಂದು 15ನೇ ಹಣಕಾಸು ಹಾಗೂ ವಾರ್ಷಿಕ ಅನುದಾನದ ಜೊತೆಗೆ ನಾಲ್ಕು ಪಟ್ಟು ವಿಶೇಷ ಅನುದಾನ ತರುತ್ತಿದ್ದೆವು. ಇದರಿಂದ ನಗರದ ಅಭಿವೃದ್ಧಿಗೆ ಸಹಕಾರವಾಗುತ್ತಿತ್ತು. ವಿಶೇಷ ಅನುದಾನ ಕೋರಿ ಸರ್ಕಾರದ ಬಳಿಗೆ ಸರ್ವ ಪಕ್ಷದ ಮುಖಂಡರ ನಿಯೋಗ ಹೋಗುವುದಾದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಅಹ್ವಾನಿಸಿದರೆ ಬರಲು ಸಿದ್ದವಿರುವುದಾಗಿ ಭರವಸೆ ನೀಡಿದರು.

ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷರಿಗೆ ನಗರಸಭೆ ಸದಸ್ಯರು, ಬಿಜೆಪಿ ಮುಖಂಡರು ಅಭಿನಂದನೆ ಸಲ್ಲಿಸಿದರು.

30 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆ ನೂತನ ಉಪಾಧ್ಯಕ್ಷರಾಗಿ ಶನಿವಾರ ಅವಿರೋಧವಾಗಿ ಆಯ್ಕೆಯಾದ ಲಲಿತಾ ರವಿನಾಯ್ಕರಿಗೆ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್‌ , ನಗರಸಭೆ ಸದಸ್ಯರು ಅಭಿನಂದಿಸಿದರು.