ಲಲಿತಮ್ಮ ನನ್ನ ದೊಡ್ಡವ್ವ, ಟಿ.ಗಿರಿಜಾ ಸಣ್ಣವ್ವ: ಬಾ.ಮ.ಬಸವರಾಜಯ್ಯ

| Published : Oct 24 2024, 12:41 AM IST / Updated: Oct 24 2024, 12:42 AM IST

ಲಲಿತಮ್ಮ ನನ್ನ ದೊಡ್ಡವ್ವ, ಟಿ.ಗಿರಿಜಾ ಸಣ್ಣವ್ವ: ಬಾ.ಮ.ಬಸವರಾಜಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲಲಿತಮ್ಮನವರ ಜೀವನ ಸಾಹಿತ್ಯ ಕ್ಷೇತ್ರಕ್ಕೆ ಮಾರ್ಗದರ್ಶನ ಎಂದು ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಹರಿಹರದಲ್ಲಿ ಹೇಳಿದ್ದಾರೆ. ನಗರದ ಶ್ರೀ ಹರಿಹರೇಶ್ವರ ಸಭಾಭವನದಲ್ಲಿ ಭಾನುವಾರ ಪ್ರಗತಿಪರ ಬರಹಗಾರರ ಒಕ್ಕೂಟ ಮತ್ತು ಚಿಂತನ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಶ್ರೀ ಲಲಿತಮ್ಮ ಡಾ.ಚಂದ್ರಶೇಖರ್ ಅವರ 93ನೇ ಜನ್ಮದಿನಾಚರಣೆ ಪ್ರಯುಕ್ತ ನೀಡಲಾದ ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್ ಜೀವಮಾನ ಸಾಧನೆ- 2024 ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

- ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ - - - ಕನ್ನಡಪ್ರಭ ವಾರ್ತೆ ಹರಿಹರ

ಲಲಿತಮ್ಮನವರ ಜೀವನ ಸಾಹಿತ್ಯ ಕ್ಷೇತ್ರಕ್ಕೆ ಮಾರ್ಗದರ್ಶನ ಎಂದು ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಹೇಳಿದರು.

ನಗರದ ಶ್ರೀ ಹರಿಹರೇಶ್ವರ ಸಭಾಭವನದಲ್ಲಿ ಭಾನುವಾರ ಪ್ರಗತಿಪರ ಬರಹಗಾರರ ಒಕ್ಕೂಟ ಮತ್ತು ಚಿಂತನ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಶ್ರೀ ಲಲಿತಮ್ಮ ಡಾ.ಚಂದ್ರಶೇಖರ್ ಅವರ 93ನೇ ಜನ್ಮದಿನಾಚರಣೆ ಪ್ರಯುಕ್ತ ನೀಡಲಾದ ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್ ಜೀವಮಾನ ಸಾಧನೆ- 2024 ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಲಲಿತಮ್ಮ 7 ದಶಕಗಳಿಂದ ದಾವಣಗೆರೆ ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಗೃಹಿಣಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟೊಂದು ದೀರ್ಘಕಾಲ ಸೇವೆ ನಿಜಕ್ಕೂ ಅಪರೂಪದ ಸಂಗತಿ. ಅವರ ಜೀವನವೇ ಇಂದಿನ ಉದಯೋನ್ಮುಖ ಬರಹಗಾರರಿಗೆ ಸ್ಫೂರ್ತಿ ಎಂದರು.

30 ವರ್ಷಗಳ ಹಿಂದೆ ಸ್ಥಾಪಿಸಿ ನಿರಂತರ ಸಾಹಿತ್ಯ ಸೇವೆ ಮಾಡುತ್ತಿರುವ ಪ್ರಗತಿಪರ ಬರಹಗಾರರ ಒಕ್ಕೂಟವು ನೀಡುವ ಪ್ರಶಸ್ತಿಯನ್ನು ಸ್ವಯಂ ಅವರಿಂದಲೇ ಸ್ವೀಕರಿಸುತ್ತಿರುವುದು ನನ್ನ ಪೂರ್ವಜನ್ಮದ ಸುಕೃತವೆಂದು ಭಾವಿಸುತ್ತೇನೆ. ನನಗೆ ಸಾಹಿತ್ಯ, ರಂಗಭೂಮಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸೇವೆ ಮಾಡಲು ಅವರು ಸದಾ ಮಾರ್ಗದರ್ಶನ ಮಾಡಿದ್ದಾರೆ. ಹಾಗಾಗಿ ಅವರನ್ನು ದೊಡ್ಡವ್ವ ಎಂದೂ, ಟಿ.ಗಿರಿಜಾ ಅವರನ್ನು ಸಣ್ಣವ್ವ ಎಂದು ಸಂಭೋದಿಸುವ ಸೌಭಾಗ್ಯ ನನ್ನದಾಗಿದೆ. ಈ ನಿಮಿತ್ತ ಇಬ್ಬರಿಗೆ ಈ ಹೆಸರುಗಳೇ ಚಿರಸ್ಥಾಯಿಯಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಸ್ವಾಮಿ ವಿವೇಕಾನಂದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಶಾರದೇಶಾನಂದಜೀ ಮಾತನಾಡಿ, ಒಂದು ಊರಿನ ಸಂಪತ್ತು ಕೇವಲ ಅಲ್ಲಿರುವ ಭೌತಿಕವಾಗಿ ಅಲ್ಲ ಬೌದ್ಧಿಕ ಸಂಪತ್ತಿನಿಂದ ಮಾತ್ರ ಅಳೆಯಬೇಕು. ಇದನ್ನು ನಮಗೆ ತಿಳಿಸಿಕೊಟ್ಟ ಸ್ವಾಮಿ ವಿವೇಕಾನಂದರು. ಅವರ ಹೆಜ್ಜೆಯ ಜಾಡಿನಲ್ಲಿ ತಮ್ಮ ಜೀವನವನ್ನು ಸಾರ್ಥಕವಾಗಿಸಿಕೊಂಡು 93ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಲಲಿತಮ್ಮ ಇವರ ಜೀವನ ಅನನ್ಯ ಎಂದರು.

ಮುಖ್ಯ ಅತಿಥಿ ಪ್ರೊ. ಸಿ.ವಿ.ಪಾಟೀಲ್ ಅವರು ಲಲಿತಮ್ಮನವರ ಬದುಕು ಮತ್ತು ಬರಹ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿ, ಲಲಿತಮ್ಮನವರು ಸಾಹಿತ್ಯ ಕ್ಷೇತ್ರದ ದೊಡ್ಡಮ್ಮ ಆವರು ತಮ್ಮ ಜೀವನದುದ್ದಕ್ಕೂ ಲೇಖಕರಿಗೆ, ಬರಹಗಾರರಿಗೆ, ಕವಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದರು.

ಜಿಲ್ಲಾಮಟ್ಟದ ಕವಿಗೋಷ್ಠಿ ಉದ್ಘಾಟಿಸಿದ ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ಕವಿಯಾದವನಿಗೆ ಸದಾ ಅಂತಃಕರಣ ಮಿಡಿಯುತ್ತಿರಬೇಕು. ತನ್ನ ಸುತ್ತಮುತ್ತಲೂ ಏನಾಗುತ್ತಿದೆ ಎನ್ನುವಂತಹ ಅರಿವಿರಬೇಕು. ನೋವು, ದುಃಖ, ಕಷ್ಟ, ಸಾಮಾಜಿಕ ಕಳಕಳಿ ಜಾಗೃತವಾಗಿ ತಮ್ಮ ಬರಹಗಳಲ್ಲಿ ವ್ಯಕ್ತವಾಗಬೇಕು. ಆಗ ಮಾತ್ರ ಒಬ್ಬ ಯಶಸ್ವಿ ಕವಿಯಾಗಬಲ್ಲ ಎಂದು ತಿಳಿಸಿದರು.

ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಲಲಿತಮ್ಮ ಮಾತನಾಡಿ, ಒಕ್ಕೂಟದ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿ, ಒಕ್ಕೂಟದ ಸದಸ್ಯರು ಒಂದುಗೂಡಿ ನನ್ನ ಜನ್ಮದಿನವನ್ನು ನೆಪವಾಗಿಟ್ಟುಕೊಂಡು ಪ್ರಶಸ್ತಿಯನ್ನು ಸ್ಥಾಪಿಸಿ ದಾವಣಗೆರೆ ಜಿಲ್ಲೆಯ ಸಾಹಿತ್ಯಿಕ ಲೋಕಕ್ಕೆ ಹೊಸರೂಪವನ್ನು ತರುವಲ್ಲಿ ಪ್ರಯತ್ನಿಸುತ್ತಿರುವುದು ಅಭಿನಂದನಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಲಲಿತಮ್ಮವರಿಗೆ ಸನ್ಮಾನಿಸಿದರು. ಒಕ್ಕೂಟದ ಗೌರವಾಧ್ಯಕ್ಷ ಎಚ್.ಕೆ. ಕೊಟ್ರಪ್ಪನವರು ಹೊಸ ಸಮಿತಿ ಸದಸ್ಯರನ್ನು ಸಭೆಗೆ ಪರಿಚಯಿಸಿದರು.

ಸಮಾಜ ಸೇವಕ ಗೋಂವಿಂದ ರೆಡ್ಡಿ, ಪ್ರಶಸ್ತಿ ಪ್ರಾಯೋಜಕರಾದ ವಸಂತಿ ಫ್ರಾನ್ಸಿಸ್, ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್, ಡಾ. ಡಿ.ಫ್ರಾನ್ಸಿಸ್, ಗಾಯತ್ರಿ, ನಾಗರತ್ನ, ಸೌಮ್ಯ, ಈ.ಉಷಾ, ಮಂಜುನಾಥ ಅಗಡಿ ಉಪಸ್ಥಿತರಿದ್ದರು.

- - --21ಎಚ್‍ಆರ್‍ಆರ್2:

ಹರಿಹರದ ಹರಿಹರೇಶ್ವರ ಸಭಾಭವನದಲ್ಲಿ ಪ್ರಗತಿಪರ ಬರಹಗಾರರ ಒಕ್ಕೂಟ ಮತ್ತು ಚಿಂತನ ಪ್ರತಿಷ್ಠಾನ ಸಾಹಿತಿ ಲಲಿತಮ್ಮ ಡಾ.ಚಂದ್ರಶೇಖರ್ ಅವರ 93ನೇ ಜನ್ಮದಿನಾಚರಣೆಯಲ್ಲಿ ಸಾಹಿತಿ ಬಾ.ಮ. ಬಸವರಾಜಯ್ಯ ಅವರಿಗೆ ಪ್ರಶಸ್ತಿ ನೀಡಲಾಯಿತು.