ಸಾರಾಂಶ
ಬಳ್ಳಾರಿ: ಜಿಲ್ಲೆಯಲ್ಲಿ ಕಮಲ ಅರಳಲು ಹಾಗೂ ಪಕ್ಷದ ಸಂಘಟನೆ ಗಟ್ಟಿಯಾಗಿ ನೆಲೆಯೂರಲು ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಮಂತ್ರಿ ಲಾಲ್ ಕೃಷ್ಣ ಅಡ್ವಾಣಿಯವರ ಜಿಲ್ಲೆಯ ಭೇಟಿ ಮಹತ್ವದ ಪಾತ್ರ ವಹಿಸಿತ್ತು.
1990ರಲ್ಲಿ ಅಯೋಧ್ಯೆ ಶ್ರೀರಾಮಮಂದಿರಕ್ಕಾಗಿ ರಥಯಾತ್ರೆ ಆರಂಭಿಸಿದ್ದ ಲಾಲ್‌ಕೃಷ್ಣ ಅಡ್ವಾಣಿಯವರು ಜಿಲ್ಲೆಗೂ ಭೇಟಿ ನೀಡಿದ್ದರು. ಅಂದು ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಹಿಂದೂ ಸಮಾಜವನ್ನು ಉದ್ದೇಶಿಸಿ ಅಡ್ವಾಣಿಯವರು ಮಾತನಾಡಿದರು.ನಂತರದಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರಕ್ಕೆಂದು ಜಿಲ್ಲೆಗೆ ನಾಲ್ಕೈದು ಬಾರಿ ಆಗಮಿಸಿರುವ ಲಾಲ್‌ಕೃಷ್ಣ ಅಡ್ವಾಣಿ ಅವರು ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷ ಸಂಘಟಿಸಲು ಹುರಿದುಂಬಿಸುತ್ತಿದ್ದರು ಎಂದು ಅಯೋಧ್ಯೆ ಶ್ರೀರಾಮಮಂದಿರ ಹೋರಾಟದಲ್ಲಿ ಪಾಲ್ಗೊಂಡಿದ್ದ ಪಕ್ಷದ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ ಅವರು ಸ್ಮರಿಸಿಕೊಳ್ಳುತ್ತಾರೆ.
ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾಗಿರುವ ಲಾಲ್‌ಕೃಷ್ಣ ಅವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವ ಉಳ್ಳವರು. ಪಕ್ಷದ ಕಾರ್ಯಕರ್ತರ ಬಗ್ಗೆ ಅಪಾರ ಅಭಿಮಾನ ಉಳ್ಳವರಾಗಿದ್ದರು. ಪಕ್ಷವನ್ನು ಸಂಘಟಿಸಲು ಬೇಕಾದ ಜಾಣ್ಮೆ ಹಾಗೂ ಹೋರಾಟದ ಮನೋಭಾವ ಕುರಿತು ವಿವರಿಸುತ್ತಿದ್ದರು.ಚುನಾವಣೆ ಪ್ರಚಾರದಲ್ಲಿ ಎಲ್ಲ ನಾಯಕರ ಜತೆ ಒಡಗೂಡಿ ಪಕ್ಷ ಸಂಘಟನೆಯ ಮಹತ್ವ ಕುರಿತು ತಿಳಿಸಿಕೊಡುತ್ತಿದ್ದರು. ಅಡ್ವಾಣಿಯವರು ಬಳ್ಳಾರಿಗೆ ಬಂದಿರುವುದು ಬಹಳ ಅಪರೂಪದ ಸಂದರ್ಭದಲ್ಲಾದರೂ ಇರುವ ಸಮಯದಲ್ಲಿಯೇ ಪಕ್ಷದ ಬಲವರ್ಧನೆಗೆ ತಮ್ಮ ಅನುಭವಗಳ ಜತೆಗೆ ಪಕ್ಷ ಬೆಳವಣಿಗೆಯಿಂದ ದೇಶದ ಪ್ರಗತಿಯಲ್ಲಾಗುವ ಬೆಳವಣಿಗೆಗಳು ಕುರಿತು ತಿಳಿಸಿಕೊಡುತ್ತಿದ್ದರು ಎಂದು ನಗರದ ಬಿಜೆಪಿ ಹಿರಿಯ ನಾಯಕರು ನೆನಪಿಸಿಕೊಳ್ಳುತ್ತಾರೆ.
ಕೇಂದ್ರ ಸರ್ಕಾರ ಅಡ್ವಾಣಿಯವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿರುವುದು ಅತ್ಯಂತ ಸಂತಸ ತಂದಿದೆ. ಪಕ್ಷದ ಬೆಳವಣಿಗೆ ಹಾಗೂ ಇಡೀ ದೇಶದಲ್ಲಿ ಕಮಲ ಪಕ್ಷ ಅರಳಲು ಅಡ್ವಾಣಿಯವರು ತಮ್ಮ ಇಡೀ ಬದುಕನ್ನು ಸವೆಸಿದ ಮಹನೀಯರಾಗಿದ್ದಾರೆ. ಅವರು ಎಂದೂ ಪ್ರಶಸ್ತಿಯನ್ನು ನಿರೀಕ್ಷಿಸಿದರಲ್ಲ; ದೇಶದ ಪ್ರಗತಿಗೆ ಅವರ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿರುವುದು ಅತೀವ ಸಂಭ್ರಮ ತಂದಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.ಕೋಟ್...
ಕೇಸರಿ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರ ಸಾರಥ್ಯದಲ್ಲಿ ಅಯೋಧ್ಯೆ ರಾಮಮಂದಿರಕ್ಕಾಗಿ ನಡೆದ ರಥಯಾತ್ರೆಯಲ್ಲಿ ನಾನು ಸೇರಿದಂತೆ ಜಿಲ್ಲೆಯ ಅನೇಕರು ಭಾಗವಹಿಸಿದ್ದೆವು. ಅಂದು ನಡೆದ ಹೋರಾಟ ಹಾಗೂ ಬಳಿಕ ಅಡ್ವಾಣಿಯವರ ಜಿಲ್ಲಾ ಭೇಟಿಯಿಂದ ಬಿಜೆಪಿ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ.ಕೆ.ಎ. ರಾಮಲಿಂಗಪ್ಪ, ಹಿರಿಯ ಬಿಜೆಪಿ ಮುಖಂಡ, ಬಳ್ಳಾರಿ