ದೀಪಾವಳಿ ಎಂದರೆ ಬೆಳಕಿನ ಹಬ್ಬ. ಆದರೆ, ಬಂಜಾರ (ಲಂಬಾಣಿ) ಸಮುದಾಯಕ್ಕೆ ಇದು ಕೇವಲ ದೀಪಗಳ ಹಬ್ಬವಲ್ಲ ಸಂಸ್ಕೃತಿ, ಸಂಪ್ರದಾಯ, ಬಂಧುತ್ವ ಮತ್ತು ಒಗ್ಗಟ್ಟಿನ ಪ್ರತೀಕ.

ಹುಬ್ಬಳ್ಳಿ:

ದೀಪಾವಳಿ ಎಂದರೆ ಬೆಳಕಿನ ಹಬ್ಬ. ಆದರೆ, ಬಂಜಾರ (ಲಂಬಾಣಿ) ಸಮುದಾಯಕ್ಕೆ ಇದು ಕೇವಲ ದೀಪಗಳ ಹಬ್ಬವಲ್ಲ ಸಂಸ್ಕೃತಿ, ಸಂಪ್ರದಾಯ, ಬಂಧುತ್ವ ಮತ್ತು ಒಗ್ಗಟ್ಟಿನ ಪ್ರತೀಕ. ಲಂಬಾಣಿ ಭಾಷೆಯಲ್ಲಿ "ದವಾಳಿ " ಎಂದು ಕರೆಯುವ ಈ ಹಬ್ಬ ತಾಂಡಾಗಳಲ್ಲಿ ವಿಶಿಷ್ಟ ಆಚರಣೆಗಳೊಂದಿಗೆ ಕಳೆಗಟ್ಟುತ್ತದೆ. ಉದ್ಯೋಗ ಅರಸಿ ದೂರದ ಊರುಗಳಿಗೆ ತೆರಳಿದವರು ಕೂಡ ಊರಿಗೆ ಮರಳುವ ಮೂಲಕ ತಾಂಡಾಗಳಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುತ್ತಾರೆ.

ದೀಪಾವಳಿಗೆ ಹದಿನೈದು ದಿನಗಳ ಮುಂಚೆಯೇ ತಾಂಡಾಗಳಲ್ಲಿ ಸಿದ್ಧತೆ ಆರಂಭವಾಗುತ್ತದೆ. ಹಿರಿಯ ಮಹಿಳೆಯರು ಮದುವೆಯಾಗದ ಯುವತಿಯರು ಹಾಗೂ ಬಾಲಕಿಯರಿಗೆ ಲಂಬಾಣಿ ಭಾಷೆಯ ಜನಪದ ಹಾಡು, ನೃತ್ಯ ಮತ್ತು ಸಾಂಪ್ರದಾಯಿಕ ವೇಷಭೂಷಣಗಳ ಪರಿಚಯ ಮಾಡಿಸುತ್ತಾರೆ. ಸೇವಾಲಾಲ್‌ ದೇವಸ್ಥಾನದ ಮುಂದೆ ರಾತ್ರಿ ಸಾಮೂಹಿಕವಾಗಿ ಹಾಡು, ನೃತ್ಯದ ಅಭ್ಯಾಸ ನಡೆಯುತ್ತದೆ. ಹೀಗೆ ಕಿರಿಯರಿಗೆ ಕಲೆ ಕಲಿಸುವ ಮೂಲಕ ಹಿರಿಯರು ಸಂಸ್ಕೃತಿಯ ಕೊಂಡಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ.

ಮೇರಾ ಸಂಭ್ರಮದ ವಿಶೇಷ:

ಅಮಾವಾಸ್ಯೆಯ ರಾತ್ರಿ ಯುವತಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು, ಹೂವುಗಳಿಂದ ಅಲಂಕರಿಸಿದ ಹಣತೆಗಳನ್ನು ಹಿಡಿದು ಸೇವಾಲಾಲ್‌ ಹಾಗೂ ಮರಿಯಮ್ಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಬಳಿಕ ತಾಂಡಾದ ನಾಯಕನ ಅನುಮತಿ ಪಡೆದು ಮನೆ-ಮನೆಗೆ ತೆರಳಿ ಲಂಬಾಣಿ ಭಾಷೆಯಲ್ಲಿ "ವರ್ಷದಾಡೇರ್ ಕೋರ್ ದವಾಳಿ ಬಾಪು ತೋನ ಮೇರಾ, ಸೇವಾಭಾಯಾ ತೋನ ಮೇರಾ... " ಎಂದು ಲಯಬದ್ಧವಾಗಿ ಹಾಡಿ ಮನೆಯವರಿಗೆ ಶುಭ ಹಾರೈಸುತ್ತಾರೆ. ಹಿರಿಯರು ಯುವತಿಯರನ್ನು ಸ್ವಾಗತಿಸಿ ಕಾಣಿಕೆ ನೀಡುತ್ತಾರೆ. "ಮೇರಾ " ಆಚರಣೆ ದುಃಖ, ಕಷ್ಟಗಳನ್ನು ಕಳೆದು ಸುಖ-ಸಮೃದ್ಧಿಯ ಬೆಳಕಿನೆಡೆಗೆ ಸಾಗುವ ಸಂಕೇತವಾಗಿದೆ.

ಹಿರಿಯರ ಸ್ಮರಣೆ, ಗೋವುಗಳ ಆರಾಧನೆ:

ಹಬ್ಬದ ಎರಡನೇ ದಿನ ಬಲಿಪಾಡ್ಯಮಿಯಂದು ಗೋವುಗಳನ್ನು ಸ್ನಾನ ಮಾಡಿಸಿ, ಅಲಂಕರಿಸಿ ಪೂಜಿಸುವುದು ವಿಶೇಷ. ಅಗಲಿದ ಹಿರಿಯರನ್ನು ಸ್ಮರಿಸಿ, ಅವರು ಇಷ್ಟಪಡುತ್ತಿದ್ದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ತುಪ್ಪ, ಧೂಪದೊಂದಿಗೆ ಸಮರ್ಪಿಸುವ ಸಂಪ್ರದಾಯವಿದೆ. ಇದನ್ನು "ಧಬುಕಾರ್ " ಎಂದು ಕರೆಯುತ್ತಾರೆ. ವಂಶಪಾರಂಪರ್ಯದ ಹಿರಿಯರನ್ನು ನೆನೆದು ಆಶೀರ್ವಾದ ಕೋರುವ ಈ ಆಚರಣೆ ಕುಟುಂಬದ ಬೇರುಗಳನ್ನು ನೆನಪಿಸುತ್ತದೆ.

ಕೆಲವು ತಾಂಡಾಗಳಲ್ಲಿ ಯುವತಿಯರು ಮುಂಜಾನೆ ಅರಣ್ಯ ಪ್ರದೇಶಗಳಿಗೆ ತೆರಳಿ ವಿವಿಧ ಬಣ್ಣದ ಹೂವುಗಳನ್ನು ಸಂಗ್ರಹಿಸಿ ತರುತ್ತಾರೆ. ಸಗಣಿಯಿಂದ ಸಿದ್ಧಪಡಿಸಿದ ಬೂದಗಳನ್ನು ಹೂವುಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ಹಾಡು, ನೃತ್ಯ, ಸಿಹಿತಿನಿಸುಗಳ ವಿನಿಮಯದೊಂದಿಗೆ ಹಬ್ಬದ ಸಂಭ್ರಮ ಮುಂದುವರಿಯುತ್ತದೆ.

ಆಧುನಿಕತೆಯ ಪ್ರಭಾವದಿಂದ ಜಾನಪದ ಕಲೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಲಂಬಾಣಿ ಸಮುದಾಯದ ಈ ಆಚರಣೆಗಳು ಸಂಸ್ಕೃತಿಯ ಜೀವಂತಿಕೆಯ ಸಂಕೇತವಾಗಿವೆ. ಹಬ್ಬದ ನೆಪದಲ್ಲಿ ಬಂಧುಗಳು ಒಂದಾಗುವುದಷ್ಟೇ ಅಲ್ಲ, ಭಾಷೆ, ಕಲೆ, ಉಡುಗೆ-ತೊಡುಗೆ ಮತ್ತು ಪರಂಪರೆಯೂ ಮುಂದಿನ ಪೀಳಿಗೆಗೆ ಪರಿಚಯವಾಗುತ್ತವೆ. ದವಾಳಿ ಹಬ್ಬ ನಿಜಕ್ಕೂ ಲಂಬಾಣಿ ಸಂಸ್ಕೃತಿಯ ಪರಂಪರೆಯ ದೀಪವನ್ನು ತಲೆಮಾರಿನಿಂದ ತಲೆಮಾರಿಗೆ ಬೆಳಗಿಸುತ್ತಿದೆ ಎಂದು ಬಂಜಾರ ಸಮಾಜದ ಯುವ ಮುಖಂಡ ವೆಂಕಟೇಶ ಪಮ್ಮಾರ ಕನ್ನಡಪ್ರಭಕ್ಕೆ ತಿಳಿಸಿದರು.