ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಾಗಿ ಮುಳುಗಡೆಯಾಗುವ ಜಮೀನುಗಳನ್ನು ಒಂದೇ ಹಂತದಲ್ಲಿ ಸ್ವಾಧೀನ ಮಾಡಿಕೊಳ್ಳುವುದು ಹಾಗೂ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

 ಸುವರ್ಣ ವಿಧಾನಸಭೆ : ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಾಗಿ ಮುಳುಗಡೆಯಾಗುವ ಜಮೀನುಗಳನ್ನು ಒಂದೇ ಹಂತದಲ್ಲಿ ಸ್ವಾಧೀನ ಮಾಡಿಕೊಳ್ಳುವುದು ಹಾಗೂ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದಲ್ಲಿ ಭೂಸ್ವಾಧೀನ, ಪುನರ್ವಸತಿ ಹಾಗೂ ಮರುನಿರ್ಮಾಣ ಕುರಿತಂತೆ ಸುವರ್ಣ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು 519.60 ಮೀ.ನಿಂದ 524.26 ಮೀ.ವರೆಗೆ ಎತ್ತರಿಸಬೇಕಿದ್ದು, ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಯೋಜನೆಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.

1.33 ಲಕ್ಷ ಎಕ್ರೆ ಸ್ವಾಧೀನ: ಯೋಜನೆಗಾಗಿ ಮುಳುಗಡೆಯಾಗಲಿರುವ ಜಮೀನು, ಪುನರ್ವಸತಿ ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಅಂದಾಜು 1.33 ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಈವರೆಗೆ 28,967 ಎಕರೆ ಸ್ವಾಧೀನಪಡಿಸಲಾಗಿದ್ದು, ಇನ್ನೂ 1,04,963 ಎಕರೆ ಸ್ವಾಧೀನಪಡಿಸಲು ಬಾಕಿಯಿದೆ. ಅದರೊಂದಿಗೆ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಲಿರುವ 188 ಗ್ರಾಮಗಳ 73 ಸಾವಿರ ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. 

ಹಿಂದಿನ ಸರ್ಕಾರ ರೈತರ ಭೂಮಿಯನ್ನು ಎರಡು ಹಂತದಲ್ಲಿ ಭೂಸ್ವಾಧೀನ ಮಾಡುವ ಕುರಿತು ನಿರ್ಧಾರ ಕೈಗೊಂಡಿತ್ತು. ಅದನ್ನು ಬದಲಿಸಿ ಪ್ರಥಮ ಪ್ರಾಶಸ್ತ್ಯದಲ್ಲಿ ಒಂದೇ ಹಂತದಲ್ಲಿ ಭೂಸ್ವಾಧೀನ ಮಾಡಿಕೊಳ್ಳುವಂತೆ ತಿಳಿಸಿದರು.ಜಮೀನು ಕಳೆದುಕೊಳ್ಳುವ ರೈತರಿಗೆ ಜಮೀನಿನ ಮಾರುಕಟ್ಟೆ ದರ, ಆಸ್ತಿ ಮಾರ್ಗದರ್ಶಿ ಮೌಲ್ಯ, ಭೂಸ್ವಾಧೀನ ಕಾಯ್ದೆಯನ್ನು ಗಮನದಲ್ಲಿರಿಸಿ ನ್ಯಾಯಯುತ ಪರಿಹಾರ ಒದಗಿಸಬೇಕು. 

ಅಲ್ಲದೆ, ರೈತರಿಗಾಗಿಯೇ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಹೀಗಾಗಿ ಜಮೀನಿಗೆ ಪರಿಹಾರ ನೀಡುವ ಕುರಿತಂತೆ ರೈತರು ಸಹಮತದ ದರ ನಿಗದಿಪಡಿಸಲು ಎಲ್ಲರೂ ಮುಂದೆ ಬರಬೇಕು. ರೈತರಿಗೂ ಅನ್ಯಾಯವಾಗದಂತೆ, ಸರ್ಕಾರಕ್ಕೂ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.