ಸಾರಾಂಶ
ಹೂವಿನಹಡಗಲಿ: ಬಂಗಾರದಂತಹ ಭೂಮಿ ಕಳೆದುಕೊಂಡು ಪರಿಹಾರಕ್ಕಾಗಿ ಹತ್ತಾರು ಬಾರಿ ಕಚೇರಿ ಸುತ್ತಾಡಿದರೂ ಪರಿಹಾರ ಕೊಟ್ಟಿಲ್ಲ. ರೈತರ ಜೀವನಾಡಿ ಎಂದು ಹೇಳುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಗೆ ಈವರೆಗೂ ಹನಿ ನೀರು ಹರಿದಿಲ್ಲ. ಇತ್ತ ಪರಿಹಾರ ಇಲ್ಲದೇ ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ಹಣ ಕೊಡುವವರಿಗೂ ಕಚೇರಿ ಬಿಟ್ಟು ಕದಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದ ಸಂತ್ರಸ್ತರು ಪ್ರತಿಭಟಿಸಿದರು.
ಮುಂಡರಗಿ ತಾಲೂಕಿನ ಮುಂಡವಾಡದ ರೈತರು ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.ವಿರೂಪಾಕ್ಷಪ್ಪ ಚೆನ್ನಮಲ್ಲಪ್ಪ ಅಲ್ಲಿಪುರ ಮಾತನಾಡಿ, ಮುಂಡವಾಡದ 52 ಎಕರೆ ಜಮೀನು ಮತ್ತು ಮುಖ್ಯ ಕಾಲುವೆ, ಉಪ ಕಾಲುವೆಗಾಗಿ 32 ಎಕರೆ ಜಮೀನಿನ ಪರಿಹಾರಕ್ಕಾಗಿ ಕಳೆದ 2013ರಿಂದ ಕಚೇರಿಗೆ ಅಲೆದರೂ ಪರಿಹಾರ ನೀಡಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಪರಿಹಾರ ನೀಡಲು ಲಂಚ ಕೇಳುತ್ತಿದ್ದಾರೆ. ನಮ್ಮ ನ್ಯಾಯಯುತ ಪರಿಹಾರ ಪಡೆಯಲು ನಾವು ಹಣ ನೀಡಲು ತಯಾರಿಲ್ಲ. ಅದಕ್ಕೆ ಪರಿಹಾರ ನೀಡುವುದು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗುವ ಗುಮ್ಮಗೋಳವನ್ನು ಸ್ಥಳಾಂತರ ಮಾಡಿದ್ದಾರೆ. ಅದಕ್ಕೆ ಮುಂಡವಾಡದಿಂದ ರಸ್ತೆ ನಿರ್ಮಾಣಕ್ಕೆ ರೈತರ ಭೂಮಿ ಪಡೆದು, 15 ವರ್ಷ ಕಳೆದರೂ ಅದಕ್ಕೆ ಪರಿಹಾರ ನೀಡಿಲ್ಲ. ಜತೆಗೆ ರೈತರಿಗೆ ನೋಟಿಸ್ ಕೂಡ ನೀಡದೇ ರಸ್ತೆ ನಿರ್ಮಿಸಿದ್ದಾರೆ. ಪರಿಹಾರ ಕೊಡದಿದ್ದರೆ ರಸ್ತೆಯನ್ನೇ ಬಂದ್ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.ಸಂಗನಗೌಡ ಎಸ್.ಪಾಟೀಲ್ ಮಾತನಾಡಿ, ನಮ್ಮ ಭೂಮಿ ಸ್ವಾಧೀನ ಮಾಡಿಕೊಂಡು ಕೆಲ ರೈತರಿಗೆ, ಬೋಗಸ್ ನೋಟಿಸ್ ನೀಡಿ ಹಾದಿ ತಪ್ಪಿಸಿದ್ದಾರೆ. ಈ ಸರ್ಕಾರ ಮತ್ತು ಅಧಿಕಾರಿಗಳು ನಮಗೆ ಪರಿಹಾರ ಕೊಡಿ, ಇಲ್ಲವೇ ನಮ್ಮ ಕಾಗದ ಪತ್ರ ಕೊಡಿ ನಿಮ್ಮ ಕಚೇರಿಯ ಮುಂದೆ ಸುಟ್ಟು, ಆ ಭಸ್ಮ ನಿಮ್ಮ ಹಣೆಗೆ ಹಚ್ಚಿ ಹೋಗುತ್ತೇವೆ ಎಂದು ಆಕ್ರೋಶ ಹೊರ ಹಾಕಿದರು.
ಮಲ್ಲಿಕಾರ್ಜುನಗೌಡ ಮಾತನಾಡಿ, ಪರಿಹಾರಕ್ಕಾಗಿ ಅಲೆದು ಸುಸ್ತಾಗಿದ್ದೇವೆ. ಸಂತ್ರಸ್ತರು ಹತ್ತಾರು ಬಾರಿ ಪ್ರತಿಭಟನೆ ಮಾಡಿದ್ದೇವೆ. ಈ ಕಚೇರಿಯಲ್ಲಿ ರೈತರ ನೋವು ಸಂಕಷ್ಟ ಆಲಿಸಲು ಅಧಿಕಾರಿಗಳೇ ಇಲ್ಲ. ರೈತರು ಬಂದು ಪರಿಹಾರ ಕೇಳಿದರೆ ಮೇಲಧಿಕಾರಿಗಳ ನೆಪ ಹೇಳುತ್ತಾರೆ. ಮುಖ್ಯಮಂತ್ರಿ ಅಧೀನ ಕಾರ್ಯದರ್ಶಿಗೂ ಪತ್ರ ಬರೆದರೆ ಯಾವ ಪ್ರಯೋಜನವಾಗಿಲ್ಲ. ಕಾಲುವೆಗಳಿಗೆ ನೀರು ಬರುತ್ತಿಲ್ಲ. ಪರಿಹಾರವೂ ಇಲ್ಲ. ನಾಳೆಯಿಂದಲೇ ಕಾಲುವೆಗಳನ್ನು ಮುಚ್ಚಿ ಜಮೀನು ಉಳುಮೆ ಮಾಡಿದ್ದೇವೆ ಯಾರು ಬಂದರೂ ಜಗ್ಗುವುದಿಲ್ಲ ಎಂದರು.ಮುಂಡರಗಿ ವಿಭಾಗದ ಎಇಇ ರಮೇಶ ಮಾತನಾಡಿ, ಮುಂಡವಾಡ ರೈತರ ಪರಿಹಾರದ ಕಡತ ಅಂತಿಮ ಅವಾರ್ಡ್ ಹಂತಕ್ಕೆ ಬಂದಿವೆ. 33 ಎಕರೆ, 18 ಎಕರೆ, 15 ಎಕರೆ ಈ ಮೂರು ಕಡತಗಳು ವಿವಿಧ ಹಂತದಲ್ಲಿವೆ. ಇನ್ನು 20 ದಿನದೊಳಗೆ ಪರಿಹಾರ ನೀಡುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಸವರಾಜ ವಡ್ಡಟ್ಟಿ, ಎಚ್.ಅಶೋಕ, ಎಂ.ಎ. ಪಾಟೀಲ್, ಪ್ರಭಣ್ಣ ಹರ್ಲಾಪುರ, ರಾಚಪ್ಪ ಕಮ್ಮಾರ, ರಾಮಪ್ಪ, ಫಕ್ಕೀರಪ್ಪ ಸೇರಿದಂತೆ 70ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.