ಭೂಮಿ ಮತ್ತು ವಸತಿ ಹಕ್ಕು: ಇಂದು ಬೆಂಗಳೂರು ಚಲೋ ಕಾರ್ಯಕ್ರಮ

| Published : Mar 11 2025, 12:49 AM IST

ಸಾರಾಂಶ

ತುಂಡು ಭೂಮಿಗಳನ್ನೇ ನಂಬಿ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ಕಾಯುತ್ತಿದ್ದವರಿಗೆ ಅರ್ಜಿ ತಿರಸ್ಕಾರ ಮಾಡುವ ಸರ್ಕಾರಗಳು, ಉದ್ಯಮಿಗಳು, ಖಾಸಗಿ ಕಂಪನಿಗಳಿಗೆ ಭೂಮಿಯನ್ನು ನೀಡುವಾಗ ಯಾವುದೇ ಕಾನೂನನ್ನು ಪರಿಗಣಿಸದೇ ಸಾವಿರಾರು ಎಕರೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಗುತ್ತಿಗ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಭೂಮಿಯ ಹಕ್ಕು ಸಾಮಾಜಿಕ ನ್ಯಾಯದ ಪ್ರತಿಪಾದನೆಗಾಗಿ ರಾಜ್ಯದ ಭೂಮಿ, ವಸತಿ, ನಿವೇಶನ ವಂಚಿತರಿಂದ ಮಂಗಳವಾರ (ಮಾ.೧೧) ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಜು ಹೇಳಿದರು.

ನವೆಂಬರ್ ೧೬ರ ಬೆಳಗಾವಿ ಅಧಿವೇಶನದಲ್ಲಿ ಇದೇ ಸರ್ಕಾರ ಘೋಷಿಸಿರುವಂತೆ ಬಡವರಿಗೆ ಭೂಮಿ ಮತ್ತು ವಸತಿ ಮಂಜೂರಾತಿಗೆ ಆದ್ಯತೆ ಎಂಬ ನೀತಿಯನ್ನು ಗಾಳಿಗೆ ತೂರುತ್ತಿದೆ. ಬಗರ್‌ಹುಕುಂ ಸಾಗುವಳಿದಾರರು ಮತ್ತು ವಸತಿರಹಿತರ ಅರ್ಜಿಗಳನ್ನು ಯಾವುದೇ ನೆಪದಲ್ಲಿ ತಿರಸ್ಕರಿಸಬಾರದು. ಅರ್ಜಿ ಸಲ್ಲಿಸಿರುವ ಭೂಮಿ-ವಸತಿ ರಹಿತರೆಲ್ಲರಿಗೂ ಒಂದು ಬಾರಿ ಪರಿಹಾರ ನೀಡುವ ಮೂಲಕ ಭೂಮಿ-ವಸತಿಯ ಹಕ್ಕನ್ನು ನೀಡಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ತುಂಡು ಭೂಮಿಗಳನ್ನೇ ನಂಬಿ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ಕಾಯುತ್ತಿದ್ದವರಿಗೆ ಅರ್ಜಿ ತಿರಸ್ಕಾರ ಮಾಡುವ ಸರ್ಕಾರಗಳು, ಉದ್ಯಮಿಗಳು, ಖಾಸಗಿ ಕಂಪನಿಗಳಿಗೆ ಭೂಮಿಯನ್ನು ನೀಡುವಾಗ ಯಾವುದೇ ಕಾನೂನನ್ನು ಪರಿಗಣಿಸದೇ ಸಾವಿರಾರು ಎಕರೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಗುತ್ತಿಗ ನೀಡುತ್ತಿದೆ. ಕೆಐಡಿಬಿ ಮತ್ತು ಇನ್ನಿತರೆ ಯೋಜನೆಗಳಿಗಾಗಿ ಸಂಪದ್ಭರಿತ ಭೂಮಿಗಳನ್ನು ವಶಪಡಿಸಿಕೊಂಡು ರೈತರನ್ನು ಬೀದಿಪಾಲು ಮಾಡುತ್ತಿದೆ. ಬಲವಂತದ ಭೂಸ್ವಾಧೀನ ನಡೆಯದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.

ಮನೆ-ನಿವೇಶನ ಹೊಂದಿಲ್ಲದ ಲಕ್ಷಾಂತರ ಬಡವರು ಸರ್ಕಾರಿ ಜಾಗಗಳಲ್ಲಿ ಹತ್ತಾರು ವರ್ಷಗಳಿಂದ ಗುಡಿಸಲು-ಜೋಪಡಿಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಅವುಗಳ ಸಕ್ರಮಕ್ಕೆ ೯೪ಸಿ/೯೪ಸಿಸಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದು ಬಡವರಿಂದ ಅರ್ಜಿಗಳನ್ನು ಸ್ವೀಕರಿಸಿದೆ. ಆದರೆ, ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅವುಗಳಿಗೆ ಹಕ್ಕುಪತ್ರ ನೀಡದೆ ಸತಾಯಿಸುತ್ತಿದೆ. ಇಲ್ಲವೇ ಅವುಗಳನ್ನು ನೆಲಸಮ ಮಾಡಿ ಅವರನ್ನು ಬೀದಿಪಾಲು ಮಾಡುತ್ತಿದೆ ಎಂದರು.

ಮಾ.೧೨ ಮತ್ತು ೧೩ರಂದು ಸಂಯುಕ್ತ ಹೋರಾಟ ಕರ್ನಾಟಕದಿಂದ ದಮನಿತ ಸಮುದಾಯಗಳ ಹಕ್ಕೊತ್ತಾಯಗಳಿಗಾಗಿ ಜನ ಸಂಘಟನೆಗಳ ಬಜೆಟ್ ಅಧಿವೇಶನ ನಡೆಯಲಿದೆ. ಅದರಲ್ಲಿ ಸರ್ಕಾರದ ನೀತಿಗಳ ಬಗ್ಗೆ ಚರ್ಚಿಸಿ ಆಗ್ರಹಪತ್ರವನ್ನು ಸಲ್ಲಿಸಲಿದೆ. ಇದಕ್ಕೆ ಹೋರಾಟ ಸಮಿತಿಯ ಸದಸ್ಯರೆಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ವರದರಾಜೇಂದ್ರ, ಪೂರ್ಣಿಮಾ, ಚಂದ್ರಶೇಖರ, ರತ್ನ, ಲೀಲಮ್ಮ, ರಾಜು ಇದ್ದರು.