ನಾಡಬಾಂಬ್ ಸ್ಪೋಟ ಪ್ರಕರಣ, ಎಫ್.ಎಸ್.ಎಲ್ ಅಧಿಕಾರಿಗಳ ತಂಡ ಭೇಟಿ

| Published : Feb 12 2024, 01:33 AM IST

ನಾಡಬಾಂಬ್ ಸ್ಪೋಟ ಪ್ರಕರಣ, ಎಫ್.ಎಸ್.ಎಲ್ ಅಧಿಕಾರಿಗಳ ತಂಡ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಡು ಪ್ರಾಣಿಗಳು ನೀರು ಕುಡಿಯಲು ಬಂದ ವೇಳೆ ನಾಡ ಬಾಂಬ್ ಸೇವಿಸಿ ಸ್ಪೋಟಗೊಂಡು ಸಾವನ್ನಪ್ಪುತ್ತವೆ.ಈ ಕಾರಣಕ್ಕಾಗಿ ತಾಲೂಕಿನಲ್ಲಿ ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ನಿರಂತರವಾಗಿ ಬಳಸಲಾಗುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮದ ಕೆರೆಯಲ್ಲಿ ನಾಡಬಾಂಬ್ ಸ್ಪೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಬೆಳಗಾವಿ ವಿಭಾಗದ ಎಫ್.ಎಸ್.ಎಲ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಡಬಾಂಬ್ ಸ್ಫೋಟಗೊಂಡ ಕೆರೆಯಲ್ಲಿ ಪರಿಶೀಲನೆ ನಡೆಸಿದ ಎಫ್.ಎಸ್.ಎಲ್ ಅಧಿಕಾರಿಗಳ ತಂಡ ಸ್ಪೋಟಗೊಂಡ ಸ್ಥಳದಲ್ಲಿ ನಾಡಬಾಂಬ್ ತಯಾರಿಸಲು ಬಳಸಿದ ವಸ್ತುಗಳ ಬಗ್ಗೆ ಪರೀಕ್ಷೆ ನಡೆಸಲು ಸ್ಪೋಟಗೊಂಡ ನಾಡಬಾಂಬ್‌ನ ಅವಶೇಷ ಸಂಗ್ರಹಿಸಿದರು. ನಾಡಬಾಂಬ್ ಸ್ಪೋಟಗೊಂಡು ಕುರಿಗಾಹಿ ಭರಮಣ್ಣ ವಡ್ಡರ ಎಂಬುವರ ಕೈ ಬೆರಳು ತುಂಡಾಗಿ ಬಿದ್ದ ಸ್ಥಳದಲ್ಲಿ ರಕ್ತದ ಮಾದರಿ ಸಹ ಪಡೆದುಕೊಂಡರು.

ನಾಡಬಾಂಬ್: ಪೊಲೀಸ್‌ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಫೋಟಗೊಂಡ ನಾಡಬಾಂಬ್ ಕುರಿತು ಮಾಹಿತಿ ಸಂಗ್ರಹಿಸುವ ವೇಳೆ ಕೆರೆಯ ಪಕ್ಕದಲ್ಲೇ ಎಸೆಯಲಾಗಿದ್ದ ನಾಡಬಾಂಬ್ ಎನ್ನಲಾದ ವಸ್ತುವನ್ನು ಅಧಿಕಾರಿಗಳಿಗೆ ತೆಗೆದುಕೊಂಡು ಹೋಗಿರುವುದಾಗಿ ಕುರಿಗಾಯಿ ಭರಮಣ್ಣ ವಡ್ಡರ ತಿಳಿಸಿದರು. ತನಿಖೆ ನಂತರವಷ್ಟೆ ಪತ್ತೆಯಾದ ವಸ್ತುವು ನಾಡಬಾಂಬ್ ಹೌದು ಅಥವಾ ಇಲ್ಲವೆಂದು ತಿಳಿದು ಬರಲಿದೆ.

ಅರಣ್ಯ ಇಲಾಖೆಯ ನಿರ್ಲಕ್ಷ ಆರೋಪ: ಬಾಚಣಕಿ ಕೆರೆ ಮಾತ್ರವಲ್ಲದೇ ಸುತ್ತಲೂ ಇರುವ ಕೆರೆಗಳಲ್ಲಿ ಕಾಡು ಪ್ರಾಣಿಗಳು ನೀರು ಕುಡಿಯಲು ಬರುತ್ತವೆ. ಈ ಉದ್ದೇಶದಿದಲ್ಲೇ ಕೆರೆಗಳ ಕೆಲ ಭಾಗಗಳಲ್ಲಿ ಕಾಡು ಪ್ರಾಣಿಗಳ ಬೇಟೆಯಾಡಲು ನಾಡ ಬಾಂಬ್‌ಗಳನ್ನು ಇಡಲಾಗುತ್ತದೆ.ಕಾಡು ಪ್ರಾಣಿಗಳು ನೀರು ಕುಡಿಯಲು ಬಂದ ವೇಳೆ ನಾಡ ಬಾಂಬ್ ಸೇವಿಸಿ ಸ್ಪೋಟಗೊಂಡು ಸಾವನ್ನಪ್ಪುತ್ತವೆ.ಈ ಕಾರಣಕ್ಕಾಗಿ ತಾಲೂಕಿನಲ್ಲಿ ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ನಿರಂತರವಾಗಿ ಬಳಸಲಾಗುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಅರಣ್ಯ ಇಲಾಖೆಯವರು ಇದನ್ನು ಗಂಭೀರವಾಗಿ ಪರಿಗಣಿಸಿ ಕಾಡು ಪ್ರಾಣಿಗಳ ಬೇಟೆಗೆ ಕೆರೆಗಳ ಪಕ್ಕದಲ್ಲಿ ನಾಡಬಾಂಬ್ ಇಡುತ್ತಿರುವ ವ್ಯಕ್ತಿಗಳ ಪತ್ತೆ ಹಚ್ಚದೆ ಇರುವುದೇ ಇಂತಹ ಘಟನೆಗಳು ಹೆಚ್ಚಲು ಕಾರಣವಾಗಿದೆ ಎನ್ನಲಾಗುತ್ತಿದೆ.