ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಿಯಲ್ ಎಸ್ಟೇಟ್ ಉದ್ಯಮಿ ರೈತರ ಜಮೀನು ಹಾಗೂ ಪರಿಶಿಷ್ಟ ಜನಾಂಗದವರ ಸ್ಮಶಾನಕ್ಕೆ ತೆರಳದಂತೆ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಿಸಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಹಂಪಾಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಗ್ರಾಮದ ಸರ್ವೇ ನಂ 67 ಮತ್ತು 68 ರಲ್ಲಿನ ಸ್ಮಶಾನದ ಜಾಗ, ಜೊತೆಗೆ ಸುಮಾರು ಒಂದುವರೆ ಎಕರೆ ಸರ್ಕಾರಿ ಜಮೀನನ್ನು ಬೆಂಗಳೂರು ಮೂಲದ ಮುಕ್ತಾರ್ ಅಹಮದ್ ಎಂಬ ವ್ಯಕ್ತಿ ಒತ್ತುವರಿ ಮಾಡಿಕೊಂಡು ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದಾರೆ. ಈ ಸಂಬಂಧ ತಹಸೀಲ್ದಾರ್ ಗಮನಕ್ಕೂ ತರಲಾಗಿದೆ. ಅವರು ಸಹ ಮೂರ್‍ನಾಲ್ಕು ಬಾರಿ ಸ್ಥಳಕ್ಕೆ ಆಗಮಿಸಿ ಹೋಗಿದ್ದಾರೆ ವಿನಃ ಯಾವುದೇ ಪ್ರಯೋಜವಾಗಿಲ್ಲ ಎಂದು ದೂರಿದರು.
ಸ್ಥಳೀಯ ಮಧ್ಯವರ್ತಿಗಳ ಮೂಲಕ ಗ್ರಾಮದ ಕೆಲ ರೈತರ ಜಮೀನು ಖರೀದಿಸಿಕೊಂಡು ಬಡಾವಣೆ ಮಾಡಲು ಹೊರಟಿದ್ದಾರೆ. ನಮ್ಮ ತಾತ, ಮುತ್ತಾತಂದಿರ ಕಾಲದಿಂದಲೂ ಇದ್ದ ಬಂಡಿದಾರಿಗೆ ಇದೀಗ ಕಾಂಪೌಡ್ ನಿರ್ಮಿಸಿಕೊಂಡಿರುವುದರಿಂದ ಸುಮಾರು 50-60 ಎಕರೆ ಪ್ರದೇಶದ ರೈತರು ತಮ್ಮ ಜಮೀನಿಗೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರು ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಲು ಸಾಧ್ಯವಾಗದೆ ತೆಕ್ಕಲು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪ್ರಶ್ನಿದ ರೈತರ ಮೇಲೆ ತನ್ನ ಹಣ ಬಲ ಪ್ರದರ್ಶನದಿಂದ ಸುಳ್ಳು ಪ್ರಕರಣ ದಾಖಲಿಸಿದ್ದಾನೆ. ಜೊತೆಗೆ ಪರಿಶಿಷ್ಟ ಜನಾಂಗದವರು ಮೃತಪಟ್ಟರೆ ಶವಸಂಸ್ಕಾರ ಮಾಡಲು ತೆರಳಲು ಸಹ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವ್ಯಕ್ತಿ ಸರ್ಕಾರಿ ಜಾಗ, ರೈತರ ಜಮೀನು ಹಾಗೂ ಪರಿಶಿಷ್ಟ ಜನಾಂಗಕ್ಕೆ ಸೇರಿದ್ದ ಸ್ಮಶಾನ ಜಾಗ ಒತ್ತುವರಿ ಮಾಡಿಕೊಡಿರುವ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಅಳತೆ ಮಾಡಿದ ವೇಳೆ ಒತ್ತುವರಿಯಾಗಿರುವುದು ಕಂಡು ಬಂದಿತ್ತು ಎಂದರು.ನಂತರ ಜೆಸಿಬಿ ಮೂಲಕ ಟ್ರಂಚ್ ಮಾಡಿ ಸ್ಥಳ ನಿಗದಿಪಡಿಸಿ ತೆರಳಿದ್ದರು. ಆದರೆ, ಏಕಾಏಕಿ ಟ್ರಂಚ್ ಮುಚ್ಚುವ ಮೂಲಕ ಅಧಿಕಾರಿಗಳಿಗೂ ಬೆಲೆ ಕೊಡುತ್ತಿಲ್ಲ. ಈತ ಉದ್ದಟತನ ಪ್ರದರ್ಶಿಸುತ್ತಿದ್ದಾನೆ. ಇವರಿಗೆ ಸ್ಥಳೀಯ ದಳ್ಳಾಳಿಗಳು ಸಾಥ್ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಗ್ರಾಮಸ್ಥರು ಜೊತೆಗೂಡಿ ಬಂಡಿದಾರಿಗೆ ಅಡ್ಡಲಾಗಿ ನಿರ್ಮಿಸಿದ್ದ ಕಾಂಪೌಂಡನ್ನು ತೆರವುಗೊಳಿಸಿ ಪರಿಶಿಷ್ಟ ಜನಾಂಗಕ್ಕೆ ಸೇರಿದ್ದ ಜಾಗ ಎಂದು ಗ್ರಾಮಸ್ಥರು ನಾಮಫಲಕ ಹಾಕಿದರು. ಈ ವೇಳೆ ಸ್ಥಳಕ್ಕೆ ಪ್ರಶ್ನಿಸಲು ಮುಂದಾದ ಬಿಲ್ಡರ್ ವ್ಯವಸ್ಥಾಪಕನನ್ನು ತರಾಟೆಗೆ ತೆಗೆದುಕೊಂಡು ನಿನ್ನ ಮಾಲೀಕನನ್ನು ಸ್ಥಳಕ್ಕೆ ಕರೆಸುವಂತೆ ತಾಕೀತು ಮಾಡಿ ಆಕ್ರೋಶ ಹೊರ ಹಾಕಿದರು.ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ನಮ್ಮ ಗ್ರಾಮದ ಸಮಸ್ಯೆ ಬಗೆ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹಲವರು ಭಾಗವಹಿಸಿದ್ದರು.