ಕುಕನೂರು: ಭೂಮಿ ಉಳಿಯಲು ಪರಿಸರ ರಕ್ಷಣೆ ಅಗತ್ಯ ಎಂದು ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ.ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಮೋಚಿ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಪಂ, ಗ್ರಾಪಂ, ಕಂದಾಯ ಇಲಾಖೆ ಸಂಯುಕ್ತದಲ್ಲಿ ಜರುಗಿದ ಭೂಮಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿ ಒಂದು ಗ್ರಹ. ಆ ಭೂಮಿ ನಮ್ಮೆಲ್ಲರನ್ನ ಇವತ್ತು ರಕ್ಷಣೆ ಮಾಡುತ್ತದೆ. ಭೂಮಿಯ ಇರದಿದ್ದರೆ ನಾವು ಬದುಕಲು ಸಾಧ್ಯವಿಲ್ಲ. ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಭೂಮಿ ಉಳಿಯುತ್ತದೆ. ಇಲ್ಲದಿದ್ದರೆ ನಮ್ಮನ ರಕ್ಷಣೆ ಮಾಡುತ್ತಿರುವ ಭೂಮಿ ಉಳಿವು ಸಾಧ್ಯವಿಲ್ಲ. ಭೂಮಿ ರಕ್ಷಣೆ ಮಾಡಿ ಪರಿಸರ ರಕ್ಷಿಸಿ ಮತ್ತು ನಮ್ಮ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಪಂ ಇಒ ಸಂತೋಷ ಬಿರಾದರ್ ಪಾಟೀಲ್ ಮಾತನಾಡಿ, ಭೂಮಿ ಮನುಷ್ಯ ಸಂಕುಲ, ಪ್ರಾಣಿ, ಜಲ, ಖನಿಜ, ಅರಣ್ಯ ಸಂಕುಲ ಒಳಗೊಂಡಿದೆ.ಮನುಷ್ಯನಿಗೆ ಅವಶ್ಯಕ ಎಲ್ಲ ಸಂಪನ್ಮೂಲ ಭೂಮಿ ನೀಡುತ್ತದೆ. ಆದರೆ ಮನುಷ್ಯ ಭೂಮಿ ರಕ್ಷಿಸುವುದು ಹೇಗೆ ಎಂದು ವಿಚಾರ ಮಾಡುತ್ತಿಲ್ಲ. ಭೂಮಿಯ ಉಳಿವಿಗಾಗಿ ಶ್ರಮಿಸಬೇಕಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಹೊಂಬಳ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಎಸ್ ಪಾಟೀಲ, ಜಂಟಿ ಕಾರ್ಯದರ್ಶಿ ಹಸನಸಾಬ್ ನದಾಫ್, ಗ್ರಾಪಂ ಪಿಡಿಒ ನೀಲಮ್ಮ, ಮಂಗಲೂರು ಉಪತಹಸೀಲ್ದಾರ ಬಸವರಾಜ, ನ್ಯಾಯಾಲಯದ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ, ವಿನಾಯಕ ಇತರರಿದ್ದರು.