ಎಸ್.ಜಿ. ತೆಗ್ಗಿನಮನಿ
ನರಗುಂದ: ಪಟ್ಟಣದ ಎಪಿಎಂಸಿಯಲ್ಲಿ ಒಂದೇ ವೇ ಬ್ರಿಡ್ಜ್ (ತೂಕದ ಯಂತ್ರ) ಇರುವುದರಿಂದ ರೈತರು ತಾವು ತಂದ ಸರಕನ್ನು ತೂಕ ಮಾಡಿಸಲು ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ತಲೆದೋರಿದೆ.ಹಿಂಗಾರು ಹಂಗಾಮಿನ ಬೆಳೆಗಳನ್ನು ಕಟಾವು ಮಾಡಿ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಪಟ್ಟಣದಲ್ಲಿ ಎಪಿಎಂಸಿ ಒಂದೇ ವೇ ಬ್ರಿಡ್ಜ್ ಇರುವುದರಿಂದ ತಮ್ಮ ಕೆಲಸಗಳನ್ನು ಬಿಟ್ಟು ತೂಕ ಮಾಡಿಸಲು ದಿನವಿಡೀ ಕಾಯುವಂತಾಗಿದೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರ ದವಸ ಧಾನ್ಯಗಳನ್ನು ತೂಕ ಮಾಡಿಸಲು ಅನುಕೂಲವಾಗಲೆಂದು ಸರ್ಕಾರ ಒಂದು ತೂಕದ ಯಂತ್ರ(ವೇ ಬ್ರಿಡ್ಜ್) ನಿರ್ಮಿಸಿದ್ದಾರೆ. ಆದರೆ ಪ್ರತಿದಿನ ನೂರಾರು ರೈತರು ಬೆಳೆಗಳನ್ನು ಮಾರಾಟಕ್ಕಾಗಿ ಟ್ರ್ಯಾಕ್ಟರನಲ್ಲಿ ಸಂಗ್ರಹಿಸಿಕೊಂಡು ಬಂದು ಮಾರುವ ಮುನ್ನ ಮತ್ತು ಮಾರಿದ ನಂತರ ತೂಕ ಮಾಡಿಸಲು ಹೋದರೆ ತೂಕ(ವೇ ಬ್ರಿಡ್ಜ್) ಮಾಡಿಸುವ ಯಂತ್ರ ಒಂದೇ ಇರುವುದರಿಂದ ರೈತರು ಪರದಾಡುವಂತಾಗಿದೆ.ಒಟ್ಟು ಮೂರು ತೂಕದ ಯಂತ್ರ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಒಂದು, ಮತ್ತೊಂದು ಖಾಸಗಿಯವರದ್ದು, ಇನ್ನೊಂದು ತಾಲೂಕಿನ ಕೊಣ್ಣೂರು ಗ್ರಾಮದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ತೂಕದ ಯಂತ್ರ(ವೇ ಬ್ರಿಡ್ಜ್)ಗಳಿವೆ. ಆದರೆ ರೈತರು ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ನರಗುಂದದ ಮುಖ್ಯ ಮಾರುಕಟ್ಟೆಗೆ ಆಗಮಿಸುತ್ತಾರೆ. ಹೀಗಾಗಿ ಮುಖ್ಯ ಮಾರುಕಟ್ಟೆಯಲ್ಲಿ ರೈತರು ತೂಕ ಮಾಡಿಸಲು ಪರದಾಡುತ್ತಿದ್ದಾರೆ. ಪಟ್ಟಣದಲ್ಲಿರುವ ಖಾಸಗಿ ತೂಕ ಯಂತ್ರಕ್ಕೆ ಹೆಚ್ಚಿನ ರೈತರು ತೂಕ ಮಾಡಿಸಲು ಹೋಗುವುದಿಲ್ಲ.
ಪಟ್ಟಣದ ಎಪಿಎಂಸಿಗೆ ನರಗುಂದ ತಾಲೂಕು ಅಷ್ಟೇ ಅಲ್ಲದೇ ಪಕ್ಕದ ನವಲಗುಂದ, ರಾಮದುರ್ಗ, ರೋಣ, ಬಾದಾಮಿ, ಗದಗ ತಾಲೂಕಿನ ನೂರಾರು ಗ್ರಾಮಗಳ ರೈತರು ಬರುತ್ತಾರೆ. ಇದರಿಂದ ಪ್ರತಿದಿನ ಅಂದಾಜು 500ರಿಂದ 600 ಟ್ರ್ಯಾಕ್ಟರಗಳು ಈ ಮಾರುಕಟ್ಟೆಗೆ ಆಗಮಿಸುವುದರಿಂದ ತೂಕದ ಯಂತ್ರ ಒಂದೇ ಇರುವುದರಿಂದ ಅನ್ನದಾತರಿಗೆ ತೀವ್ರ ತೊಂದರೆಯಾಗಿದೆ.
ಎಪಿಎಂಸಿ ಅಧಿಕಾರಿಗಳು ಮುಖ್ಯ ಮಾರುಕಟ್ಟೆಯಲ್ಲಿ ಇನ್ನೊಂದು ತೂಕದ ಯಂತ್ರ ಅಳವಡಿಸಿ ತೂಕ ಮಾಡಿಕೊಳ್ಳಲು ಅನುಕೂಲ ಮಾಡಬೇಕು ಎಂಬುದು ರೈತರ ಬೇಡಿಕೆಯಾಗಿದೆ. ದಿನವಿಡೀ ಕಾಯಬೇಕು: ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳು ಮಲಪ್ರಭಾ ಕಾಲುವೆ ಹೊಂದಿರುವ ನೀರಾವರಿ ಪ್ರದೇಶವಾಗಿರುವುದರಿಂದ ರೈತರು ಪ್ರತಿವರ್ಷ ಉತ್ತಮ ಇಳುವರಿ ತೆಗೆಯುತ್ತಿದ್ದಾರೆ. ಆದರೆ ಪಟ್ಟಣದ ಎಪಿಎಂಸಿಯಲ್ಲಿ ತೂಕದ ಯಂತ್ರ ಒಂದೇ ಇರುವುದರಿಂದ ತೂಕ ಮಾಡಿಸಲು ದಿನವಿಡೀ ಕಾಯಬೇಕಾಗಿದೆ. ಆದ್ದರಿಂದ ಅಧಿಕಾರಿಗಳು ಇನ್ನೊಂದು ತೂಕದ ಯಂತ್ರ ನಿರ್ಮಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಉಮೇಶ ಮರ್ಚಪ್ಪನವರ ತಿಳಿಸಿದರು.
ತೂಕ ಮಾಡಿಸಲು ಒತ್ತಡ: ಮುಖ್ಯ ಮಾರುಕಟ್ಟೆಯಲ್ಲಿ ಒಂದೇ ತೂಕದ ಯಂತ್ರವಿದೆ. ಒಂದು ವಾಹನ ತೂಕ ಮಾಡಿಸಲು 50 ಫೀ ಸರ್ಕಾರ ನಿಗದಿ ಮಾಡಿದೆ. ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ಕಟಾವು ಮಾಡಿದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಮಾರುಕಟ್ಟೆಗೆ ಬರುವುದರಿಂದ ತೂಕ ಮಾಡಿಸಲು ಒತ್ತಡ ಉಂಟಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನರ ತಿಳಿಸಿದರು.