ಧಾರವಾಡ:

ಉತ್ತಮ ವಿದೇಶಾಂಗದ ನೀತಿಯಿಂದ ಯುದ್ಧದಂತಹ ಅನಿರೀಕ್ಷಿತ ಸನ್ನಿವೇಶ ಎದುರಿಸಲು ಸಾಧ್ಯ ಎಂದು ಪ್ರಾಚಾರ್ಯ ಪ್ರೊ. ವಿ.ಎಸ್. ವಸ್ತ್ರದ ಹೇಳಿದರು.

ಕರ್ನಾಟಕ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗವು ಮಧ್ಯಪ್ರಾಚ್ಯ ಯುದ್ಧ: ಭಾರತದ ವಿದೇಶಾಂಗ ನೀತಿಯ ಪಲ್ಲಟಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಯ ನಡುವಿನ ಬಿಕ್ಕಟ್ಟುಗಳು ವಿಷಯ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಾಗರಿಕತೆಯ ಕುರುಹು ಹೊಂದಿದ್ದು, ಅನೇಕ ಖನಿಜ ತೈಲ ಸಂಪನ್ಮೂಲ ಹೊಂದಿವೆ ಎಂದ ಅವರು, ಅನಿರೀಕ್ಷಿತ ಸನ್ನಿವೇಶದ ವೇಳೆ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಉತ್ತಮ ವಿದೇಶಾಂಗ ನೀತಿ ಯೋಜನೆ ರೂಪಿಸುವುದು ಅಗತ್ಯವಿದೆ. ದೇಶಗಳು ಜಾಗತಿಕ ಮಟ್ಟದಲ್ಲಿ ಸೈದ್ಧಾಂತಿಕ ನಿಲುವು ಹೊಂದಿರಬೇಕು. ಮಧ್ಯಪ್ರಾಚ್ಯ ಯುದ್ಧದ ಸನ್ನಿವೇಶದಲ್ಲಿ ವಿದೇಶಾಂಗ ನೀತಿಯ ಪಲ್ಲಟವಾಗಿದೆ ಎಂದರು.

ಯುದ್ಧದಿಂದ ಮಾನವ ಹಕ್ಕುಗಳು ಉಲ್ಲಂಘನೆ, ಸಾವು-ನೋವು ಸಂಭವಿಸಿ ಆಯಾ ದೇಶಗಳ ಮಾನಸಿಕ ಕ್ಷಮತೆ ಕಡಿಮೆ ಆಗಿ ಅಂತಾರಾಷ್ಟ್ರೀಯ ಬಿಕ್ಕಟ್ಟು ಸಂಭವಿಸುತ್ತವೆ. ಅಮೆರಿಕದ ಕೆಲವು ಆಕ್ರಮಣಕಾರಿ ಧೋರಣೆಯಿಂದ ಜಾಗತಿಕ ಮಟ್ಟದಲ್ಲಿ ಅರಾಜಕತೆ ಉಂಟಾಗಿದೆ ಎಂದರು. ಜಾಗತಿಕವಾಗಿ ಯುದ್ಧಗಳು ನಡೆದಾಗ ದೇಶದ ವಿದೇಶಾಂಗ ಇಲಾಖೆ ಮತ್ತು ವಿದೇಶಾಂಗ ನೀತಿ ಹೆಚ್ಚು ಮಹತ್ವ ಪಡೆಯುತ್ತದೆ ಎಂದು ತಿಳಿಸಿದೆ.


ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಶೇ. 50ರಷ್ಟು ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದ ಕೆಸಿಡಿ ಪ್ರಾಚಾರ್ಯ ಡಾ.ಐ.ಸಿ. ಮುಳಗುಂದ, ಜಾಗತಿಕ ಸಮಸ್ಯೆ ಆಧರಿಸಿ ಯುದ್ಧಗಳು ನಡೆದಿದ್ದು ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುರೇಶ ಹುಲ್ಲಣ್ಣವರ, ಜಗತ್ತಿನಲ್ಲಿ ಯಾವುದೇ ರಾಷ್ಟ್ರಗಳ ಮಧ್ಯೆ ಯುದ್ಧಗಳು ನಡೆದಾಗ ಇತರ ರಾಷ್ಟ್ರಗಳ ಮೇಲೆ ಪ್ರತ್ಯಕ್ಷ ಮತ್ತು ಅಪರೋಕ್ಷವಾಗಿ ಪರಿಣಾಮ ಬಿರುತ್ತವೆ. ಪ್ರಮುಖವಾಗಿ ಆರ್ಥಿಕ, ವ್ಯಾಪಾರ, ಆಮದು ಮತ್ತು ರಫ್ತುಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಅನಿರೀಕ್ಷಿತ ಸಂದರ್ಭ ಎದುರಿಸಲು ದೇಶ ಸನ್ನದ್ಧವಾಗಿರಬೇಕು ಎಂದು ಹೇಳಿದರು.

ರಾಜ್ಯಶಾಸ್ತ್ರ ವಿಭಾಗದ ಕಾರ್ಯಾಧ್ಯಕ್ಷ ಡಾ. ಎಂ.ಬಿ. ದಳಪತಿ, ಡಾ. ವೀರೇಂದ್ರ ಯಾದವ, ಡಾ. ಚನ್ನಬಸು ಐನಳ್ಳಿ, ಡಾ. ವಿ. ಜಗದೀಶ, ಡಾ. ಜಾಕೀರ ಗುಳಗುಂಡಿ, ಡಾ. ವಿ.ಪಿ. ಸುಣಗಾರ, ಡಾ. ಎಸ್.ಎಸ್. ಶ್ರೀಗಿರಿ, ಡಾ. ಜಗದೀಶ ಮಾನೆ, ಡಾ. ಹನುಮಂತ ಬಂಟನೂರ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಸುದರ್ಶನ, ಕಾವೇರಿ ಹಾಜರಿದ್ದರು.