ಸಾರಾಂಶ
ಗಂಗಾವತಿ ತಾಲೂಕಿನ ಆಚಾರ ನರಸಾಪುರ ಗ್ರಾಮದಲ್ಲಿ 1.14 ಎಕರೆ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ವಿಷ ಕುಡಿಸಿದ ಪ್ರಕರಣದಲ್ಲಿ ಓರ್ವ ವ್ಯಕ್ತಿ ಸೋಮವಾರ ಸಂಜೆ ಮೃತಪಟ್ಟಿದ್ದು, ಇನ್ನೋರ್ವ ವ್ಯಕ್ತಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಂಗಾವತಿ:
ತಾಲೂಕಿನ ಆಚಾರ ನರಸಾಪುರ ಗ್ರಾಮದಲ್ಲಿ 1.14 ಎಕರೆ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ವಿಷ ಕುಡಿಸಿದ ಪ್ರಕರಣದಲ್ಲಿ ಓರ್ವ ವ್ಯಕ್ತಿ ಸೋಮವಾರ ಸಂಜೆ ಮೃತಪಟ್ಟಿದ್ದು, ಇನ್ನೋರ್ವ ವ್ಯಕ್ತಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ವೀರಪ್ಪ ಹನುಮಂತಪ್ಪ ಹಿರೇಕುರಬರ (84) ಮೃತಪಟ್ಟಿದ್ದು ಇವರ ಪುತ್ರ ಯಲ್ಲಪ್ಪ ವೀರಪ್ಪ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಆಚಾರ ನರಸಾಪುರ ಗ್ರಾಮದ ಸರ್ವೆ ನಂಬರ್ 69ರಲ್ಲಿ ವೀರಪ್ಪ ಹಿರೇಕುರಬರ, ಪುತ್ರ ಯಲ್ಲಪ್ಪ ಸೇರಿದಂತೆ ವನಜಾಕ್ಷಿ ಈರಣ್ಣ ಮಾಂತಗೊಂಡ, ಮಹಾಬಲೇಶ ಮಾಂತಗೊಂಡ, ಸತೀಶ ಮಾಂತಗೊಂಡ, ಗೋವಿಂದ ಮಾಂತಗೊಂಡ, ದೇವಿಪ್ರಸಾದ ಮಾಂತಗೊಂಡ, ಮಂಜುನಾಥ ಎಂ. ಹನುಮಂತಪ್ಪ, ಬಸವರಾಜ ಎಂ. ಹನುಮಂತಪ್ಪ, ಪ್ರೇಮಾ ಬಸವರಾಜ ವಡ್ಡರಹಟ್ಟಿ ಮಧ್ಯೆ ಭೂ ವಿವಾದವಿತ್ತು. ವನಜಾಕ್ಷಿ ಗುಂಪಿನವರು ಏ.19ರಂದು ಗದ್ದೆಯಲ್ಲಿದ್ದ ಭತ್ತ ಕಟಾವು ಮಾಡಲು ಹೋಗಿದ್ದ ಸಂದರ್ಭದಲ್ಲಿ ಎರಡು ಗುಂಪಿನ ಮಧ್ಯೆ ವಿವಾದ ಸಂಭವಿಸಿದೆ. ಆಗ ವನಜಾಕ್ಷಿ ಮಾಂತಗೊಂಡ ಗುಂಪಿನಲ್ಲಿದ್ದ ಸತೀಶ ಮಾಂತಗೊಂಡ ಕೀಟನಾಶಕವನ್ನು ತನ್ನ ತಂದೆ ವೀರಪ್ಪ, ಸಹೋದರ ಯಲ್ಲಪ್ಪನಿಗೆ ಬಲವಂತವಾಗಿ ಕುಡಿಸಿದ್ದಾರೆಂದು ವೀರಪ್ಪನ ದ್ವಿತೀಯ ಪುತ್ರ ಹನುಮಂತಪ್ಪ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತೀವ್ರ ಅಸ್ವಸ್ಥಗೊಂಡ ವೀರಪ್ಪ ಮತ್ತು, ಯಲ್ಲಪ್ಪ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಧಿಕಾರಿಗಳ ಭೇಟಿ:
ಸೋಮವಾರ ಮೃತಪಟ್ಟ ವೀರಪ್ಪ ಹಿರೇಕುರಬರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ ತಹಸೀಲ್ದಾರ್ ಯು. ನಾಗರಾಜ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.