ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶೋಷಿತ ವರ್ಗದ ಜಮೀನನ್ನು ಯಾರೇ ಪ್ರಭಾವಿಗಳು ಅತಿ ಕ್ರಮಣ ಮಾಡಿದರೂ ಜಿಲ್ಲಾಡಳಿತದ ಮೂಲಕ ನಿರ್ಧಾಕ್ಷ್ಯವಾಗಿ ತೆರವುಗೊಳಿಸುವ ಪ್ರಮಾಣಿಕ ಕೆಲಸ ಮಾಡುತ್ತೇನೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಭರವಸೆ ನೀಡಿದರು. ಜಿಲ್ಲಾಡಳಿತದಿಂದ ಶುಕ್ರವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರಿನ ಶಾಂತಿನಗರದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಹೆಸರಿನಲ್ಲಿ ಮೀಸಲಿಟ್ಟ 14 ಗುಂಟೆ ಜಾಗವನ್ನು ಕಳೆದ 20 ವರ್ಷದಿಂದ ತೆರವುಗೊಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ತಹಸೀಲ್ದಾರ್‌ ರೇಷ್ಮಾ ಅವರ ನೇತೃತ್ವರದಲ್ಲಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಎಲ್ಲರೊಂದಿಗೆ ಚರ್ಚೆ ಮಾಡಿ ತೆರವುಗೊಳಿಸಲಾದ ಜಾಗದಲ್ಲಿ ಬಡವರಿಗೆ ಅನುಕೂಲಕರ ಯಾವುದೇ ಒಂದು ಯೋಜನೆ ಮಾಡುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು. ಇನ್ನೂ ಗೌರನಹಳ್ಳಿಯಲ್ಲಿ 4.38 ಗುಂಟೆ ಜಾಗವನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಅಧ್ಯಾಯನ ಕೇಂದ್ರ ಸ್ಥಾಪನೆ ಮಾಡುವುದಕ್ಕೆ ಸಮಾಜಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಅಲ್ಲಿ ಶೀಘ್ರದಲ್ಲಿ ಅಂಬೇಡ್ಕರ್‌ ಅಧ್ಯಾಯನ ಸಂಸ್ಥೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಪ್ರೀತಿ, ಶಾಂತಿ, ದಯೆ ಮಾರ್ಗದಲ್ಲಿ ಸಮಾಜ ನಡೆಯಬೇಕೆಂಬ ಉದ್ದೇಶದಿಂದ ಭಗವಾನ್‌ ಬುದ್ಧ ಜಯಂತಿ ಆಚರಣೆ ಮಾಡಲಾಗುತ್ತಿದೆ. ಗೌತಮ ಬುದ್ಧ ಮಾನವನ ದಾಹವೇ ದುಃಖಕ್ಕೆ ಮೂಲ, ಆಸೆಯೇ ದುಃಖದ ಮೂಲ. ಒಳ್ಳೆಯ ವಿಚಾರ, ಗುರಿ, ನಡೆ-ನುಡಿ, ಧ್ಯಾನದಿಂದ ಶಾಂತಿ ಮಾರ್ಗ ಪಡೆಯಬಹುದು ಎಂದು ಸಮಾಜಕ್ಕೆ ಬೋಧಿಸಿದರು.

ಬುದ್ಧ, ಬಸವ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ತಮ್ಮ ಇಡೀ ಬದುಕನ್ನು ವರ್ಣಾಶ್ರಮ ವ್ಯವಸ್ಥೆ ಮತ್ತು ಮೂಢನಂಬಿಕೆ ವಿರೋಧಿ ಹೋರಾಟಕ್ಕೆ ಮೀಸಲಿಟ್ಟರು. ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲವಯ್ಯ ಎಂದು ಬಸವಣ್ಣ ಹೇಳಿದರೆ ಅಂಬೇಡ್ಕರ್‌ ಸಮ ಸಮಾಜದ ನಿರ್ಮಾಣಕ್ಕೆ ಶೋಷಿತರಿಗೆ ವಿದ್ಯಾಭ್ಯಾಸ ನೀಡಬೇಕು ಎಂದರೆ ಈ ಮಹಾನ್‌ ಪುರುಷರು ತಮ್ಮದೇ ಯಾದ ಸಂದೇಶಗಳ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.


6ನೇ ಶತಮಾನದಲ್ಲಿ ಬುದ್ಧ, 12ನೇ ಶತಮಾನದಲ್ಲಿ ಬಸವಣ್ಣ ಹೇಳಿದ ಸಂದೇಶಗಳನ್ನು 19ನೇ ಶತಮಾನದಲ್ಲಿ ಡಾ. ಅಂಬೇಡ್ಕರ್‌ ಸಂವಿಧಾನದ ಮೂಲಕ ನಮ್ಮೆಲ್ಲರಿಗೂ ಅಧಿಕೃತವಾಗಿ ಕೊಡಿಸುವ ಕೆಲಸ ಮಾಡಿದರು. ಈ ಮೂಲಕ ಮಹಿಳೆಯರಿಗೆ ಶೋಷಿತ ವರ್ಗದ ಎಲ್ಲರಿಗೂ ಸಮಾಜದಲ್ಲಿ ಸ್ಥಾನಮಾನ ಸಿಕ್ಕಿದೆ ಎಂದರು.

ಬುದ್ಧನ ಕುರಿತು ಉಪನ್ಯಾಸ ಐಡಿಎಸ್‌ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಜೆ.ವಸಂತಕುಮಾರ್, ಯುದ್ಧ ಪೀಡಿತ ಇಂದಿನ ಪ್ರಪಂಚದಲ್ಲಿ ಭಗವಾನ್‌ ಬುದ್ಧನ ಅವರ ವಿಚಾರಧಾರೆಗಳೇ ಪರಿಹಾರ. ಡಾ.ಬಿಆರ್‌ ಅಂಬೇಡ್ಕರ್‌ ಕಣ್ಣಿನಲ್ಲಿ ಬುದ್ಧನ ವಿಚಾರಧಾರೆ ಕಾಣಬಹುದು. ಅಂಬೇಡ್ಕರ್‌ ಕೇವಲ ರಾಜಕೀಯಕ್ಕೆ ಸಂವಿಧಾನ ನೀಡಿಲ್ಲ. ಬದಲಾಗಿ ಸಾಮಾಜಿಕ, ಸಾಂಸ್ಕೃತಿಕ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.

ಭಗವಾನ್‌ ಬುದ್ಧ ಎಂದಿಗೂ ಮಾಂಸಾಹಾರ ಸೇವನೆ ವಿರೋಧಿಸಲಿಲ್ಲ. ಜೀವ ಹಿಂಸೆ ಮಾಡಬೇಡಿ ಎಂದು ಹೇಳಿದ್ದರು. ಬುದ್ಧ ಸಹ ಮಾಂಸ ಆಹಾರ ಸೇವನೆ ಮಾಡುತ್ತಿದ್ದರು, ಅವರ ಮಾಂಸ ಆಹಾರ ಸೇವನೆ ಮಾಡಿ, ಅಜೀರ್ಣವಾಗಿ ಮೃತಪಟ್ಟರು ಎಂಬುದನ್ನು ನಾವು ಗಮನಿಸಬೇಕು. ಅವರನ್ನು ಮಹಿಳಾ ವಿರೋಧ ಎನ್ನಲಾಗಿತ್ತು. ಆದರೆ, ಬುದ್ಧನ ಆಶ್ರಮದಲ್ಲಿ 73 ಮಂದಿ ಮಹಿಳಾ ಸಂತರಿದ್ದರು. ಬುದ್ಧ ಅವರ ಹಲವು ವಿಚಾರಗಳನ್ನು ತಿರುಚಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾರಂಭವನ್ನು ಕೇಂದ್ರ ಪರಿಸರ ಮಾಲಿನ್ಯ ಮೌಲ್ಯಮಾಪನ ಮಂಡಳಿ ಅಧ್ಯಕ್ಷ ಎ.ಎನ್‌.ಮಹೇಶ್‌ ಉದ್ಘಾಟಿಸಿದರು. ಸಿಡಿಎ ಅಧ್ಯಕ್ಷ ಮಂಜೇಗೌಡ, ಭಾರತೀಯ ಬುದ್ಧ ಧರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ಅನಿಲ್‌ ಕುಮಾರ್‌ ಸೇರಿದಂತೆ ಮೊದಲಾದವರಿದ್ದರು.

-- ಕೋಟ್‌ --

ಚೀನಾ ಸೇರಿದಂತೆ ವಿಶ್ವದ ಹಲವು ದೇಶದಲ್ಲಿ ದೊಡ್ಡ ದೊಡ್ಡ ಬುದ್ಧನ ವಿಗ್ರಹ ಸ್ಥಾಪಿಸಲಾಗಿದೆ. ವಿಗ್ರಹಕ್ಕೆ ಮಾತ್ರವಲ್ಲಿ ವಿಚಾರಧಾರೆಗಳಿಗೆ ಶಕ್ತಿ ಇದೆ. ಮುಂದಿನ ಪೀಳಿಗೆ ಅವರ ವಿಚಾರಧಾರೆ ತಿಳಿಸುವ ಮೂಲಕ ಉಳಿಸಿ ಬೆಳೆಸುವ ಕೆಲಸ ಮಾಡೋಣ.

ಎಚ್‌.ಡಿ.ತಮ್ಮಯ್ಯ, ಶಾಸಕರು, ಚಿಕ್ಕಮಗಳೂರು