ಗಜೇಂದ್ರಗಡ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಅಂತಿಮ

| Published : Dec 25 2024, 12:48 AM IST

ಗಜೇಂದ್ರಗಡ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಅಂತಿಮ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಜಿ.ಎಸ್. ಪಾಟೀಲ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ ಜಾಗದ ಪರಿಶೀಲನೆಗಾಗಿ ಗುಡ್ಡದ ಮೇಲೆ ಸಂಚಾರ ನಡೆಸಿ, ಪಟ್ಟಣದ ಗುಡ್ಡದ ಮೇಲೆ (ಸರ್ವೇ ನಂ. ೧೦೭/೨/೨ಬಿ) ಒಟ್ಟು ೮ ಎಕರೆ ಜಮೀನನ್ನು ಪರಿಶೀಲಿಸಿದ್ದಾರೆ.

ಗಜೇಂದ್ರಗಡ: ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣ ಭರವಸೆ ಈಡೇರಿಸಲು ಶಾಸಕ ಜಿ.ಎಸ್. ಪಾಟೀಲ ಹಾಗೂ ತಾಲೂಕಾಡಳಿತ ಜಾಗದ ಹುಡುಕಾಟ ನಡೆಸಿದ್ದರು. ಈಗ ಕ್ರೀಡಾಂಗಣ ನಿರ್ಮಾಣಕ್ಕಾಗಿ ೮ ಎಕರೆ ಜಮೀನನ್ನು ಅಂತಿಮಗೊಳಿಸಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.

ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎನ್ನುವ ಕೂಗಿಗೆ ಸ್ಪಂದಿಸಿರುವ ತಾಲೂಕಾಡಳಿತ, ಈಗಾಗಲೇ ಎರಡ್ಮೂರು ಜಾಗ ಹುಡುಕಿ ಸಾಧಕ-ಬಾಧಕ ಚರ್ಚಿಸಿದೆ. ಆದರೆ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಅಂತಿಮಗೊಳಿಸಲು ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಂದರೆ ಎದುರಾಗಿತ್ತು. ಸೋಮವಾರ ಸಂಜೆ ಶಾಸಕ ಜಿ.ಎಸ್. ಪಾಟೀಲ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ ಜಾಗದ ಪರಿಶೀಲನೆಗಾಗಿ ಗುಡ್ಡದ ಮೇಲೆ ಸಂಚಾರ ನಡೆಸಿ, ಪಟ್ಟಣದ ಗುಡ್ಡದ ಮೇಲೆ (ಸರ್ವೇ ನಂ. ೧೦೭/೨/೨ಬಿ) ಒಟ್ಟು ೮ ಎಕರೆ ಜಮೀನನ್ನು ಪರಿಶೀಲಿಸಿದ್ದಾರೆ.

ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಜಾಗದ ಮಾಹಿತಿ ಹಾಗೂ ಅಗತ್ಯ ದಾಖಲೆ ಒದಗಿಸಿದ್ದಾರೆ. ಹೀಗಾಗಿ ಪಟ್ಟಣದ ಗುಡ್ಡದ ಮೇಲೆ ಪರಿಶೀಲಿಸಿರುವ ಜಾಗವೇ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಅಂತಿಮವಾಗಲಿದೆ ಎನ್ನುವ ಮಾತು ಕೇಳಿ ಬಂದಿವೆ. ಪಟ್ಟಣದ ಕ್ರೀಡಾಪಟುಗಳ ಹಾಗೂ ಕ್ರೀಡಾಸಕ್ತರ ಕನಸನ್ನು ಸಾಕಾರಾಗೊಳಿಸಲು ತಾಲೂಕಾಡಳಿತ ಮುಂದಾಗಿರುವುದು ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಶಾಸಕ ಜಿ.ಎಸ್. ಪಾಟೀಲ ಜತೆಗೆ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ಮುಖಂಡರಾದ ಸಿದ್ದಪ್ಪ ಬಂಡಿ, ಅರ್ಜುನ ರಾಠೋಡ, ಶ್ರೀಧರ ಬಿದರಳ್ಳಿ, ವಿ.ಬಿ. ಸೋಮನಕಟ್ಟಿಮಠ, ಅರಿಹಂತ ಬಾಗಮಾರ, ಹಸನ ತಟಗಾರ, ಪಾಶಾ ಹವಾಲ್ದಾರ ಇತರರು ಇದ್ದರು.