ಎತ್ತಿನಹೊಳೆಗೆ ಭೂಮಿ: ಪರಿಹಾರಕ್ಕೆ ಅರ್ಜಿ ಸಲ್ಲಿಸಿ

| Published : Mar 01 2025, 01:03 AM IST

ಸಾರಾಂಶ

ತಿಪಟೂರು ಉಪವಿಭಾಗ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಗಾಗಿ ರೈತರು ತಮ್ಮ ಭೂಮಿ, ಕಟ್ಟಡಗಳನ್ನು ಕಳೆದುಕೊಂಡಿದ್ದು ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಲ ರೈತರು ಭೂಸ್ವಾಧೀನವಾಗಿರುವ ತಮ್ಮ ಜಮೀನುಗಳ ಅವಶ್ಯಕ ದಾಖಲಾತಿಗಳನ್ನು ನೀಡದ ಕಾರಣ ಕೆಲವರಿಗೆ ಪರಿಹಾರ ನೀಡಲಾಗಿಲ್ಲ. ನಗರದ ತಾಲೂಕು ಆಡಳಿತ ಸೌಧದಲ್ಲಿ ಒಂದು ವಾರಗಳ ಕಾಲ ಅಭಿಯಾನ ಹಮ್ಮಿಕೊಂಡಿದ್ದು ಅರ್ಹ ರೈತರು ತಮ್ಮ ದಾಖಲಾತಿಗಳನ್ನು ಪಡೆದುಕೊಳ್ಳಬೇಕೆಂದು ಎಂದು ಉಪವಿಭಾಗಾಧಿಕಾರಿ ಸಪ್ತಶ್ರೀ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ತಿಪಟೂರು ಉಪವಿಭಾಗ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಗಾಗಿ ರೈತರು ತಮ್ಮ ಭೂಮಿ, ಕಟ್ಟಡಗಳನ್ನು ಕಳೆದುಕೊಂಡಿದ್ದು ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಲ ರೈತರು ಭೂಸ್ವಾಧೀನವಾಗಿರುವ ತಮ್ಮ ಜಮೀನುಗಳ ಅವಶ್ಯಕ ದಾಖಲಾತಿಗಳನ್ನು ನೀಡದ ಕಾರಣ ಕೆಲವರಿಗೆ ಪರಿಹಾರ ನೀಡಲಾಗಿಲ್ಲ. ನಗರದ ತಾಲೂಕು ಆಡಳಿತ ಸೌಧದಲ್ಲಿ ಒಂದು ವಾರಗಳ ಕಾಲ ಅಭಿಯಾನ ಹಮ್ಮಿಕೊಂಡಿದ್ದು ಅರ್ಹ ರೈತರು ತಮ್ಮ ದಾಖಲಾತಿಗಳನ್ನು ಪಡೆದುಕೊಳ್ಳಬೇಕೆಂದು ಎಂದು ಉಪವಿಭಾಗಾಧಿಕಾರಿ ಸಪ್ತಶ್ರೀ ತಿಳಿಸಿದರು. ನಗರದ ತಾಲೂಕು ಆಡಳಿತದ ಸೌಧದಲ್ಲಿ ಎತ್ತಿನಹೊಳೆ ಯೋಜನೆಗೆ ಭೂಮಿ ಬಿಟ್ಟುಕೊಟ್ಟ ರೈತರಿಗೆ ಪರಿಹಾರ ಹಣ ಪಾವತಿ ಬಗ್ಗೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಎತ್ತಿನಹೊಳೆ ಯೋಜನೆ ಕಾಮಗಾರಿಯೂ ಪ್ರಗತಿಯಲ್ಲಿದ್ದು ಆದರೆ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕುಗಳಿಗೆ ಸಂಬಂದಿಸಿದಂತೆ ಕೆಲ ರೈತರ ಭೂಮಿಯ ಅಗತ್ಯ ದಾಖಲಾತಿ ನೀಡದ ಕಾರಣ ಅವರಿಗೆ ಸೂಕ್ತ ಪರಿಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ತಿಪಟೂರು ತಾಲೂಕಿನಲ್ಲಿ ಯೋಜನೆ ಹಾಯ್ದು ಹೋಗಿರುವ 27 ಗ್ರಾಮಗಳ ಪೈಕಿ 1029 ಖಾತೆದಾರರಿದ್ದು ಇದರಲ್ಲಿ 695 ರೈತರಿಗೆ ಹಣ ನೀಡಲಾಗಿದ್ದು ಉಳಿದ 334 ರೈತರಿಗೆ ಹಣ ಪಾವತಿಯಾಗಬೇಕಿದೆ. ಒಟ್ಟು 59ಕೋಟಿ 53ಲಕ್ಷದ 390 ರುಬಾಕಿ ಇದೆ. ಅದರಂತೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 12 ಗ್ರಾಮಗಳ ಪೈಕಿ 402 ಖಾತೆದಾರರಿದ್ದು ಅದರಲ್ಲಿ 300ರೈತರಿಗೆ ಹಣ ನೀಡಿದ್ದು ಉಳಿದ 102 ರೈತರು ಅಗತ್ಯ ದಾಖಲಾತಿ ನೀಡದ ಕಾರಣ ಹಣ ಪಾವತಿ ಮಾಡಲಾಗಿಲ್ಲ. ಒಟ್ಟು 17ಕೋಟಿ16ಲಕ್ಷದ 23ಸಾವಿರದ 828ರು ಬಾಕಿ ಇದೆ. ಭೂಮಿ ಕಳೆದುಕೊಂಡ ಕೆಲ ರೈತರು ಯಾವ ಕಾರಣಕ್ಕೆ ದಾಖಲಾತಿ ನೀಡಿಲ್ಲ ಎಂಬುದು ತಿಳಿಯುತ್ತಿಲ್ಲ. ರೈತರು ಯಾವುದೇ ದಾಖಲಾತಿ ಬಗ್ಗೆ ಗೊಂದಲವಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಕೂಡಲೆ ಅವರಿಗೆ ದಾಖಲಾತಿ ಒದಗಿಸಲಾಗುವುದು. ಇಂತಹ ರೈತರಿಗಾಗಿಯೇ ಎರಡನೇ ಬಾರಿ ಅಭಿಯಾನ ಕೈಗೊಳ್ಳಲಾಗಿದೆ. ಅಲ್ಲದೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಪ್ರಚಾರ ಸೇರಿದಂತೆ ಅಗತ್ಯ ಗ್ರಾಮಗಳಿಗೆ ಭೇಟಿ ಮಾಡಲಾಗುವುದು. ಐದು ವರ್ಷದ ಪಹಣಿ, ಎಂ.ಆರ್, ಇಸಿ, ಆಧಾರ್‌ಕಾರ್ಡ್, ಭಾವಚಿತ್ರ, ಬಾಂಡ್‌ಪೇಪರ್, ವಂಶವೃಕ್ಷ, ಕಂದಾಯ ರಶೀದಿ, ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದರೆ ಸಾಲ ತಿರುವಳಿ ಪತ್ರ ಸೇರಿದಂತೆ ರೈತರು 14 ದಾಖಲಾತಿಗಳನ್ನು ನೀಡಬೇಕು. ಭೂಮಿ ಬಿಟ್ಟುಕೊಟ್ಟ ರೈತರಿಗೆ ಸೂಕ್ತ ಪರಿಹಾರ ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಕೂಡಲೆ ಈ ರೈತರು ಅಭಿಯಾನಕ್ಕೆ ಬಂದು ದಾಖಲಾತಿ ನೀಡಿದರೆ ನಿಮ್ಮ ಖಾತೆಗೆ ಕೂಡಲೆ ಹಣ ವರ್ಗಾವಣೆ ಮಾಡಲಾಗುವುದು ಎಂದರು. ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್ ಮಾತನಾಡಿ, ಆಗಸ್ಟ್ 2025ರೊಳಗೆ ಎತ್ತಿನಹೊಳೆ ಕಾಮಗಾರಿ ಮುಗಿಸಿ ನೀರು ಪೂರೈಸುವ ಗುರಿ ಹೊಂದಲಾಗಿದೆ. ಈಗಾಗಲೇ ಶೇ.70ರಷ್ಟು ಹಣವನ್ನು ಫಲಾನುಭವಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಕಾಮಗಾರಿಯೂ ಸಹ ಭರದಿಂದ ಸಾಗುತ್ತಿದ್ದು ಇದಕ್ಕೆ ಕಂದಾಯ ಸಿಬ್ಬಂದಿಗಳ ಸಹಕಾರವೂ ಕಾರಣ. ಕೆಲ ರೈತರು ಸಣ್ಣ ಪುಟ್ಟ ದಾಖಲಾತಿಗಳನ್ನು ಒದಗಿಸುವಲ್ಲಿ ತಡವಾಗುತ್ತಿದೆ. ಆದ್ದರಿಂದ ಮತ್ತೊಮ್ಮೆ ಅಭಿಯಾನ ಕೈಗೊಳ್ಳಲಾಗಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ತಿಪಟೂರು ತಾಲೂಕಿನಲ್ಲಿ ಈ ಯೋಜನೆಗಾಗಿ ಒಟ್ಟು 254ಕೋಟಿ ರುಗಳಲ್ಲಿ 194ಕೋಟಿರು ಹಣ ಪಾವತಿ ಮಾಡಲಾಗಿದ್ದು 59.5ಕೋಟಿ ರು ಬಾಕಿ ಇದೆ ಬಾಕಿ ಇರುವ ರೈತರು ದಾಖಲಾತಿ ನೀಡಿದರೆ ಇನ್ನೊಂದು ವಾರದೊಳಗೆ ಯೋಜನೆಯ ಹಣವನ್ನು ಪಾವತಿಸಲಾಗುವುದು ಎಂದರು. ಸಭೆಯಲ್ಲಿ ಎಕ್ಸಿಕ್ಯೂಟಿವ್ ಎಂನಿಯರ್ ಯೋಗೀಶ್, ಎಸ್‌ಎಲ್‌ಒ ಕಚೇರಿಯ ಶಿರಸ್ತೇದಾರರಾದ ಜಯಪ್ರಕಾಶ್, ಮುರುಳೀಧರ್ ಸೇರಿದಂತೆ ಕಂದಾಯಾಧಿಕಾರಿಗಳು ಹಾಜರಿದ್ದರು.